ಕರ್ನಾಟಕ

ಇಂಜಿನ್​ಗೆ ಹುಲ್ಲು ಸಿಕ್ಕಿ ಹೊತ್ತಿ ಉರಿದ ಕಾರು

Pinterest LinkedIn Tumblr


ಮಂಡ್ಯ: ರಸ್ತೆಯಲ್ಲಿ ಹಾಕಿದ್ದ ರಾಗಿ ಒಕ್ಕಣೆ ಹುಲ್ಲಿನಿಂದ ಕಾರು ಹೊತ್ತಿ ಉರಿದ ಘಟನೆ ಕೆ.ಆರ್.ಪೇಟೆ ತಾಲ್ಲೂಕಿನ ರಾಜೇನಹಳ್ಳಿ ಗ್ರಾಮದಲ್ಲಿ ಭಾನುವಾರ ನಡೆದಿದೆ.

ಬೆಂಗಳೂರು ಮೂಲದ ಐವರು ಭೂವರಹನಾಥಸ್ವಾಮಿ ದೇವಸ್ಥಾನಕ್ಕೆ ಹೋಗುತ್ತಿದ್ದಾಗ ಬೂಕನಕೆರೆ ಹೋಬಳಿಯ ರಾಜೇನಹಳ್ಳಿ ಬಳಿ ರೈತರು ರಸ್ತೆಯಲ್ಲಿ ರಾಗಿಯನ್ನು ಒಕ್ಕಣೆ ಮಾಡುತ್ತಿದ್ದರು. ಈ ವೇಳೆ ಕಾರಿನ ಇಂಜಿನ್​ಗೆ ಒಣ ಹುಲ್ಲು ಸಿಕ್ಕಿಕೊಂಡು ಕಾರಿಗೆ ಬೆಂಕಿ ಹೊತ್ತಿಕೊಂಡು ಸಂಪೂರ್ಣ ಸುಟ್ಟು ಕರಕಲಾಗಿದೆ. ಕಾರಿನಲ್ಲಿದ್ದ ಐವರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಬೆಂಕಿ ಹೊತ್ತಿಕೊಂಡಿದ್ದರೂ ತಿಳಿಯದೇ ಕಾರಿನಲ್ಲಿ ಹೋಗುತ್ತಿದ್ದಾಗ ಅದೇ ಮಾರ್ಗವಾಗಿ ಬೈಕ್ ನಲ್ಲಿ ಹೋಗುತ್ತಿದ್ದ ವ್ಯಕ್ತಿಯೊಬ್ಬರು ಕಾರಿಗೆ ಬೆಂಕಿ ಹೊತ್ತಿಕೊಂಡಿದೆ ಎಂದು ಮಾಹಿತಿ ನೀಡಿದ್ದಾರೆ. ತಕ್ಷಣ ಕಾರಿನೊಳಗಿದ್ದ ಐವರು ಕಾರನ್ನು ನಿಲ್ಲಿಸಿ ಕಾರಿನಿಂದ ಹೊರ ಬಂದು ಬೆಂಕಿಯನ್ನು ನಂದಿಸಲು ಯತ್ನಿಸಿದಾದರೂ ಕಾರು ಸುಟ್ಟು ಕರಕಲಾಗಿದೆ.

ವಿಷಯ ತಿಳಿದ ತಕ್ಷಣ ಪಟ್ಟಣದ ಅಗ್ನಿಶಾಮಕಠಾಣೆಯ ಅಧಿಕಾರಿಗಳು ಕಾರಿನ ಬೆಂಕಿಯನ್ನು ನಂದಿಸಿ ಹೆಚ್ಚಿನ ಅನಾಹುತವನ್ನು ತಪ್ಪಿಸಿದ್ದಾರೆ. ಘಟನಾ ಸ್ಥಳಕ್ಕೆ ಗ್ರಾಮಾಂತರ ಪೊಲೀಸ್ ಸಬ್ ಇನ್ಸ್​ಪೆಕ್ಟರ್ ಗಿರೀಶ್ ಭೇಟಿ ನೀಡಿ ಪರಿಶೀಲನೆ ನಡೆಸಿ ರಾಗಿ ಒಕ್ಕಣೆ ಮಾಡುತ್ತಿದ್ದ ರೈತರ ವಿರುದ್ಧ ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.

Comments are closed.