
ಬೆಂಗಳೂರು: ಒಗ್ಗಟ್ಟು ಬಲದ ಮೂಲಮಂತ್ರ, ಯಾವುದೇ ವಿಷಯದಲ್ಲಿ ಸಿದ್ದರಾಮಯ್ಯನವರು ಗುರಿಯಾಗಿಟ್ಟುಕೊಂಡು ಬಿಜೆಪಿ ಆರೋಪಿಸಿದರೆ ಅವರ ಬೆಂಬಲಕ್ಕೆ ನಿಲ್ಲಿ. ಇದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು ನಿನ್ನೆ ದೆಹಲಿಯಲ್ಲಿ ತಮ್ಮನ್ನು ಭೇಟಿ ಮಾಡಿದ ರಾಜ್ಯ ಕಾಂಗ್ರೆಸ್ ತಂಡಕ್ಕೆ ಹೇಳಿರುವ ಕಿವಿಮಾತು.
ಕಾಂಗ್ರೆಸ್ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ ಫೆಬ್ರವರಿ 10ರಿಂದ ಮೂರು ದಿನಗಳ ಭೇಟಿಗಾಗಿ ರಾಜ್ಯಕ್ಕೆ ಆಗಮಿಸಲಿರುವ ರಾಹುಲ್ ಗಾಂಧಿ, ರಾಜ್ಯ ಚುನಾವಣೆ ಪೂರ್ವದಲ್ಲಿ ಪಕ್ಷದ ಪ್ರಚಾರಕ್ಕೆ ಹುಮ್ಮಸ್ಸು ತುಂಬಲು ಆಗಮಿಸಲಿದ್ದಾರೆ.
ತಮ್ಮ ಮೊದಲ ಸುತ್ತಿನ ಚುನಾವಣಾ ಪ್ರಚಾರದಲ್ಲಿ ರಾಹುಲ್ ಗಾಂಧಿ ವಿದ್ಯಾರ್ಥಿಗಳು, ರೈತರು ಮತ್ತು ಕೈಗಾರಿಕೋದ್ಯಮಿಗಳ ಜೊತೆ ಮಾತುಕತೆ ನಡೆಸಲಿದ್ದಾರೆ. ಅಲ್ಲದೆ ಕೆಲವು ದೇವಸ್ಥಾನಗಳಿಗೆ ಭೇಟಿ ನೀಡುವ ಮೂಲಕ ಹಿಂದುತ್ವ ಪರ ತಂತ್ರವನ್ನು ಜನರ ಮುಂದಿಡುವ ಪ್ರಯತ್ನ ಮಾಡಲಿದ್ದಾರೆ.
ನಿನ್ನೆ ದೆಹಲಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಮತ್ತು ಕಾಂಗ್ರೆಸ್ ನ ಇತರ ಹಿರಿಯ ನಾಯಕರೊಂದಿಗೆ ಮಾತುಕತೆ ನಡೆಸಿದ ರಾಹುಲ್ ಗಾಂಧಿ, ಬಿಜೆಪಿಯನ್ನು ಚುನಾವಣೆಯಲ್ಲಿ ಸೋಲಿಸಲು ನಡೆಸಬೇಕಾದ ಕಾರ್ಯತಂತ್ರಗಳ ಕುರಿತು ಚರ್ಚೆ ನಡೆಸಿದರು. ಬಿಜೆಪಿ ರಾಜ್ಯ ಚುನಾವಣೆಯನ್ನು ಹಿಂದುತ್ವದ ಅಡಿಯಲ್ಲಿ ಎದುರಿಸುತ್ತಿದೆ. ಪಕ್ಷದ ಗೆಲುವಿಗೆ ಒಗ್ಗಟ್ಟಿನಿಂದ ಕೆಲಸ ಮಾಡುವಂತೆ ರಾಹುಲ್ ಗಾಂಧಿ ಕಿವಿಮಾತು ಹೇಳಿದರು ಎಂದು ಮೂಲಗಳು ತಿಳಿಸಿವೆ.
Comments are closed.