ಕರ್ನಾಟಕ

ಖಾಸಗಿ ವೈದ್ಯರ ಮುಷ್ಕರ: ಮುಂದುವರೆದ ಗೊಂದಲ, ಹಲವೆಡೆ ಕಾರ್ಯಾರಂಭ ಮಾಡದ ಒಪಿಡಿ! ಇಂದು ಮತ್ತೆ ನಾಲ್ವರ ಸಾವು, ಸಾವಿನ ಸಂಖ್ಯೆ 46ಕ್ಕೇರಿಕೆ

Pinterest LinkedIn Tumblr

ಬೆಂಗಳೂರು: ಕರ್ನಾಟಕ ಖಾಸಗಿ ಆಸ್ಪತ್ರೆ ನಿಯಂತ್ರಣ ತಿದ್ದುಪಡಿ ವಿಧೇಯಕ(ಕೆಪಿಎಂಇ) ವಿರುದ್ಧ ಖಾಸಗಿ ವೈದ್ಯರು ನಡೆಸುತ್ತಿದ್ದ ಮುಷ್ಕರ ನಿಂತಿದೆಯಾದರೂ, ವೈದ್ಯರ ಪ್ರತಿಭಟನೆ ಸಂಬಂಧ ಖಾಸಗಿ ಆಸ್ಪತ್ರೆಗಳಲ್ಲಿ ಗೊಂದಲ ಮುಂದುವರೆದಿದೆ.

ಇಂದೂ ಕೂಡ ಹಲವು ಖಾಸಗಿ ಆಸ್ಪತ್ರೆಗಳ ಹೊರರೋಗಿಗಳ ವಿಭಾಗ ಬಂದ್ ಆಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಬೆಂಗಳೂರಿನ ಕಿಮ್ಸ್ ಆಸ್ಪತ್ರೆಯಲ್ಲಿ ಒಪಿಡಿ ವಿಭಾಗದಲ್ಲಿ ಜನ ಸೇರಿದ್ದು, ಇದೀಗ ವೈದ್ಯರು ಆಸ್ಪತ್ರೆಗೆ ಆಗಮಿಸಿದ್ದಾರೆ. ನಿನ್ನೆಯಷ್ಟೇ ಹೈಕೋರ್ಟ್ ಹೇಳಿಕೆ ಮೇರೆಗೆ ಮುಷ್ಕರ ವಾಪಸ್ ಪಡೆಯುವುದಾಗಿ ಖಾಸಗಿ ಆಸ್ಪತ್ರೆ ಮತ್ತು ನರ್ಸಿಂಗ್ ಹೋಮ್ ಗಳ ಒಕ್ಕೂಟ “ಫನಾ” ಮುಷ್ಕರ ವಾಪಸ್ ಪಡೆದಿರುವುದಾಗಿ ತಿಳಿಸಿತ್ತು. ಆದರೆ ಇದಕ್ಕೆ ತದ್ವಿರುದ್ಧ ಹೇಳಿಕೆ ನೀಡಿದ್ದ ಮತ್ತೊಂದು ಖಾಸಗಿ ಆಸ್ಪತ್ರೆ ವೈದ್ಯರ ಒಕ್ಕೂಟ ಐಎಂಎ ನಾಳೆ ಸರ್ಕಾರದೊಂದಿಗೆ ಮತ್ತೊಂದು ಸುತ್ತಿನ ಮಾತುಕತೆ ನಡೆಸುವುದಾಗಿ ಹೇಳಿತ್ತು.

ಇದೀಗ ಈ ಗೊಂದಲದ ಹೇಳಿಕೆಗಳಿಂದಾಗಿ ಖಾಸಗಿ ಆಸ್ಪತ್ರೆಗಳಲ್ಲಿ ಗೊಂದಲ ಮುಂದುವರೆದಿದ್ದು, ಇಂದೂ ಕೂಡ ಆಸ್ಪತ್ರೆಗಳ ಹೊರರೋಗಿಗಳ ವಿಭಾಗ ಬಂದ್ ಆಗಿವೆ. ಹೀಗಾಗಿ ರಾಜ್ಯಾದ್ಯಂತ ರೋಗಿಗಳ ಪರದಾಟ ಮುಂದುವರೆದಿದೆ.

ವಿಜಯಪುರದ ಹಲವು ಖಾಸಗಿ ಆಸ್ಪತ್ರೆಗಳಲ್ಲಿ ವೈದ್ಯರಿಲ್ಲದೇ ಆಸ್ಪತ್ರೆ ಬಿಕೋ ಎನ್ನುತ್ತಿದ್ದು, ಆಸ್ಪತ್ರೆಗೆ ಆಗಮಿಸಿದ ಹಲವು ರೋಗಿಗಳು ವೈದ್ಯರಿಲ್ಲದೇ ವಾಪಸ್ ತೆರಳಿದ್ದಾರೆ ಎಂದು ಹೇಳಲಾಗಿದೆ. ಅಂತೆಯೇ ಬೆಳಗಾವಿಯ ಕೆಎಲ್ ಇ ಆಸ್ಪತ್ರೆಯಲ್ಲೂ ವೈದ್ಯರು ಸೇವೆಗೆ ಹಾಜರಾಗಿಲ್ಲ ಎಂಬ ಮಾಹಿತಿ ಲಭ್ಯವಾಗಿದ್ದು, ಬಾಗಲಕೋಟೆಯಲ್ಲೂ ಹಲವು ಖಾಸಗಿ ಆಸ್ಪತ್ರೆಗಳ ಒಪಿಡಿ ವಿಭಾಗ ಇನ್ನೂ ಕಾರ್ಯಾರಂಭ ಮಾಡಿಲ್ಲ. ಇದೇ ಪರಿಸ್ಥಿತಿ ಶಿವಮೊಗ್ಗದಲ್ಲೂ ಮುಂದುವರೆದಿದ್ದು, ಖಾಸಗಿ ಆಸ್ಪತ್ರೆಯ ವೈದ್ಯರು ಸೇವೆಗೆ ಹಾಜರಾಗಿಲ್ಲ ಎಂದು ವರದಿಯಾಗಿದೆ.

ಇದನ್ನು ಹೊರತು ಪಡಿಸಿ ಬೆಂಗಳೂರಿನ ಕಿಮ್ಸ್ ಆಸ್ಪತ್ರೆ, ಬಿಜಿಎಸ್ ಗ್ಲೋಬಲ್ ಆಸ್ಪತ್ರೆಗಳ ಹೊರರೋಗಿಗಳ ವಿಭಾಗ ಕಾರ್ಯಾರಂಭ ಮಾಡಿದ್ದು, ವೈದ್ಯರು ಕಾಯ್ದೆ ವಿರೋಧಿಸಿ ತೋಳಿಗೆ ಕಪ್ಪು ಪಟ್ಟಿ ಧರಿಸಿ ಚಿಕಿತ್ಸೆ ನೀಡುತ್ತಿದ್ದಾರೆ ಎಂದು ವರದಿಯಾಗಿದೆ.

ಇಂದು ಮತ್ತೆ ನಾಲ್ವರ ಸಾವು, ಸಾವಿನ ಸಂಖ್ಯೆ 46ಕ್ಕೇರಿಕೆ
ಖಾಸಗಿ ಆಸ್ಪತ್ರೆಗಳ ಒಪಿಡಿ ಬಂದ್ ಮುಂದುವರೆದಿರುವ ಹಿನ್ನಲೆಯಲ್ಲಿ ರೋಗಿಗಳ ಪರದಾಟ ಮುಂದುವರೆದಿದ್ದು, ಇಂದು ಕೂಡ ನಾಲ್ಕು ಮಂದಿ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗುತ್ತಿದೆ. ಕೊರಟೆಗೆರೆಯಲ್ಲಿ ವ್ಯಕ್ತಿಯೋರ್ವ ಹೃದಯಾಘಾತದಿಂದಾಗಿ ಸಾವನ್ನಪ್ಪಿದ್ದು, ಬಾಗಲಕೋಟೆಯಲ್ಲಿ ಮಹಿಳೆಯೊಬ್ಬರು ಕೀವ್ರ ರಕ್ತದೊತ್ತಡದಿಂದಾಗಿ ಸಾವನ್ನಪ್ಪಿದ್ದಾರೆ. ಮೃತ ಮಹಿಳೆಯನ್ನು ಮುಗಳಖೋಡ ತಾಲೂಕಿನ ಆಶಾಬಿ ಲಢಾಖನಾ ಎಂದು ಗುರುತಿಸಲಾಗಿದೆ. ಅಂತೆಯೇ ಚಳ್ಳಕೆರೆಯಲ್ಲಿ ವಿಷಪೂರಿತ ಆಹಾರ ಸೇವಿಸಿ ಅಸ್ವಸ್ಥರಾಗಿದ್ದ ಇಬ್ಬರು ಮಕ್ಕಳು ಸೂಕ್ತ ಚಿಕಿತ್ಸೆ ದೊರೆಯದೇ ಸಾವನ್ನಪ್ಪಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

Comments are closed.