ಕರ್ನಾಟಕ

2020ಕ್ಕೆ ನಗರದ 1.32 ಲಕ್ಷ ಮನೆಗಳಿಗೆ ಪಿಎನ್‌ಜಿ ಸಂಪರ್ಕ

Pinterest LinkedIn Tumblr


ಬೆಂಗಳೂರು: ಪೈಪ್‌ಲೈನ್‌ ಮೂಲಕ ಮನೆಗಳಿಗೆ ಅಡುಗೆ ಅನಿಲ ಪೂರೈಸುವ ಪಿಎನ್‌ಜಿ ಯೋಜನೆಯಡಿ ನಗರದ 4,600 ಮನೆಗಳಿಗೆ ಸಂಪರ್ಕ ಕಲ್ಪಿಸಿದ್ದು, 57 ಸಾವಿರ ಮನೆಗಳಿಗೆ ಮೂಲಸೌಕರ್ಯ ಒದಗಿಸಲಾಗಿದೆ. ಸಿಎನ್‌ಜಿ ಪೂರೈಸಲು ಒಟ್ಟು 2,500 ಕಿ.ಮೀ. ಉದ್ದ ಪೈಪ್‌ ಅಳವಡಿಸಲಾಗುತ್ತಿದೆ. 2020 ಕ್ಕೆ ನಗರದ 1.32 ಲಕ್ಷ ಮನೆಗಳಿಗೆ ಪೈಪ್‌ ಮೂಲಕ ಗ್ಯಾಸ್‌ ಸಂಪರ್ಕ ಸಿಗಲಿದೆ ಎಂದು ಎಂದು ಕೇಂದ್ರ ಸಾಂಖ್ಯಿಕ ಮತ್ತು ಯೋಜನೆ ಅನುಷ್ಠಾನ ಇಲಾಖೆ ರಾಜ್ಯ ಸಚಿವ ವಿಜಯ್‌ ಗೋಯಲ್‌ ತಿಳಿಸಿದರು.

ಬಿಎಂಆರ್‌ಸಿಎಲ್‌ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ”ಮಹಾರಾಷ್ಟ್ರದ ದಾಭೋಲ್‌ನಿಂದ ಬೆಂಗಳೂರಿನವರೆಗೆ 1 ಸಾವಿರ ಕಿ.ಮೀ. ಉದ್ದದ ಪೈಪ್‌ ಅಳವಡಿಸುವ ಕಾಮಗಾರಿ ಪೂರ್ಣಗೊಂಡಿದ್ದು, ಹೊರವರ್ತುಲ ರಸ್ತೆಯಲ್ಲಿ 100 ಕಿ.ಮೀ. ಉದ್ದದ ಪೈಪ್‌ ಅಳವಡಿಸಲಾಗಿದೆ. ಇದರಿಂದ 4,600 ಮನೆಗಳಿಗೆ ಸಿಎನ್‌ಜಿ ಪೂರೈಸಲು ಸಾಧ್ಯವಾಗಿದೆ. 57 ಸಾವಿರ ಮನೆಗಳಿಗೆ ಸಿಎನ್‌ಜಿ ಪೂರೈಸಲು ಪೈಪ್‌ ಸೇರಿದಂತೆ ಮೂಲಸೌಕರ್ಯ ನಿರ್ಮಿಸುವ ಕಾರ್ಯ ಪೂರ್ಣಗೊಂಡಿದೆ. 2020 ಕ್ಕೆ 1.32 ಲಕ್ಷ ಮನೆಗಳಿಗೆ ಪಿಎನ್‌ಜಿ ಪೂರೈಸುವ ಗುರಿಯಿದೆ,” ಎಂದು ಹೇಳಿದರು.

ಎಲ್‌ಪಿಜಿಗಿಂತ ಪಿಎನ್‌ಜಿ ದರ ಕಡಿಮೆ ಇರುವುದರಿಂದ ಉದ್ಯಮಗಳಿಂದಲೂ ಬೇಡಿಕೆ ಕೇಳಿಬಂದಿದೆ. ಫೀನಿಕ್ಸ್‌ ಮಾಲ್‌, ಬಿಇಎಲ್‌, ಬಿಎಚ್‌ಇಎಲ್‌ ಕೂಡಾ ಸಿಎನ್‌ಜಿ ಖರೀದಿಗೆ ಆಸಕ್ತಿ ತೋರಿಸಿವೆ. ಇವೂ ಸೇರಿದಂತೆ ಒಟ್ಟು 17 ಉದ್ಯಮಗಳು ಪಿಎನ್‌ಜಿ ಖರೀದಿಸುವುದಾಗಿ ತಿಳಿಸಿವೆ.

ಹೊಸ ಮೀಟರ್‌: ಪಿಎನ್‌ಜಿ ಬಳಸಿದ ಬಳಿಕ ಗ್ರಾಹಕರಿಂದ ಶುಲ್ಕ ಪಡೆಯಲಾಗುತ್ತದೆ. ಬಳಕೆ ಪ್ರಮಾಣವನ್ನು ತಿಳಿಯಲು ಪ್ರತಿ ಮನೆಯಲ್ಲಿ ಮೀಟರ್‌ ಅಳವಡಿಸಲಾಗುತ್ತಿದೆ. ಈ ಮೀಟರ್‌ನಲ್ಲಿ ದಾಖಲಾದ ಪ್ರಮಾಣ ನೋಡಲು ಮನೆಯ ಒಳಗೆ ತೆರಳಬೇಕಾಗುತ್ತದೆ. ಇದರ ಬದಲು ಮೊಬೈಲ್‌ ಆ್ಯಪ್‌ನಲ್ಲೇ ಮಾಹಿತಿ ಪಡೆಯುವ ಹೊಸ ವ್ಯವಸ್ಥೆಯನ್ನು ಗೇಯ್ಲ್‌ ಪರಿಚಯಿಸುತ್ತಿದೆ. ಇದರಿಂದ ಅಧಿಕಾರಿಗಳು ಕಚೇರಿಯಲ್ಲಿ ಕುಳಿತು ಆ್ಯಪ್‌ನಿಂದ ಬಳಕೆ ಪ್ರಮಾಣ ತಿಳಿಯಬಹುದು. ಪ್ರತಿ ಮನೆಗೆ ಹೋಗಿ ಮೀಟರ್‌ ರೀಡ್‌ ಮಾಡುವ ಅಗತ್ಯವಿಲ್ಲ.

ಏರ್‌ಪೋರ್ಟ್‌ನಲ್ಲಿ ಸಿಎನ್‌ಜಿ ಸ್ಟೇಷನ್‌ ನಿರ್ಮಾಣಕ್ಕೆ ಭೂಸ್ವಾಧೀನ ತೊಡಕು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಿಎನ್‌ಜಿ ಸ್ಟೇಷನ್‌ ನಿರ್ಮಿಸಲು ಭೂ ಸ್ವಾಧೀನ ಸಮಸ್ಯೆ ಉಂಟಾಗಿದೆ. ಈ ಕುರಿತು ವರದಿ ಸಲ್ಲಿಸಲು ಸೂಚಿಸಲಾಗಿದೆ ಎಂದು ಸಚಿವ ವಿಜಯ್‌ ಗೋಯಲ್‌ ತಿಳಿಸಿದರು. ”ಕೇಂದ್ರ ಸರಕಾರವು ಗೇಯ್ಲ್‌ ಮೂಲಕ ಜಾರಿ ಮಾಡಿರುವ ಪಿಎನ್‌ಜಿ (ಪೈಪ್ಡ್‌ ನ್ಯಾಚುರಲ್‌ ಗ್ಯಾಸ್‌) ಯೋಜನೆಯಲ್ಲಿ ಸ್ಟೇಷನ್‌ಗಳನ್ನು ನಿರ್ಮಿಸಲಾಗುತ್ತಿದೆ. ಆ್ಯಪ್‌ ಆಧಾರಿತ ಟ್ಯಾಕ್ಸಿ, ಆಟೊ ಸೇವೆಗಳಿಗೆ ನಗರದಲ್ಲಿ ಬೇಡಿಕೆ ಹೆಚ್ಚಿದ್ದು, ಈ ವಾಹನಗಳು ಸಿಎನ್‌ಜಿ ಬಳಸಿಕೊಳ್ಳುವ ನಿರೀಕ್ಷೆಯಿದೆ. ಸಿಎನ್‌ಜಿ ಪೂರೈಸಲು ನಗರದಲ್ಲಿ 4 ಸ್ಟೇಷನ್‌ಗಳನ್ನು ನಿರ್ಮಿಸಲಾಗುತ್ತಿದೆ. ನಾಲ್ಕರಲ್ಲಿ ಒಂದು ಸ್ಟೇಷನ್‌ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬರಲಿದೆ. ಸುಮಾರು 12 ಸಾವಿರ ಚದರ ಮೀಟರ್‌ ಜಾಗವನ್ನು ಸ್ಟೇಷನ್‌ ನಿರ್ಮಿಸಲು ಗುರುತಿಸಲಾಗಿದೆ. ಆದರೆ ಇದು ಖಾಸಗಿ ಜಾಗವಾಗಿರುವುದರಿಂದ ಭೂ ಸ್ವಾಧೀನ ವಿಚಾರದಲ್ಲಿ ಸಮಸ್ಯೆ ಉಂಟಾಗಿದೆ. ಈ ಕುರಿತ ವರದಿಯನ್ನು ಕೇಂದ್ರ ಸರಕಾರಕ್ಕೆ ಕಳುಹಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಬಳಿಕ ಭೂ ಸ್ವಾಧೀನ ಸಮಸ್ಯೆ ಪರಿಹಾರಕ್ಕೆ ಚರ್ಚೆ ನಡೆಸಲಾಗುವುದು,” ಎಂದು ತಿಳಿಸಿದರು.

”4 ಸ್ಟೇಷನ್‌ಗಳಿಗೆ ಉತ್ತಮ ಸ್ಪಂದನೆ ದೊರೆಯುವ ನಿರೀಕ್ಷೆಯಿದೆ. ನಂತರ ಹೆಚ್ಚುವರಿಯಾಗಿ 14 ಸ್ಟೇಷನ್‌ಗಳನ್ನು ನಿರ್ಮಿಸಲಾಗುವುದು,” ಎಂದು ಮಾಹಿತಿ ನೀಡಿದರು. ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮಹೇಂದ್ರ ಜೈನ್‌ ಹಾಜರಿದ್ದರು.

Comments are closed.