
ಬೆಂಗಳೂರು: ಮಹದಾಯಿ ಹಾಗೂ ಕಳಸಾ ಬಂಡೂರಿ ಯೊಜನೆ ಜಾರಿಗೆ ಒತ್ತಾಯಿಸಿ ಜನವರಿ 27ರಂದು ಕರ್ನಾಟಕ ಬಂದ್ ಗೆ ಕರೆ ನೀಡಿರುವುದಾಗಿ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಅವರು ಬುಧವಾರ ಹೇಳಿದ್ದಾರೆ.
ಈ ಸಂಬಂಧ ಇಂದು ನಗರದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ವಾಟಾಳ್ ನಾಗರಾಜ್ ಅವರು, ಮಹದಾಯಿ ಯೋಜನೆ ಅನುಷ್ಠಾನಕ್ಕೆ ಆಗ್ರಹಿಸಿ ಜನವರಿ 27ರಂದು ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಕರ್ನಾಟಕ ಬಂದ್ ಕರೆ ನೀಡಲಾಗಿದ್ದು, ಈ ಬಂದ್ ಗೆ ಎಲ್ಲಾ ಕನ್ನಡ ಪರ ಸಂಘಟನೆಗಳು ಬೆಂಬಲ ನೀಡಬೇಕು ಎಂದು ಮನವಿ ಮಾಡಿದರು.
ಜನವರಿ 28ರಂದು ಪ್ರಧಾನಿ ನರೇಂದ್ರ ಮೋದಿ ಅವರು ಕರ್ನಾಟಕಕ್ಕೆ ಆಗಮಿಸುತ್ತಿದ್ದಾರೆ. ಹೀಗಾಗಿ 27ಕ್ಕೆ ಕರ್ನಾಟಕ ಬಂದ್ ಗೆ ಕರೆ ನೀಡಲಾಗಿದ್ದು, ಒಂದು ವೇಳೆ ಮಹದಾಯಿ ವಿಚಾರದಲ್ಲಿ ಪ್ರಧಾನಿ ಮೋದಿ ಭರವಸೆ ನೀಡಿದರೆ ಬಂದ್ ಹಿಂಪಡೆಯುವುದಾಗಿ ವಾಟಾಳ್ ತಿಳಿಸಿದ್ದಾರೆ. ಅಲ್ಲದೆ ಬಂದ್ ದಿನವೇ ಬೃಹತ್ ಹೋರಾಟ ನಡೆಸುವ ಬಗ್ಗೆ ನಿರ್ಧರಿಸಿರುವುದಾಗಿ ಹೇಳಿದರು.
ಇತ್ತೀಚೆಗಷ್ಟೇ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ 15 ದಿನಗಳಲ್ಲಿಯೇ ಮಹದಾಯಿ ವಿವಾದ ಬಗೆಹರಿಸುವುದಾಗಿ ನೀಡಿರುವ ವಾಗ್ದಾನ ಪೂರೈಸದ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಮಹದಾಯಿ ಹೋರಾಟಗಾರರು ಅಹೋರಾತ್ರಿ ಧರಣಿ ನಡೆಸಿದ್ದರು.
ಮಹದಾಯಿ ಹೋರಾಟಗಾರರ ಜತೆಗಿನ ಬಿಎಸ್ ಯಡಿಯೂರಪ್ಪ ಸಂಧಾನ ವಿಫಲವಾದ ಬಳಿಕ, ಅಹೋರಾತ್ರಿ ಧರಣಿಯನ್ನು ಕೈಬಿಟ್ಟಿದ್ದರು, ಬಳಿಕ ಚಿತ್ರರಂಗ, ಕನ್ನಡಪರ ಸಂಘಟನೆಗಳ ಸಹಕಾರದೊಂದಿಗೆ ಮುಂದಿನ ಹೋರಾಟದ ರೂಪರೇಷೆ ಸಿದ್ಧಪಡಿಸುವುದಾಗಿ ಮಹದಾಯಿ ಹೋರಾಟಗಾರರು ತಿಳಿಸಿದ್ದರು.
Comments are closed.