ಕರ್ನಾಟಕ

ಒತ್ತಡಕ್ಕೆ ಮಣಿದ ಸರ್ಕಾರ: ಬಿಸಿಯೂಟ ನೌಕರರ ಮುಷ್ಕರ ವಾಪಸ್‌

Pinterest LinkedIn Tumblr

ಬೆಂಗಳೂರು: ತಿಂಗಳಿಗೆ ₹ 3,000 ಕನಿಷ್ಠ ವೇತನ ನೀಡುವ ಇಂಗಿತವನ್ನು ರಾಜ್ಯ ಸರ್ಕಾರ ಶುಕ್ರವಾರ ರಾತ್ರಿ ವ್ಯಕ್ತಪಡಿಸಿರುವುದರಿಂದ ಬಿಸಿಯೂಟ ನೌಕರರು ಪ್ರತಿಭಟನೆಯನ್ನು ವಾ‍ಪಸ್‌ ಪಡೆದಿದ್ದಾರೆ.

ಮೂರು ದಿನಗಳಿಂದ ನಗರದಲ್ಲಿ ಪ್ರತಿಭಟನೆ ನಡೆಸುತ್ತಿರುವ ಬಿಸಿಯೂಟ ನೌಕರರ ಪ್ರತಿನಿಧಿಗಳ ಜತೆ ಮುಖ್ಯಮಂತ್ರಿ ಸಿದ್ದರಾಮಯ್ಯ ನಡೆಸಿದ ಮಾತುಕತೆ ಫಲ ನೀಡಿತು. ಶಿಕ್ಷಣ ಸಚಿವ ತನ್ವೀರ್‌ ಸೇಠ್‌ ಮತ್ತು ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

ಮೂರು ತಾಸು ನಡೆದ ಸುದೀರ್ಘ ಮಾತುಕತೆಯಲ್ಲಿ ಕನಿಷ್ಠ ವೇತನ ನಿಗದಿ ಪಡಿಸುವ ಸಂಬಂಧ ಸರ್ಕಾರ ಮತ್ತು ವಿವಿಧ ಸಂಘಟನೆಗಳ ಪ್ರತಿನಿಧಿಗಳ ಮಧ್ಯೆ ಹಗ್ಗ– ಜಗ್ಗಾಟ ನಡೆಯಿತು. ರಾಜ್ಯ ಸರ್ಕಾರ ಆರಂಭದಲ್ಲಿ ₹ 2300 ಮಾತ್ರ ನೀಡಲು ಸಿದ್ಧವಿರುವುದಾಗಿ ಹೇಳಿತು.

ಆದರೆ, ಅಕ್ಷರ ದಾಸೋಹ ನೌಕರರ ಸಂಘದ ಪ್ರತಿನಿಧಿಗಳು ₹ 18,000 ನೀಡುವಂತೆ ಪಟ್ಟು ಹಿಡಿದರು. ಸರ್ಕಾರ ಇದಕ್ಕೆ ಒಪ್ಪದಿದ್ದಾಗ, ಕನಿಷ್ಠ ₹ 5000 ನೀಡಬೇಕು ಎಂಬ ಬೇಡಿಕೆ ಮುಂದಿಟ್ಟರು. ಅದಕ್ಕೆ ಮುಖ್ಯಮಂತ್ರಿ ₹ 3000 ನೀಡುವ ಬಗ್ಗೆ ಪರಿಶೀಲಿಸಬಹುದು ಎಂದರು.

‘ಅಂತಿಮವಾಗಿ ಎಷ್ಟು ಏರಿಕೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಹಿರಂಗಪಡಿಸಿಲ್ಲ. ಬಜೆಟ್‌ನಲ್ಲಿ ಉತ್ತಮ ಮೊತ್ತವನ್ನೇ ಪ್ರಕಟಿಸಬಹುದು’ ಎಂದು ಅಕ್ಷರ ದಾಸೋಹ ನೌಕರರ ಸಂಘದ ಅಧ್ಯಕ್ಷೆ ವರಲಕ್ಷ್ಮಿ ತಿಳಿಸಿದರು.

Comments are closed.