
ಅಬುಧಾಬಿ: ಮೂರು ರಾಷ್ಟ್ರಗಳ ಭೇಟಿ ನಿಮಿತ್ತ ತೆರಳಿರುವ ಭಾರತದ ಪ್ರಧಾನಿ ನರೇಂದ್ರ ಮೋದಿ ಯುಎಇಗೆ ಭೇಟಿ ನೀಡುತ್ತಿರುವ ಹಿನ್ನಲೆಯಲ್ಲಿ ದುಬೈ ಆಕರ್ಷಣೀಯ ಕೇಂದ್ರ ಬಿಂದು ಬುರ್ಜ್ ಖಲೀಫಾ ತ್ರಿವರ್ಣ ಧ್ವಜ ಬಣ್ಣಕ್ಕೆ ತಿರುಗಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಯುಎಇಗೆ ಆಗಮಿಸುತ್ತಿರುವ ಹಿನ್ನಲೆಯಲ್ಲಿ ಅವರ ಸ್ವಾಗತಕ್ಕೆ ಭಾರಿ ಸಿದ್ಧತೆ ನಡೆಯುತ್ತಿದ್ದು, ಇದಕ್ಕೆ ಇಂಬು ನೀಡುವಂತೆ ದುಬೈನ ಆಕರ್ಷಣೆಯ ಕೇಂದ್ರ ಬಿಂದು ಬುರ್ಜ್ ಖಲೀಫಾ ತ್ರಿವರ್ಣ ಧ್ವಜ ಬಣ್ಣಕ್ಕೆ ತಿರುಗಿದೆ. ಈ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಯುಎಇ ಸ್ವಾಗತ ಕೋರಲು ಸಿದ್ಧವಾಗಿದೆ.
ಇನ್ನು ನಾಳೆ ಪ್ರಧಾನಿ ನರೇಂದ್ರ ಮೋದಿ ಅವರು ಯುಎಇಗೆ ತೆರಳಲಿದ್ದು, ಈ ವೇಳೆ ದುಬೈ ದೊರೆಗಳ ಭೇಟಿ ಮಾಡಲಿದ್ದಾರೆ. ಬಳಿಕ ದುಬೈ ಅಧಿಕಾರಿಗಳನ್ನು ಭೇಟಿ ಮಾಡಲಿರುವ ಅವರು ದ್ವಿಪಕ್ಷೀಯ ಚರ್ಚೆ ನಡೆಸಲಿದ್ದಾರೆ. ಅಂತೆಯೇ ದುಬೈನಲ್ಲಿರುವ ಭಾರತ ಮೂಲದ ನಿವಾಸಿಗಳನ್ನು ಪ್ರಧಾನಿ ಮೋದಿ ಭೇಟಿ ಮಾಡಿಲಿದ್ದು, ಅವರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಬಳಿಕ ದುಬೈನ ಖ್ಯಾತನಾಮ ವಾಣಿಜ್ಯೋಧ್ಯಮಿಗಳೊಂದಿಗೆ ಪ್ರಧಾನಿ ಮೋದಿ ಸಭೆ ನಡೆಸಲಿದ್ದು, ಭಾರತದಲ್ಲಿ ಹೂಡಿಕೆ ಮಾಡುವ ಸಂಬಂಧ ಹಲವು ಒಪ್ಪಂದಗಳಿಗೆ ಸಹಿ ಹಾಕಲಿದ್ದಾರೆ.
ಬಳಿಕ ಅಬುಧಾಬಿಯಲ್ಲಿ ನಿರ್ಮಾಣವಾಗಳಿರುವ ಭವ್ಯ ಹಿಂದೂ ದೇಗುಲಕ್ಕೆ ಶಿಲಾನ್ಯಾಸ ಮಾಡಲಿದ್ದಾರೆ. ಈ ಶಿಲಾನ್ಯಾಸ ಸಮಾರಂಭ ಭಾರತ ಮತ್ತು ದುಬೈನಲ್ಲಿ ನೇರ ಪ್ರಸಾರವಾಗುತ್ತಿರುವುದು ವಿಶೇಷವಾಗಿದೆ. ಶಿಲಾನ್ಯಾಸದ ಬಳಿಕ ಪ್ರಧಾನಿ ಮೋದಿ ಭಾಷಣ ಮಾಡಲಿದ್ದು, ಇದಕ್ಕಾಗಿ ಒಪೆರಾ ಹೌಸ್ ಸಕಲ ರೀತಿಯಲ್ಲೂ ಸಜ್ಜಾಗಿದೆ.
ಹಾಲಿ ಪ್ರವಾಸ ಯುಎಇಗೆ ಪ್ರಧಾನಿ ಮೋದಿ ಅವರ 2ನೇ ಭೇಟಿಯಾಗಿದ್ದು, ಈ ಹಿಂದೆ 2015ರಲ್ಲಿಯೂ ಪ್ರಧಾನಿ ಮೋದಿ ಯುಎಇಗೆ ಭೇಟಿ ನೀಡಿದ್ದರು.
Comments are closed.