ಕರ್ನಾಟಕ

ರಮ್ಯಾ ಉಸಾಬರಿ ನಮಗ್ಯಾಕೆ ಎಂದ ಕಾಂಗ್ರೆಸ್‌ ನಾಯಕರು!

Pinterest LinkedIn Tumblr


ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಮೋಹಕ ತಾರೆ ಎನಿಸಿಕೊಂಡ ರಮ್ಯಾ ಹೆಸರು ರಾಜ್ಯ ಕಾಂಗ್ರೆಸ್‌ ಪಡಸಾಲೆಯಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ದಿಢೀರ್‌ ರಾಜಕೀಯ ಪ್ರವೇಶಿಸಿ, ಸಂಸದೆಯಾಗಿ ನಂತರ ಕಾಂಗ್ರೆಸ್‌ ಪಕ್ಷದಲ್ಲಿ ಸಾಮಾಜಿಕ ಜಾಲ ತಾಣದ ರಾಷ್ಟ್ರೀಯ ಅಧ್ಯಕ್ಷೆಯಾಗಿರುವ ಮಾಜಿ ಸಂಸದೆ ರಮ್ಯಾ ಬುಧವಾರ ಹುಟ್ಟು ಹಬ್ಬ ಆಚರಿಸಿಕೊಂಡಿದ್ದಾರೆ. ಆದರೆ, ಅವರು ಎಲ್ಲಿದ್ದಾರೆ ಎನ್ನುವುದು ಮಾತ್ರ ರಾಜ್ಯ ಕಾಂಗ್ರೆಸ್ಸಿಗರಿಗೆ ಗೊತ್ತಿಲ್ಲ.

ರಾಜ್ಯ ಕಾಂಗ್ರೆಸ್‌ನಲ್ಲೂ ರಮ್ಯಾ ಬಗ್ಗೆ ಚರ್ಚೆಯಾಗುತ್ತಲೇ ಇವೆ. ಆದರೆ ಯಾವ ಸಂಗತಿಗಳೂ ಗೊತ್ತಾಗುತ್ತಿಲ್ಲ ಎಂದು ಹೇಳಲಾಗುತ್ತಿದೆ. ಸದ್ಯ ರಮ್ಯಾ ಎಲ್ಲಿದ್ದಾರೆ? ರಾಜ್ಯ ರಾಜಕಾರಣಕ್ಕೆ ಬರುತ್ತಾರಾ ಅಥವಾ ದೆಹಲಿಯಲ್ಲಿಯೇ ಉಳಿಯುತ್ತಾರಾ ? ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡ್ತಾರಾ? ಎಂಪಿ ಚುನಾವಣೆಗೆ ಬರ್ತಾರಾ? ಬಂದರೆ ಯಾವ ಕ್ಷೇತ್ರದಲ್ಲಿ ಸ್ಪರ್ಧೆ ಮಾಡ್ತಾರೆ ಎಂಬ ವಿಷಯಗಳು ಪಕ್ಷದ ವಲಯದಲ್ಲಿ ಚರ್ಚೆಯಾಗುತ್ತಿವೆ. ಆದರೆ, ಈ ಬಗ್ಗೆ ರಾಜ್ಯದ ಯಾವ ನಾಯಕರಲ್ಲಿಯೂ ಸ್ಪಷ್ಟ ಮಾಹಿತಿ ಇಲ್ಲ. ಯಾರೂ ಈ ಬಗ್ಗೆ ಆಲೋಚಿಸುವ, ಬಾಯಿ ಬಿಟ್ಟು ಮಾತನಾಡುವ ಗೋಜಿಗೂ ಹೋಗುತ್ತಿಲ್ಲ.

ಯಾಕೆಂದರೆ, ರಮ್ಯಾಳ ಬಗ್ಗೆ ಮಾತನಾಡಿದ್ರೆ ಎಲ್ಲಿ ಎಡವಟ್ಟಾಗುತ್ತದೆಯೋ ಎಂಬ ಭಯ ರಾಜ್ಯದ ಎಲ್ಲ ನಾಯಕರಿಗೂ ಒಳಗೊಳಗೆ ಕಾಡುತ್ತಿದೆ ಎಂಬ ಮಾತು ಕಾಂಗ್ರೆಸ್‌ ವಲಯದಲ್ಲಿ ಕೇಳಿ ಬರುತ್ತಿದೆ. ರಮ್ಯಾ 2014ರ ಲೋಕಸಭೆ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಲ್ಲಿ ಸೋತ ನಂತರ ಮತ್ತೆ ಕ್ಷೇತ್ರಕ್ಕೆ ವಾಪಸ್‌ ಆಗಿದ್ದು, ರಾಹುಲ್‌ ಗಾಂಧಿ ಆತ್ಮಹತ್ಯೆ ಮಾಡಿಕೊಂಡ ರೈತರ ಮನೆಗಳಿಗೆ ಭೇಟಿ ನೀಡಲು ಮಂಡ್ಯಕ್ಕೆ ಆಗಮಿಸಿದಾಗ. ಆ ಸಂದರ್ಭದಲ್ಲಿ ರಾಹುಲ್‌ ಗಾಂಧಿ ಜೊತೆಗೆ ಮಂಡ್ಯದಲ್ಲಿ ಕಾಣಿಸಿಕೊಂಡ ರಮ್ಯ ಮತ್ತೆ ಒಂದು ವರ್ಷದಿಂದ ಉನ್ನತ ವ್ಯಾಸಂಗ ಅಂತ ವಿದೇಶ ಪ್ರವಾಸ, ನಂತರ ಕಳೆದ ಆರು ತಿಂಗಳಿನಿಂದ ಎಐಸಿಸಿಯಲ್ಲಿ ಸೋಶಿಯಲ್‌ ಮಿಡಿಯಾ ವಿಭಾಗದ ಅಧ್ಯಕ್ಷರಾಗಿ ನೇಮಕಗೊಂಡ ನಂತರ ರಾಜ್ಯಕ್ಕೆ ಕಾಲಿಟ್ಟಿದ್ದು, ರಾಜ್ಯ ನಾಯಕರಿಗೆ ದರ್ಶನ ಕೊಟ್ಟಿದ್ದು ಸಹ ಅಪರೂಪವಾಗಿದೆ.

ರಮ್ಯಾ ಎಐಸಿಸಿ ಉಪಾಧ್ಯಕ್ಷ ರಾಹುಲ್‌ ಗಾಂಧಿ ಅವರೊಂದಿಗೆ ನೇರ ಸಂಪರ್ಕಕ್ಕೆ ಹೊಂದಿರುವುದರಿಂದ ಅವರ ಬಗ್ಗೆ ಏನು ಮಾತನಾಡಿದರೂ ಹೈ ಕಮಾಂಡ್‌ಗೆ ತಲುಪುತ್ತದೆ. ಅದರಿಂದ ಸಮಸ್ಯೆಯಾಗುತ್ತದೆ ಎನ್ನುವ ಕಾರಣಕ್ಕೆ ಸ್ವತ ಕೆಪಿಸಿಸಿ ಅಧ್ಯಕ್ಷರೂ ಕೂಡ ಅವರ ಬಗ್ಗೆ ಮಾತನಾಡಲು ಹಿಂದೇಟು ಹಾಕುತ್ತಾರೆ ಎಂಬ ಮಾತು ಕೇಳಿ ಬರುತ್ತಿದೆ. ರಮ್ಯಾಳ ರಾಜಕೀಯ ನಡೆಯ ಬಗ್ಗೆ ಹೈ ಕಮಾಂಡ್‌ನಿಂದಲೇ ಸೂಚನೆ ಬರುವುದರಿಂದ ರಾಜ್ಯಾಧ್ಯಕ್ಷ, ಸಿಎಂರಿಂದ ಹಿಡಿದು ಎಲ್ಲ ನಾಯಕರು ರಮ್ಯಾ ವಿಷಯದಲ್ಲಿ ಕೇವಲ ಆದೇಶ ಪಾಲನೆ ಮಾಡುವುದು ಬಿಟ್ಟರೆ, ಯಾವುದೇ ರೀತಿಯ ಹೇಳಿಕೆ ಅಭಿಪ್ರಾಯ ವ್ಯಕ್ತಪಡಿಸುವ ಗೋಜಿಗೆ ಹೋಗುವುದಿಲ್ಲ.

ವಿಧಾನಸಭೆ ಚುನಾವಣೆಗೆ ಸ್ಪರ್ಧೆ ಡೌಟು: ರಮ್ಯಾ ಸದ್ಯ ಎಐಸಿಸಿ ಸೋಶಿಯಲ್‌ ಮೀಡಿಯಾ ವಿಭಾಗದ ಮುಖ್ಯಸ್ಥೆ ಆಗಿರುವುದರಿಂದ ಸಧ್ಯ ರಾಜ್ಯ ರಾಜಕಾರಣಕ್ಕೆ ಮರಳುವುದು ಅನುಮಾನ ಎಂಬ ಮಾತುಗಳು ಕೇಳಿ ಬರುತ್ತಿವೆ. ರಾಹುಲ್‌ ಗಾಂಧಿ ಮಹತ್ವದ ಜವಾಬ್ದಾರಿ ವಹಿಸಿರುವುದರಿಂದ ಈಗಾಗಲೇ ಸೋಶಿಯಲ್‌ ಮೀಡಿಯಾ ವಿಂಗ್‌ನಿಂದ ರಮ್ಯಾ ಉತ್ತಮ ಕಾರ್ಯ ನಿರ್ವಹಿಸುತ್ತಿದ್ದು, ರಾಜ್ಯ ವಿಧಾನಸಭೆ ಚುನಾವಣೆಗೆ ಅರ್ಧಕ್ಕೆ ಬಿಟ್ಟು ಬರುವುದು ಅನುಮಾನ ಎನ್ನಲಾಗಿದೆ.

ಈಗಾಗಲೇ ಸಂಸದೆಯಾಗಿ ಹಾಗೂ ಪಕ್ಷದಲ್ಲಿ ರಾಷ್ಟ್ರ ಮಟ್ಟದಲ್ಲಿ ತಮ್ಮದೇ ಆದ ವರ್ಚಸ್ಸು ವೃದ್ಧಿಸಿಕೊಂಡಿರುವ ರಮ್ಯಾ ರಾಜ್ಯ ರಾಜಕಾರಣಕ್ಕಿಂತ ರಾಷ್ಟ್ರ ರಾಜಕಾರಣಕ್ಕೆ ಹೆಚ್ಚಿನ ಆದ್ಯತೆ ನೀಡುವ ಸಾಧ್ಯತೆ ಇದೆ ಎಂಬ ಮಾತುಗಳು ಕಾಂಗ್ರೆಸ್‌ ವಲಯದಲ್ಲಿ ಕೇಳಿ ಬರುತ್ತಿವೆ. ವಿಧಾನಸಭೆ ಚುನಾವಣೆಗೆ ಸ್ಟಾರ್‌ ಪ್ರಚಾರಕಿಯಾಗಿ ಆಗಮಿಸಿ, ಲೋಕಸಭೆ ಚುನಾವಣೆಯಲ್ಲಿಯೇ ಸ್ಪರ್ಧಿಸುವ ಸಾಧ್ಯತೆ ಹೆಚ್ಚಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ರಮ್ಯಾ ಎಲ್ಲಿದ್ದಾರೋ ಗೊತ್ತಿಲ್ಲ. ಅವರ ರಾಜ್ಯ ರಾಜಕೀಯ ಪ್ರವೇಶ ಹೈಕಮಾಂಡ್‌ ನಿರ್ಧಾರ ತೆಗೆದುಕೊಳ್ಳುತ್ತದೆ.
– ದಿನೇಶ್‌ ಗುಂಡೂರಾವ್‌, ಕೆಪಿಸಿಸಿ ಕಾರ್ಯಾಧ್ಯಕ್ಷ.

-ಉದಯವಾಣಿ

Comments are closed.