ಕರ್ನಾಟಕ

ಸಿದ್ದು ವಿರುದ್ಧ ಅನಂತ್‌, ನಳಿನ್‌, ಪ್ರತಾಪ್‌ ಜಂಟಿ ಸುದ್ದಿಗೋಷ್ಠಿ

Pinterest LinkedIn Tumblr


ಹೊಸದಿಲ್ಲಿ: ಚುನಾವಣೆಗೆ ಕೆಲವೆ ದಿನಗಳಿರುವ ವೇಳೆ ಸಿದ್ದರಾಮಯ್ಯ ಅವರನ್ನು ಹಣಿಯಲು ಬಿಜೆಪಿ ತಂತ್ರ ಹಣೆದಿದ್ದು, ಗುರುವಾರ ಬಿಜೆಪಿಯ ಫೈರ್‌ ಬ್ರ್ಯಾಂಡ್‌ ಖ್ಯಾತಿಯ ಮೂವರು ನಾಯಕರಾದ ಸಚಿವ ಅನಂತ್‌ಕುಮಾರ್‌ ಹೆಗಡೆ, ಸಂಸದ ನಳಿನ್‌ ಕುಮಾರ್‌ ಕಟೀಲ್‌ ಮತ್ತು ಪ್ರತಾಪ್‌ ಸಿಂಹ ಜಂಟಿ ಸುದ್ದಿಗೋಷ್ಠಿ ನಡೆಸಿ ಕಿಡಿ ಕಾರಿದ್ದಾರೆ. ಸುದ್ದಿಗೋಷ್ಠಿ ಉದ್ದಕ್ಕೂ ಮೂವರು ಸಂಸದರು ಸಿದ್ದರಾಮಯ್ಯ ವಿರುದ್ಧ ತೀವ್ರವಾಗಿ ಹರಿಹಾಯ್ದರು.

ಒಡೆದು ಆಳುವ ನೀತಿ

ಸಚಿವ ಅನಂತ್‌ ಕುಮಾರ್‌ ಮಾತನಾಡಿ’ಮಠ ಮತ್ತು ದೇವಾಲಯಗಳನ್ನು ನಿಯಂತ್ರಿಸಲು ಸುತ್ತೋಲೆ ಹೊರಡಿಸಿ ವಾಪಾಸ್‌ ಪಡೆದಿದ್ದಾರೆ. ಬಹುಸಂಖ್ಯಾತ ಹಿಂದೂಗಳ ಭಾವನೆಗಳ ಜೊತೆ ಚಕ್ಕಂದ ಆಡುತ್ತಿದ್ದಾರೆ.ಹಿಂದೂಗಳ ಭಾವನೆಗಳನ್ನು ಪ್ರಶ್ನೆ ಮಾಡಿದ್ದೀರಿ, ಹಿಂದು ಧರ್ಮಕ್ಕೆ ಘಾಸಿ ಮಾಡಿದ್ದೀರಿ . ಬಹುಸಂಖ್ಯಾತರನ್ನು ಈ ರೀತಿ ಅನಾವಶ್ಯಕ ಗೊಂದಲಕ್ಕೀಡು ಮಾಡಬೇಡಿ’ ಎಂದರು.

‘ಚುನಾವಣೆ ಗಮನದಲ್ಲಿಟ್ಟುಕ್ಕೊಂಡು ಈ ರೀತಿಯ ತಂತ್ರ ಮಾಡುವುದು ಮುಖ್ಯಮಂತ್ರಿಗಳಿಗೆ ಸರಿಯಲ್ಲ. ಶಾಂತಿ ಸಹಬಾಳ್ವೆ ಬೇಕೆಂದು ಹೇಳುವ ಅವರು ಒಡೆದು ಆಳುವ ನೀತಿ ಅನುಸರಿಸುತ್ತಿದ್ದಾರೆ. ಕರ್ನಾಟಕದ ಸಭ್ಯ ಜನತೆ ಇದನ್ನು ಸಹಿಸುವುದಿಲ್ಲ’ ಎಂದರು.

ಗುರುಪೀಠಗಳಿಗೆ ಅನ್ಯಾಯ

ನಳಿನ್‌ ಕುಮಾರ್‌ ಕಟೀಲ್‌ ಮಾತನಾಡಿ ‘ಮಠ ಮತ್ತು ದೇವಾಲಯಗಳನ್ನು ನಿಯಂತ್ರಿಸಲು ಸುತ್ತೋಲೆ ಹೊರಡಿಸಿ ಹೊರಡಿಸಿ ಸಿದ್ದರಾಮಯ್ಯ ಅವರು ಗುರುಪೀಠಗಳಿಗೆ ಅನ್ಯಾಯ ಮಾಡುತ್ತಿದ್ದಾರೆ. ಶಕ್ತಿ ತಾಕತ್‌ ಇದ್ರೆ ಮುಸಲ್ಮಾನರ ಮಸೀದಿ ಮತ್ತು ಚರ್ಚ್‌ ಮಸೀದಿಗಳನ್ನು ಇದಕ್ಕೆ ಗುರಿಪಡಿಸಿ’ ಎಂದು ಸವಾಲು ಹಾಕಿದರು.

‘ಮುಖ್ಯಮಂತ್ರಿಗಳೇ ನಿಮಗೆ ತಾಕತ್‌ ಇದ್ದರೆ ವಕ್ಫ್ ನಲ್ಲಿ ಭಾರಿ ಅಕ್ರಮವಾಗಿದೆ, ಅದರ ಬಗ್ಗೆ ಕ್ರಮ ಕೈಗೊಳ್ಳಿ’ ಎಂದರು.

‘ನಿಮಗೆ ಹಿಂದೂಗಳ ಭಾವನೆಗಳ ಮೇಲೆ ಗೌರವ ಇಲ್ಲದೆ ಇದ್ದರೆ, ತಾಕತ್‌ ಇದ್ದರೆ , ನನಗೆ ಹಿಂದೂಗಳ ಮತ ಬೇಡ ಕೇವಲ ಮುಸ್ಲಿಮರ ಮತಗಳು ಮಾತ್ರ ಸಾಕು’ ಎಂದು ಘೋಷಿಸಿ ಬಿಡಿ ಎಂದು ಸವಾಲು ಹಾಕಿದರು.

ಸಿದ್ದರಾಮಯ್ಯ ಕಾಂಗ್ರೆಸ್‌ನೊಳಗಿನ ಕಾಮ್ರೆಡ್‌
ಹಿಂದೂಪರ ಮತ್ತು ಬಿಜೆಪಿ ಕಾರ್ಯಕರ್ತರ ಹತ್ಯೆಗಳನ್ನು ಪ್ರಸ್ತಾವಿಸಿ ವಾಗ್ಧಾಳಿ ನಡೆಸಿದ ಪ್ರತಾಪ್‌ ಸಿಂಹ ‘ಸಿದ್ದರಾಮಯ್ಯ ಅವರ ಚಿತಾವಣೆಯಿಂದ ರಾಜ್ಯದಲ್ಲಿ 24 ನಮ್ಮ ಕಾರ್ಯಕರ್ತರ ಹತ್ಯೆಗಳು ನಡೆದಿವೆ. ಕೇರಳ ಮಾದರಿಯಲ್ಲಿ ಕಾರ್ಯಕರ್ತರನ್ನು ಹತ್ಯೆಗೈಯಲು ಅವರು ಪ್ರಚೋದನೆ ನೀಡಿದ್ದಾರೆ. ಅವರು ಕಾಂಗ್ರೆಸ್‌ನೊಳಗಿನ ಕಾಮ್ರೆಡ್‌’ ಎಂದು ಕಿಡಿ ಕಾರಿದರು.

-ಉದಯವಾಣಿ

Comments are closed.