ಕರ್ನಾಟಕ

ರಾಜ್ಯದ ಎಸ್’ಸಿ, ಎಸ್’ಟಿ ಮಸೂದೆಗೆ ಮೆಚ್ಚುಗೆ: ವರದಿ ಕೇಳಿದ ರಾಷ್ಟ್ರಪತಿ ಕೋವಿಂದ್

Pinterest LinkedIn Tumblr


ಮೈಸೂರು: ರಾಜ್ಯ ಸರ್ಕಾರದ ಬಹು ನಿರೀಕ್ಷಿತ ಎಸ್’ಸಿ ಮತ್ತು ಎಸ್’ಟಿ ಮಸೂದೆಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಮಸೂದೆ ಕುರಿತಂತೆ ವರದಿ ನೀಡುವಂತೆ ಸೂಚನೆ ನೀಡಿದ್ದಾರೆಂದು ತಿಳಿದುಬಂದಿದೆ.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ನೀಡಲಾಗುತ್ತಿರುವ ಅನುದಾನಗಳು ದುರ್ಬಳಕೆಯಾಗದಂತೆ ಹಾಗೂ ಅನುದಾನ ಉತ್ತಮ ಕಾರ್ಯಗಳಿಗೆ ಬಳಕೆಯಾಗುವ ಉದ್ದೇಶದಿಂ ರಾಜ್ಯ ಸರ್ಕಾರ ಕೆಲ ದಿನಗಳ ಹಿಂದಷ್ಟೇ ಕಾಯ್ದೆಗೆ ಸುಗ್ರೀವಾಜ್ಞೆಯನ್ನು ಹೊರಡಿಸಿತ್ತು.

ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳುವ ಸಲುವಾಗಿ ಇತ್ತೀಚೆಗಷ್ಟೇ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ನಗರಕ್ಕೆ ಆಗಮಿಸಿದ್ದರು. ಈ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಸ್’ಸಿ, ಎಸ್’ಟಿ ಕಾಯ್ದೆ ಕುರಿತಂತೆ ಕೋವಿಂದ್ ಅವರಿಗೆ ವಿವರಣೆ ನೀಡಿದ್ದರು. ಸಾಮಾಜಿಕ ವಲಯದಲ್ಲಿನ ಕಾರ್ಯಕ್ರಮಗಳು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಸರ್ಕಾರ ನೀಡುತ್ತಿರುವ ಅನುದಾನ, ಅನುದಾನ ದುರ್ಬಳಕೆ ಮಾಡಿಕೊಳ್ಳುವವರ ವಿರುದ್ಧದ ಕ್ರಮ ಸೇರಿದಂತೆ ಇನ್ನಿತರೆ ಯೋಜನೆಗಳ ಕುರಿತಂತೆ ವಿವರಣೆಯನ್ನು ನೀಡಿದ್ದಾರೆ.

ಇದರಂತೆ ಎಸ್’ಸಿ, ಎಸ್’ಟಿ ಕಾಯ್ದೆ ಜಾರಿಗೆ ತಂದಿರುವ ಸರ್ಕಾರದ ಕ್ರಮದ ಬಗ್ಗೆ ಮತ್ತು ಅದರ ಅನುಷ್ಠಾನದ ಕುರಿತು ರಾಷ್ಟ್ರಪತಿಯವರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಕಾಯ್ದೆಯನ್ನು ಇತರೆ ರಾಜ್ಯಗಳು ಪಾಲನೆ ಮಾಡುವಂತೆ ಸೂಚಿಸಲು ಕಾಯ್ದೆ ಕುರಿತ ವಿವರಣಾತ್ಮಕ ಪ್ರತಿಯೊಂದನ್ನು ಕಳುಹಿಸಿಕೊಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸೂಚನೆ ನೀಡಿದ್ದಾರೆಂದು ತಿಳಿದುಬಂದಿದೆ.

Comments are closed.