ಕರ್ನಾಟಕ

ಘೋಷಿತ 50 ತಾಲೂಕುಗಳು ಶೀಘ್ರ ಕಾರ್ಯಾರಂಭ

Pinterest LinkedIn Tumblr


ವಿಧಾನಸಭೆ: “ಈಗಾಗಲೇ ಘೋಷಣೆಯಾಗಿರುವ 50 ನೂತನ ತಾಲೂಕುಗಳು 2018ರ ಜನವರಿ ವೇಳೆಗೆ ಪೂರ್ಣ ಪ್ರಮಾಣದಲ್ಲಿ ಕಾರ್ಯಾರಂಭ ವಾಗಲಿವೆ. ಮತ್ತಷ್ಟು ಹೊಸ ತಾಲೂಕುಗಳ ರಚನೆ ಬೇಡಿಕೆ ಕುರಿತು ಮುಂದಿನ
ದಿನಗಳಲ್ಲಿ ಗಮನ ಹರಿಸಲಾಗುವುದು’ ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಹೇಳಿದ್ದಾರೆ.

ಪ್ರಶ್ನೋತ್ತರ ಅವಧಿಯಲ್ಲಿ ಸೋಮವಾರ ಕಾಂಗ್ರೆಸ್‌ ಸದಸ್ಯ ಟಿ. ರಘುಮೂರ್ತಿ ಪ್ರಶ್ನೆಗೆ ಉತ್ತರಿಸಿದ ಸಚಿವರು, ಈಗಾಗಲೇ 50 ತಾಲೂಕುಗಳನ್ನು ಹೊಸದಾಗಿ ರಚನೆ ಮಾಡಲಾ ಗಿದ್ದು, 2018ರ ಜನವರಿಯಲ್ಲಿ ಪೂರ್ಣ ಪ್ರಮಾಣದಲ್ಲಿ ಕಾರ್ಯಾರಂಭಿಸಲು ವ್ಯವಸ್ಥೆ ಮಾಡಲಾಗುತ್ತಿದೆ. ಈ ನೂತನ ತಾಲೂಕುಗಳ ರಚನೆಗೆ ಅಗತ್ಯವಾದ ಆರ್ಥಿಕ ನೆರವು ನೀಡಲು ಹಣ ಕಾಸು ಇಲಾಖೆ ಒಪ್ಪಿಕೊಂಡಿದೆ. ಹೊಸ ತಾಲೂಕು ರಚನೆ ಕುರಿತು ಮುಂದಿನ ದಿನಗಳಲ್ಲಿ ಗಮನ ಹರಿಸಲಾಗುವುದು ಎಂದು ತಿಳಿಸಿದರು.

ಈ ವೇಳೆ ಮಧ್ಯ ಪ್ರವೇಶಿಸಿದ ಬಿಜೆಪಿಯ ಸಿ.ಟಿ.ರವಿ ಹಾಗೂ ಡಿ.ಎನ್‌.ಜೀವರಾಜ್‌, ಚಿಕ್ಕಮಗಳೂರು ಜಿಲ್ಲೆಯ ಕಳಸವನ್ನೂ ನೂತನ ತಾಲೂಕನ್ನಾಗಿ ಮಾಡಿ ಎಂದು ಆಗ್ರಹಿಸಿದರು. ಜೆಡಿಎಸ್‌ನ ವೈಎಸ್‌ವಿ ದತ್ತ ಮತ್ತು ಎಚ್‌.ಡಿ. ರೇವಣ್ಣ ಕೂಡ ಇದಕ್ಕೆ ಧ್ವನಿಗೂಡಿಸಿದರು. ಮತ್ತಷ್ಟು ಸದಸ್ಯರು ಹೊಸ ತಾಲೂಕುಗಳ ಬೇಡಿಕೆ ಇಟ್ಟರು. ಕಾಂಗ್ರೆಸ್‌ನ ಸಿದ್ದು ನ್ಯಾಮಗೌಡ ಮಾತನಾಡಿ, ಜಮಖಂಡಿ ತಾಲೂಕಿನ ಸಾವಳಗಿ ಕೂಡ ತಾಲೂಕು ಕೇಂದ್ರ ಆಗಲಿ. ಇದು ಮಾಜಿ ಮುಖ್ಯಮಂತ್ರಿ ಬಿ.ಡಿ.ಜತ್ತಿ ಅವರ ಹುಟ್ಟೂರಾಗಿದೆ ಎಂದು ಆಗ್ರಹಿಸಿದರು. ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕು ದೊಡ್ಡದಾಗಿದ್ದು, ಇನ್ನೊಂದು ಹೊಸ ತಾಲೂಕು ಮಾಡುವಂತೆ ಬಿಜೆಪಿಯ ಅಪ್ಪಚ್ಚು ರಂಜನ್‌ ಮನವಿ ಮಾಡಿದರು. ಸದಸ್ಯರ ಪ್ರಸ್ತಾಪಕ್ಕೆ ಪ್ರತಿಕ್ರಿಯಿಸಿದ ಕಂದಾಯ ಸಚಿವರು, ಈ ಎಲ್ಲಾ ಬೇಡಿಕೆಗಳ ಬಗ್ಗೆ ಪರಿಶೀಲಿಸುವ ಭರವಸೆ ನೀಡಿದರು.

-ಉದಯವಾಣಿ

Comments are closed.