ಕರ್ನಾಟಕ

ಪರೇಶ್ ಮೇಸ್ತ ಮೃತದೇಹದ ಸ್ಥಿತಿ ಬಗ್ಗೆ ಪೊಲೀಸರು ಕೇಳಿದ ಪ್ರಶ್ನೆಗೆ ಮರಣೋತ್ತರ ಪರೀಕ್ಷೆ ಆಧರಿಸಿ ವೈದ್ಯರು ಉತ್ತರ ನೀಡಿದ್ದು ಹೀಗೆ….

Pinterest LinkedIn Tumblr

ಕಾರವಾರ: ಹೊನ್ನಾವರದ ಹಿಂದೂ ಕಾರ್ಯಕರ್ತ ಪರೇಶ್ ಮೇಸ್ತ ದೇಹದ ಸ್ಥಿತಿ ಕುರಿತು ಒಟ್ಟು ಪೊಲೀಸರು 19 ಪ್ರಶ್ನೆಗಳನ್ನು ಕೇಳಿದ್ದಾರೆ ಎಂದು ಹೇಳಲಾಗುತ್ತಿದೆ. ಪರೇಶ್ ದೇಹದ ಮರಣೋತ್ತರ ಪರೀಕ್ಷೆ ಆಧರಿಸಿ ವೈದ್ಯ ಮಣಿಪಾಲ ವಿಧಿ ವಿಜ್ಞಾನ ವಿಭಾಗದ ಡಾ| ಶಂಕರ್‌ ಎಂ. ಬಕ್ಕಣ್ಣನವರ್‌ ಉತ್ತರಿಸಿದ್ದಾರೆ.

ಪೊಲೀಸರ 19 ಪ್ರಶ್ನೆಗಳಿಗೆ ಮಣಿಪಾಲ್‍ನ ಕಸ್ತೂರ ಬಾ ವೈದ್ಯಕೀಯ ಕಾಲೇಜಿನ ವೈದ್ಯರು ಮರಣೋತ್ತರ ಪರೀಕ್ಷೆ ವರದಿ ಆಧರಿಸಿದ ಉತ್ತರ ನೀಡಿದ್ದಾರೆ. ಅವುಗಳಲ್ಲಿ ಪ್ರಮುಖವಾದವು ಹೀಗಿವೆ…

ಪೊಲೀಸರು ಕೇಳಿದ ಪ್ರಶ್ನೆಗಳಿಗೆ ವೈದ್ಯರ ಉತ್ತರ:

ಪ್ರಶ್ನೆ: ಆಯುಧಗಳಿಂದಾದ ಯಾವುದಾದ್ರೂ ಗಾಯಗಳಿವೆಯೇ..? ಇದ್ದರೆ ಅದಕ್ಕೆ ಕಾರಣವಾದ ಆಯುಧ ಯಾವುದು..?
ಉತ್ತರ: ಆಯುಧಗಳಿಂದಾದ ಯಾವುದೇ ಗಾಯಗಳಿಲ್ಲ. 2 ಕಡೆ ತರುಚಿದ ಗಾಯಗಳಿವೆ.

ಪ್ರಶ್ನೆ: ಮೃತನ ಮುಖದ ಬಣ್ಣದಲ್ಲಿ ಯಾವುದಾದರೂ ಬದಲಾವಣೆ ಆಗಿದೆಯೇ..? ಆಗಿದ್ದರೆ ಅದಕ್ಕೆ ಕಾರಣವೇನು..?
ಉತ್ತರ: ನೀರಿನಲ್ಲಿ ದೇಹ ಪತ್ತೆಯಾಗಿದ್ದರಿಂದ ಮುಖ ಕೊಳೆತ ಸ್ಥಿತಿಗೆ ತಲುಪಿದೆ.

ಪ್ರಶ್ನೆ: ಮೃತನ ದೇಹದಲ್ಲಿ ಉಗುರಿನ ಗುರುತು, ಚುಚ್ಚಿದ ಗುರುತು ಏನಾದರೂ ಇದೆಯಾ..?
ಉತ್ತರ: ಮೃತನ ದೇಹದಲ್ಲಿ ಅಂತಹ ಯಾವುದೇ ಗುರುತುಗಳು ಇಲ್ಲ.

ಪ್ರಶ್ನೆ: ಮೃತನ ದೇಹದಲ್ಲಿ ಯಾವುದಾದರೂ ಟ್ಯಾಟೂ ಇದೆಯಾ..? ಅಥವಾ ಟ್ಯಾಟೂವನ್ನು ಅಳಿಸಲಾಗಿದ್ಯಾ..?
ಉತ್ತರ: ಮೃತನ ಬಲಭುಜದಲ್ಲಿ ಶಿವಾಜಿ ಚಿತ್ರ ಮತ್ತು ಹಿಂದಿಯಲ್ಲಿ `ಮರಾಠಾ’ ಎಂದು ಹಿಂದಿಯಲ್ಲಿ ಬರೆಯಲಾಗಿದೆ. ಅದನ್ನು ಅಳಿಸಿಲ್ಲ.

ಪ್ರಶ್ನೆ: ಬಿಸಿ ನೀರು ಮತ್ತು ಆ್ಯಸಿಡ್ ನಂತಹ ರಾಸಾಯನಿಕದಿಂದ ದಾಳಿ ಮಾಡಲಾಗಿದೆಯಾ..?
ಉತ್ತರ: ಬಿಸಿ ನೀರು ಮತ್ತು ಆ್ಯಸಿಡ್‍ನಂತ ರಾಸಾಯನಿಕ ದಾಳಿಯ ಯಾವುದೇ ಗುರುತುಗಳಿಲ್ಲ.

ಪ್ರಶ್ನೆ: ಬಾಯಿ, ಶ್ವಾಸನಾಳ, ಗಂಟಲಿನಲ್ಲಿ ಏನಾದರೂ ಪತ್ತೆಯಾಗಿದೆಯಾ..?
ಉತ್ತರ: ಹೌದು.. ಕಪ್ಪುಬಣ್ಣದ ವಸ್ತು ಪತ್ತೆಯಾಗಿದೆ.. ಅದನ್ನು ರಾಸಾಯನಿಕ ಪರೀಕ್ಷೆಗೆ ತೆಗೆದಿರಿಸಲಾಗಿದೆ.

ಪ್ರಶ್ನೆ: ಮೃತನ ಮರ್ಮಾಂಗದ ಮೇಲೆ ಹಲ್ಲೆ ನಡೆಸಿರುವ ಕುರುಹುಳಿವೆಯೇ..?
ಉತ್ತರ: ಇಲ್ಲ..ಮೃತನ ಮರ್ಮಾಂಗದ ಮೇಲೆ ಹಲ್ಲೆಯಾಗಿರುವ ಸಾಕ್ಷಿಗಳಿಲ್ಲ.

ಪರೇಶ್ ಮೇಸ್ತ ಅವರ ಮರ್ಮಾಂಗದ ಮೇಲೆ ಯಾವುದೇ ಗಾಯದ ಕುರುಹುಗಳಿಲ್ಲ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ. ಇತ್ತೀಚೆಗೆ ಹೊನ್ನಾವರದಲ್ಲಿ ನಡೆದ ಕೋಮುಗಲಭೆಯಲ್ಲಿ ಪರೇಶ್ ಮೇಸ್ತ ಕಾಣೆಯಾಗಿ, ಕೆಲವು ದಿನಗಳ ನಂತರ ಅವರ ಮೃತ ದೇಹ ಕೆರೆಯೊಂದರಲ್ಲಿ ಪತ್ತೆಯಾಗಿತ್ತು. ಪರೇಶ್ ಮೇಸ್ತ ಕೊಲೆ ತನಿಖೆಗೆ ಆಗ್ರಹಿಸಿ ಹಿಂದೂ ಸಂಘಟನೆಗಳು ಭಾರೀ ಪ್ರಮಾಣದಲ್ಲಿ ಪ್ರತಿಭಟನೆ ನಡೆಸಿದ್ದವು.

ಸೂಕ್ತ ತನಿಖೆಗೆ ಆಗ್ರಹಿಸಿ ಕಾರವಾರ ಮತ್ತು ಕುಮಟಾದಲ್ಲಿ ಬಿಜೆಪಿ ಮತ್ತು ಹಿಂದೂಪರ ಸಂಘಟನೆಗಳು ನೀಡಿದ್ದ ಬಂದ್ ಹಿಂಸಾಚಾರದ ರೂಪ ಪಡೆದಿತ್ತು. ಗಲಾಟೆಯಲ್ಲಿ ಓರ್ವ ಪೇದೆ ಗಂಭೀರವಾಗಿ ಗಾಯಗೊಂಡಿದ್ದು, ಹತ್ತಕ್ಕೂ ಹೆಚ್ಚು ಪೊಲೀಸರು ಗಾಯಗೊಂಡಿದ್ದರು. ಹೀಗಾಗಿ ಕಾರವಾರದ ತಾಲೂಕುಗಳಲ್ಲಿ 3 ದಿನಗಳ ಕಾಲ ನಿಷೇಧಾಜ್ಞೆ ಹೇರಲಾಗಿದೆ. ಇಂದು ಶಿರಸಿಯಲ್ಲಿ ಬಿಜೆಪಿ ಮತ್ತು ಹಿಂದೂಪರ ಸಂಘಟನೆಗಳು ಬಂದ್‍ಗೆ ಕರೆ ಕೊಟ್ಟಿದ್ದು, 2000 ಮಂದಿ ಪೊಲೀಸರನ್ನು ನಿಯೋಜಿಸಲಾಗಿದೆ. ಅಲ್ಲದೆ ಪರೇಶ್ ಮೇಸ್ತ ಮರಣೋತ್ತರ ಪರೀಕ್ಷೆ ಬಗ್ಗೆ ಕೆಲವೊಂದು ಪ್ರಶ್ನೆಗಳನ್ನು ಕೇಳಿ ಹೊನ್ನಾವರ ಪೊಲೀಸರು ಉತ್ತರ ಪಡೆದುಕೊಂಡಿದ್ದಾರೆ. ಆದರೆ ಸಂಪೂರ್ಣ ಮರಣೋತ್ತರ ಪರೀಕ್ಷೆಯ ವರದಿ ಬರಬೇಕಿದೆ.

Comments are closed.