ಕರ್ನಾಟಕ

ರಾಜ್ಯದ ಜನರ ಮೇಲೆ 38,000 ಸಾಲ ಶೂಲ

Pinterest LinkedIn Tumblr


ಬೆಂಗಳೂರು: ಬಜೆಟ್‌ ಘೋಷಣೆ ಹೊರತಾಗಿ ಹಲವು ಜನಪ್ರಿಯ ಯೋಜನೆಗಳ ಅನುಷ್ಠಾನ, ಅದಕ್ಕೆ ಅಗತ್ಯವಿರುವ ಆದಾಯ ಸಂಗ್ರಹಣೆಯಲ್ಲಿ ನಿರೀಕ್ಷಿತ ಪ್ರಗತಿ ಕಾಣದೇ ಇರುವ ಕಾರಣಗಳಿಂದಾಗಿ ರಾಜ್ಯ ಸರ್ಕಾರದ ಸಾಲದ ಮೊತ್ತ ಪ್ರಸಕ್ತ ಹಣಕಾಸು ವರ್ಷದ ಅಂತ್ಯಕ್ಕೆ 2.50 ಲಕ್ಷ ಕೋಟಿ ರೂ. ದಾಟುವ ಆತಂಕ ಕಾಣಿಸಿಕೊಂಡಿದೆ.

ಒಂದು ವೇಳೆ ಸಲದ ಮೊತ್ತ ಈ ಪ್ರಮಾಣಕ್ಕೆ ಏರಿಕೆಯಾದರೆ ರಾಜ್ಯದ ಪ್ರತಿಯೊಬ್ಬ ಪ್ರಜೆಯ ತಲೆಯ ಮೇಲೆ ಸುಮಾರು 38 ಸಾವಿರ ರೂ.ಗಿಂತ ಹೆಚ್ಚು ಸಾಲದ ಹೊರೆ ಬೀಳಲಿದೆ. 2017-18ನೇ ಸಾಲಿನಲ್ಲಿ 1,86,561 ಕೋಟಿ ರೂ.ನ ಬಜೆಟ್‌ ಮಂಡಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಇದನ್ನು ಕಾರ್ಯರೂಪಕ್ಕೆ ತರಲು 1,44,892 ಕೋಟಿ ರೂ. ರಾಜಸ್ವ ಜಮೆಗಳ ಜತೆಗೆ 37,092 ಕೋಟಿ ರೂ. ಸಾಲ ಮಾಡುವ ಬಗ್ಗೆ ಪ್ರಸ್ತಾಪಿಸಿದ್ದರು. ಇದರಿಂದಾಗಿ ವರ್ಷಾಂತ್ಯಕ್ಕೆ ಸಾಲದ ಮೊತ್ತ 2,42,420 ಕೋಟಿ ರೂ. ತಲುಪಲಿದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ, ಆದಾಯ ಸಂಗ್ರಹದಲ್ಲಿ ಕುಸಿತ ಮತ್ತು ವೆಚ್ಚ ಹೆಚ್ಚಳದಿಂದಾಗಿ ಸಾಲದ ಪ್ರಮಾಣ ಈ ವರ್ಷ 45 ಸಾವಿರ ಕೋಟಿ ರೂ. ದಾಟುವ ಆತಂಕ ಕಾಣಿಸಿಕೊಂಡಿದೆ.

ಬಜೆಟ್‌ನಲ್ಲಿ 1,44,892 ರಾಜಸ್ವ ಸಂಗ್ರಹ ಲೆಕ್ಕಾಚಾರವನ್ನು ಹಿಂದಿನ ವರ್ಷದ ತೆರಿಗೆ ಸಂಗ್ರಹ ಬೆಳವಣಿಗೆಯ ಪ್ರಮಾಣದ (ಪ್ರತಿ ವರ್ಷ ತೆರಿಗೆ ಸಂಗ್ರಹದಲ್ಲಿ ಶೇ. 14ರಿಂದ 15ರಷ್ಟು ಇದ್ದರೆ, ಈ ಬಾರಿ ಶೇ. 16ರಿಂದ ಶೇ. 17ರಷ್ಟು ಏರಿಕೆ ಗುರಿ) ಆಧಾರದ ಮೇಲೆ ಹಾಕಲಾಗಿತ್ತು. ಆದರೆ, ಜಿಎಸ್‌ಟಿ ಜಾರಿಯಿಂದಾಗಿ ತೆರಿಗೆಯ ವಾರ್ಷಿಕ ಬೆಳವಣಿಗೆ ಪ್ರಮಾಣ ನಿರೀಕ್ಷಿತ ಶೇ. 14ರಿಂದ 15ರ ಬದಲು ಶೇ. 7ರಿಂದ 8ರೊಳಗಿದೆ. ಈ ನಷ್ಟದ ಪ್ರಮಾಣವನ್ನು ಕೇಂದ್ರ ಸರ್ಕಾರ ಭರಿಸುತ್ತದೆಯಾದರೂ ಹೆಚ್ಚುವರಿ ಗುರಿಯ ಮೊತ್ತವನ್ನು ಕೇಂದ್ರ ನೀಡುವುದಿಲ್ಲ.

ಇನ್ನೊಂದೆಡೆ ಮುಖ್ಯಮಂತ್ರಿ ಅನಿಲ ಭಾಗ್ಯ ಯೋಜನೆ, ಇಂದಿರಾ ಕ್ಯಾಂಟೀನ್‌ ಯೋಜನೆ ರಾಜ್ಯಾದ್ಯಂತ ವಿಸ್ತರಣೆ ಸೇರಿದಂತೆ ಬಜೆಟ್‌ ನಂತರದಲ್ಲಿ ಕೆಲವು ಜನಪ್ರಿಯ ಯೋಜನೆಗಳನ್ನು ಸರ್ಕಾರ ಘೋಷಿಸಿದ್ದು, ಇದರಿಂದ ಬಜೆಟ್‌ನಲ್ಲಿ ಮೀಸಲಿಟ್ಟ ಅನುದಾನ ಹೊರತಾಗಿ ಹೆಚ್ಚಿನ ಮೊತ್ತವನ್ನು ಒದಗಿಸಬೇಕಾಗಿದೆ. ಇದಲ್ಲದೆ, ರಾಜ್ಯದಲ್ಲಿ ಕಳೆದ ನಾಲ್ಕು ವರ್ಷ ಸತತ ಬರಗಾಲ ವ್ಯಾಪಿಸಿದ್ದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಸಹಕಾರ ಬ್ಯಾಂಕ್‌ಗಳ ಮೂಲಕ ರೈತರು ಮಾಡಿದ್ದ 50 ಸಾವಿರ ರೂ.ವರೆಗಿನ ಸಾಲ ಮನ್ನಾ ಮಾಡಿದ್ದು, ಇದರಿಂದ ಬೊಕ್ಕಸದ ಮೇಲೆ 8165 ಕೋಟಿ ರೂ. ಹೆಚ್ಚುವರಿ ಹೊರೆ ಬಿದ್ದಿದೆ. ಬಜೆಟ್‌ನಲ್ಲಿ ಇದಕ್ಕೆ ಅನುದಾನ ನಿಗದಿಪಡಿಸದ ಕಾರಣ ಈ ಮೊತ್ತವನ್ನು ಹೆಚ್ಚುವರಿಯಾಗಿ ಭರಿಸಬೇಕು. ಈಗಾಗಲೇ ಪೂರಕ ಬಜೆಟ್‌ನಲ್ಲಿ 2999 ಕೋಟಿ ರೂ. ಒದಗಿಸಿದ್ದು, ಇನ್ನೂ 5166 ಕೋಟಿ ರೂ. ನೀಡಬೇಕು.

ಇನ್ನೊಂದೆಡೆ 2018ರ ಜನವರಿಯಲ್ಲಿ ಸರ್ಕಾರಿ ನೌಕರರ ವೇತನಕ್ಕೆ ಸಂಬಂಧಿಸಿದಂತೆ ಆರನೇ ವೇತನ ಆಯೋಗ ತನ್ನ ವರದಿ ನೀಡಲಿದೆ. ಈ ವರದಿಯಂತೆ ವೇತನ ಹೆಚ್ಚಳವನ್ನು ಪೂರ್ವಾನ್ವಯವಾಗುವಂತೆ ಜಾರಿಗೊಳಿಸಿದರೆ ಆಗಲೂ ಕೋಟ್ಯಂತರ ರೂ. ಹೆಚ್ಚುವರಿ ಹೊರೆ ಬೀಳುತ್ತದೆ.

ಸಾಲ ಮಾಡಲೇಬೇಕೇ?: ಪ್ರತಿ ವರ್ಷ ಬಜೆಟ್‌ನಲ್ಲಿ ನಿರೀಕ್ಷಿಸಿದ ಆದಾಯ ಸಂಗ್ರಹವಾಗುವುದೂ ಇಲ್ಲ, ಹೇಳಿದಷ್ಟು ವೆಚ್ಚವೂ ಮಾಡಲು ಸಾಧ್ಯವಾಗುತ್ತಿಲ್ಲ. ಬಜೆಟ್‌ ನಿರೀಕ್ಷೆಯಂತೆ 2017-18ನೇ ಸಾಲಿನಲ್ಲಿ ಎಲ್ಲಾ ಮೂಲಗಳಿಂದ 1,44,892 ರೂ. ಆದಾಯ ಸಂಗ್ರಹವಾಗಬೇಕಾದರೂ ಸದ್ಯದ ಪರಿಸ್ಥಿತಿಯಲ್ಲಿ ನಿಗದಿತ ಆದಾಯ ಸಂಗ್ರಹ ಕಷ್ಟಸಾಧ್ಯ ಎನ್ನಲಾಗಿದೆ. ಅದೇ ರೀತಿ ವೆಚ್ಚದ ಪ್ರಮಾಣವೂ 1,86,561 ಮುಟ್ಟುವ ಸಾಧ್ಯತೆ ಇಲ್ಲ.

ಆದರೆ, ಈ ಬಾರಿ ಸರ್ಕಾರಕ್ಕೆ ಹೆಚ್ಚುವರಿ ವೆಚ್ಚದ ಅನಿವಾರ್ಯತೆ ಸೃಷ್ಟಿಯಾಗಿರುವುದರಿಂದ ಸಾಲ ಮಾಡಲೇಬೇಕಾದ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಿದೆ ಎನ್ನುತ್ತವೆ ಆರ್ಥಿಕ ಇಲಾಖೆ ಮೂಲಗಳು. ಈಗಾಗಲೇ ಸರ್ಕಾರದ ಮೇಲೆ 2.05 ಲಕ್ಷ ಕೋಟಿ ಸಾಲವಿದೆ. ಪ್ರಸಕ್ತ ಆರ್ಥಿಕ ಸಾಲಿನಲ್ಲಿ 37,092 ಸಾವಿರ ಕೋಟಿ ಸಾಲ ಮಾಡುವ ಬಗ್ಗೆ ಪ್ರಸ್ತಾಪಿಸಲಾಗಿದ್ದು, ಆಗ ವರ್ಷಾಂತ್ಯಕ್ಕೆ ಸಾಲದ ಮೊತ್ತ 2,42,420 ಕೋಟಿ ರೂ. ತಲುಪಲಿದೆ ಎಂಬ ನಿರೀಕ್ಷೆ ಹೊಂದಲಾಗಿತ್ತು. ಆದರೆ, ಈಗ ಆಗಿರುವ ಮತ್ತು ಮುಂದೆ ಆಗಲಿರುವ ಹೆಚ್ಚುವರಿ ವೆಚ್ಚ ಹೊಂದಾಣಿಕೆ ಮಾಡಲು ಇತರೆ ಇಲಾಖೆಗಳಿಗೆ ನೀಡಿರುವ ಅನುದಾನ ಕಡಿತಗೊಳಿಸಬೇಕಾಗುತ್ತದೆ. ಶೀಘ್ರದಲ್ಲೇ ಚುನಾವಣೆ ಬರುತ್ತಿರುವುದರಿಂದ ಅನುದಾನ ಕಡಿತಗೊಳಿಸಿದರೆ ರಾಜಕೀಯವಾಗಿ ಸಮಸ್ಯೆ ಎದುರಿಸಬೇಕಾಗುತ್ತದೆ. ಹೀಗಾಗಿ ಹೆಚ್ಚುವರಿ ಸಾಲ ಪಡೆದೇ ಯೋಜನೆಗಳಿಗೆ ಹಣ ಒದಗಿಸಬೇಕು. ಇದರಿಂದ ಸಾಲದ ಮೊತ್ತ 2.5 ಲಕ್ಷ ರೂ. ಮೀರಬಹುದು ಎಂದು ಹೇಳಲಾಗಿದೆ.

ಇಷ್ಟಾದರೂ ಒಟ್ಟಾರೆ ಸಾಲದ ಮೊತ್ತ ರಾಜ್ಯದ ಆಂತರಿಕ ಉತ್ಪನ್ನದ ಶೇ. 20ರ ಆಸುಪಾಸು ಇರಲಿದ್ದು, ಇದು ವಿತ್ತೀಯ ಹೊಣೆಗಾರಿಕೆ ಅಧಿನಿಯಮದಲ್ಲಿರುವಂತೆ ಒಟ್ಟು ಆಂತರಿಕ ಉತ್ಪನ್ನದ ಶೇ. 25ರೊಳಗೆ ಇರುತ್ತದೆ. ಹೀಗಾಗಿ ಆರ್ಥಿಕ ಅಶಿಸ್ತಿನ ಪ್ರಶ್ನೆ ಉದ್ಭವವಾಗುವುದಿಲ್ಲ ಎನ್ನುತ್ತಾರೆ ಅಧಿಕಾರಿಗಳು.

ಸಾಲದ ಹೊರೆ
2013ರಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದಾಗ ಇದ್ದ ಸಾಲ- 1.12 ಲಕ್ಷ ಕೋಟಿ ರೂ.
2013-14ರ ಅಂತ್ಯಕ್ಕೆ ಸಾಲದ ಮೊತ್ತ- 1.36 ಕೋಟಿ ರೂ.
2014-15ರ ಅಂತ್ಯಕ್ಕೆ ಸಾಲದ ಮೊತ್ತ- 1.55 ಲಕ್ಷ ಕೋಟಿ ರೂ.
2015-16ರ ಅಂತ್ಯಕ್ಕೆ ಸಾಲದ ಮೊತ್ತ- 1.80 ಲಕ್ಷ ಕೋಟಿ ರೂ.
2016-17ರ ಅಂತ್ಯಕ್ಕೆ ಸಾಲದ ಮೊತ್ತ- 2.05 ಲಕ್ಷ ಕೋಟಿ ರೂ.
2017-18ರ ಅಂತ್ಯಕ್ಕೆ ನಿರೀಕ್ಷಿತ ಸಾಲ- 2.42 ಲಕ್ಷ ಕೋಟಿ ರೂ.

– ಪ್ರದೀಪ್‌ ಕುಮಾರ್‌ ಎಂ.

-ಉದಯವಾಣಿ

Comments are closed.