ಬೆಂಗಳೂರು: ಇತ್ತ ಬಿಜೆಪಿ ಪಕ್ಷದ ಕರ್ನಾಟಕ ಪರಿವರ್ತನಾ ರ್ಯಾಲಿಗೆ ಪರ್ಯಾಯವಾಗಿ ಕಾಂಗ್ರೆಸ್ ಕೂಡ ರ್ಯಾಲಿ ರಾಜಕೀಯಕ್ಕೆ ಮುಂದಾಗಿದ್ದು, ಡಿಸೆಂಬರ್ ನಲ್ಲಿ ಜನಾಶಿರ್ವಾದ ರ್ಯಾಲಿ ಹಮ್ಮಿಕೊಳ್ಳಲು ಯೋಜನೆ ರೂಪಿಸಿದೆ ಎಂದು ಹೇಳಲಾಗುತ್ತಿದೆ.
ಮಾಧ್ಯಮವೊಂದು ವರದಿ ಮಾಡಿರುವಂತೆ ಸ್ವತಃ ಸಿಎಂ ಸಿದ್ದರಾಮಯ್ಯ ಅವರು ಈ ಬಗ್ಗೆ ನಿರ್ಧಾರ ಕೈಗೊಂಡಿದ್ದು, ಡಿಸೆಂಬರ್ ನಲ್ಲಿ ಬೃಹತ್ ಕಾಂಗ್ರೆಸ್ ರ್ಯಾಲಿ ಹಮ್ಮಿಕೊಳ್ಳಲು ನಿರ್ಧರಿಸಿದ್ದಾರೆ ಎಂದು ಹೇಳಲಾಗಿದೆ.
ವರದಿಯಲ್ಲಿರುವಂತೆ ಪ್ರಸ್ತುತ ನಡೆಯುತ್ತಿರುವ ಬಿಜೆಪಿಯ ಕರ್ನಾಟಕ ಪರಿವರ್ತನಾ ರ್ಯಾಲಿಗೆ ವಿರುದ್ಧವಾಗಿ ಕಾಂಗ್ರೆಸ್ ಈ ಜನಾಶಿರ್ವಾದ ರ್ಯಾಲಿಯನ್ನು ಹಮ್ಮಿಕೊಳ್ಳಲು ನಿರ್ಧರಿಸಿದ್ದಾರೆ ಎಂದು ಹೇಳಲಾಗಿದೆ. ಅಂತೆಯೇ ಈ ಬೃಹತ್ ರ್ಯಾಲಿಯನ್ನು ಸುಮಾರು ಒಂದೂವರೆ ತಿಂಗಳ ಕಾಲ ನಡೆಸಲು ಉದ್ದೇಶಿಸಲಾಗಿದ್ದು, ಡಿಸೆಂಬರ್ 15ರಂದು ಚಾಲನೆ ಪಡೆಯುವ ರ್ಯಾಲಿಯನ್ನು ಜನವರಿ 30ರವರೆಗೂ ರಾಜ್ಯಾದ್ಯಂತ ನಡೆಸಲು ನಿರ್ಧರಿಸಲಾಗಿದೆ.
ಅದರಂತೆ ಬೀದರ್ ನಿಂದ ಚಾಮರಾಜನಗರದವರೆಗೂ ರ್ಯಾಲಿ ನಡೆಸಲು ಉದ್ದೇಶಿಸಲಾಗಿದ್ದು, ಪ್ರತೀ ಜಿಲ್ಲೆಯಲ್ಲೂ ಕನಿಷ್ಛ 3 ಬಹಿರಂಗ ಸಭೆಗಳನ್ನು ನಡೆಸಲು ನಿರ್ಧಾರ ಕೈಗೊಳ್ಳಲಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ.
ಆದರೆ ಈ ಸುದ್ದಿಗೆ ಸಂಬಂಧಿಸಿದಂತೆ ಕಾಂಗ್ರೆಸ್ ವಲಯದಿಂದ ಯಾವುದೇ ರೀತಿಯ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಅಂತೆಯೇ ಸಿಎಂ ಸಿದ್ದರಾಮಯ್ಯ ಅವರು ಕೂಡ ಈ ಬಗ್ಗೆ ಯಾವುದೇ ರೀತಿಯ ಮಾಹಿತಿ ನೀಡಿಲ್ಲ.