ಕರ್ನಾಟಕ

7 ವರ್ಷದ ಬಳಿಕವೂ ಪೋಷಕನ ಗುರುತು ಪತ್ತೆಹಚ್ಚಿದ ಹೆಣ್ಣು ಜಿಂಕೆ ಸುಂದರಿ!

Pinterest LinkedIn Tumblr


ಬಳ್ಳಾರಿ: ತಮ್ಮನ್ನು ವಾತ್ಸಲ್ಯದಿಂದ ಸಾಕಿ, ಸಲಹಿದ್ದವರನ್ನು ಪ್ರಾಣಿಗಳು ಎಂದಿಗೂ ಮರೆಯುವುದಿಲ್ಲ ಎಂಬ ಮಾತೊಂದಿದೆ. ಅದಕ್ಕೊಂದು ಸೇರ್ಪಡೆ ಎಂಬಂತೆ ತನ್ನನ್ನು ಸಲಹಿದ್ದ ಪೋಷಕನನ್ನು ಜಿಂಕೆಯೊಂದು(ಹೆಣ್ಣು ಕೃಷ್ಣಮೃಗ) ಸುಮಾರು 7 ವರ್ಷಗಳ ಬಳಿಕ ಗುರುತಿಸಿದ ಘಟನೆ ನಡೆದಿದೆ.

ಬಳ್ಳಾರಿ ಮೃಗಾಲಯದಲ್ಲಿ ಸುಮಾರು 60 ಕೃಷ್ಣಮೃಗಗಳಿದ್ದವು, ಅದರಲ್ಲಿ ಈ ಸುಂದರಿ ಎಂಬ ಪುಟ್ಟ ಜಿಂಕೆಯೂ ಸೇರಿತ್ತು. ಇದೀಗ ಆ ಜಿಂಕೆ ಹಂಪಿ ಸಮೀಪದ ಬಿಳಿಕ್ಕಲ್ ಝೂನಲ್ಲಿದೆ. ಬಿಳಿಕ್ಕಲ್ ಝೂನಲ್ಲಿ ಬಸವರಾಜ್ ಎಂಬವರು ವಾಚರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಅಪರೂಪದ ವಾತ್ಸಲ್ಯ:

ಅಂದು ಬಳ್ಳಾರಿ ಝೂನಲ್ಲಿ ಸುಂದರಿ ಜನ್ಮತಳೆದ ಸಂದರ್ಭದಲ್ಲಿ ಬಸವರಾಜ್ ಅವರು ಮೃಗಾಲಯದಲ್ಲಿದ್ದ ಪ್ರಾಣಿಗಳಿಗೆ ಆಹಾರವನ್ನು ಒದಗಿಸುವ ಕೆಲಸ ನಿರ್ವಹಿಸುತ್ತಿದ್ದರು. ಆಗ ಸುಂದರಿಯ ಪಾಲನೆ ಜತೆಗೆ ಆಹಾರ ನೀಡುತ್ತಿದ್ದರು. ಬಳಿಕ ಅರಣ್ಯ ಇಲಾಖೆಯ ವರ್ಗಾವಣೆ ಪ್ರಕ್ರಿಯೆಯಂತೆ ಬಸವರಾಜ್ ಕಮಲಾಪುರ್ ಪ್ರದೇಶಕ್ಕೆ ವರ್ಗಾವಣೆಗೊಂಡಿದ್ದರು. ಇದೀಗ ಅಟಲ್ ಬಿಹಾರಿ ವಾಜಪೇಯಿ ಝೂನಲ್ಲಿ ಪ್ರಾಣಿಗಳಿಗೆ ಆಹಾರ ನೀಡುವ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಝೂ ನವೆಂಬರ್ 3ರಂದು ಸಾರ್ವಜನಿಕರ ಪ್ರವೇಶಕ್ಕೆ ಮುಕ್ತವಾಗಲಿದೆ.

ಇದೀಗ ಅಟಲ್ ಬಿಹಾರಿ ವಾಜಪೇಯಿ ಮೃಗಾಲಯಕ್ಕೆ ಬಂದಿದ್ದ ಸುಂದರಿ ಸುಮಾರು 7 ವರ್ಷಗಳ ಬಳಿಕ ತನ್ನ ಪೋಷಕ ಬಸವರಾಜ್ ನನ್ನು ಅಚ್ಚರಿ ಎಂಬಂತೆ ಗುರುತಿಸಿದೆ! ಕೇವಲ 2, 3 ವಾರಗಳ ಆರೈಕೆಯಿಂದಲೇ ಜಿಂಕೆ ಮರಿ ತುಂಬಾ ವಾತ್ಸಲ್ಯವನ್ನು ಹೊಂದಿತ್ತು. ಬೇರೆ ಎಲ್ಲಾ ಜಿಂಕೆಗಳು ಬಸವರಾಜ್ ಅವರು ಬಳಿ ಬಂದಾಗ ದೂರ ಹೋಗುತ್ತಿದ್ದರೆ, ಸುಂದರಿ ಮಾತ್ರ ಸಮೀಪಕ್ಕೆ ಬರುತ್ತಿತ್ತಂತೆ! ಅಷ್ಟೇ ಅಲ್ಲ ಬಸವರಾಜ್ ಅವರನ್ನೇ ಹಿಂಬಾಲಿಸುತ್ತಿತ್ತು ಎಂದು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ವರದಿ ತಿಳಿಸಿದೆ.

ತಾನು ಆಹಾರ ನೀಡಿ ಹೊರ ಬಂದ ಮೇಲೂ ಸುಮಾರು ಅರ್ಧ ಗಂಟೆಗಳ ಕಾಲ ನೋಡಿ ಬಳಿಕ ಉಳಿದ ಜಿಂಕೆಗಳ ಜತೆ ಸೇರಿಕೊಳ್ಳುತ್ತದೆ. ಆಹಾರ ನೀಡಲು ಒಳ ಹೋಗುತ್ತಿದ್ದಂತೆಯೇ ಸುಂದರಿ ಹೊರಬರುತ್ತದೆ ಎಂದು ಬಸವರಾಜ್ ತಿಳಿಸಿದ್ದಾರೆ.

ನನಗೆ ಈ ಪ್ರಾಣಿ(ಜಿಂಕೆ)ಯ ನಡೆ ಮತ್ತು ಅದರ ನಡವಳಿಕೆ ತುಂಬಾ ಅಚ್ಚರಿ ತಂದಿತ್ತು. ಬಳ್ಳಾರಿ ಝೂನಲ್ಲಿ ಜನಿಸಿದ್ದ ಈ ಜಿಂಕೆ ನನ್ನ ಇಷ್ಟೊಂದು ನೆನಪಿನಲ್ಲಿ ಇಟ್ಟುಕೊಂಡಿದೆ ಎಂಬುದನ್ನು ನನಗೆ ಊಹಿಸಲು ಸಾಧ್ಯವಿಲ್ಲ ಎಂದು ಹೇಳಿದರು. ಬಸವರಾಜ್ ಅವರು ಬಳ್ಳಾರಿಯ ಗುಡ್ಡೂರಿಯವರು. ಅರಣ್ಯ ಇಲಾಖೆ ಸೇರಿದ್ದ ಬಸವರಾಜ್ ಅವರು ಬಳ್ಳಾರಿ ಝೂಗೆ ವಾಚರ್ ಆಗಿ ನೇಮಕಗೊಂಡಿದ್ದರು.

ಬಸವರಾಜ್ ಗೆ ಪ್ರಾಣಿಗಳೆಂದರೆ ತುಂಬಾ ಇಷ್ಟ, ಅವುಗಳ ಬಗ್ಗೆ ವಿಶೇಷ ಕಾಳಜಿ ಕೂಡಾ. ಈಗ ಸುಂದರಿ ಬಗ್ಗೆ ಹೆಚ್ಚಿನ ನಿಗಾ ವಹಿಸಲು ತೊಡಗಿದ್ದಾರೆ. ಸುಂದೇ ಎಂದು ಕರೆದರೆ ಜಿಂಕೆ ಕೂಡಲೇ ಪ್ರತಿಕ್ರಿಯಿಸುತ್ತದೆ. ಅದು ನನ್ನ ಮಗಳಿದ್ದಂತೆ ಎಂದು ಬಸವರಾಜ್ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.

-ಉದಯವಾಣಿ

Comments are closed.