ಬೆಂಗಳೂರು: ರಾಜ್ಯದ ನಾನಾ ಕೇಂದ್ರ ಕಾರಾಗೃಹಗಳಲ್ಲಿನ 93 ಕೈದಿಗಳನ್ನು ಸನ್ನಡತೆ ಆಧಾರದಲ್ಲಿ ಬಿಡುಗಡೆ ಮಾಡಲು ಸಚಿವ ಸಂಪುಟ ಸಭೆ ಗುರುವಾರ ಸಮ್ಮತಿ ನೀಡಿದೆ.
ಜೀವಾವಧಿ ಶಿಕ್ಷೆಗೆ ಒಳಗಾಗಿದ್ದ ಈ ಕೈದಿಗಳ ಬಿಡುಗಡೆ ಸಂಬಂಧ ರಾಜ್ಯಪಾಲರಿಗೆ ಪ್ರಸ್ತಾವನೆ ಸಲ್ಲಿಸಲಾಗುವುದು. ಬೆಳಗಾವಿ, ಮೈಸೂರು, ಕಲಬುರ್ಗಿ, ವಿಜಯಪುರ, ಬಳ್ಳಾರಿ, ಧಾರವಾಡ ಕೇಂದ್ರ ಕಾರಾಗೃಹಗಳು ಸೇರಿ ಒಟ್ಟು 86 ಪುರುಷ ಹಾಗೂ 7 ಮಹಿಳಾ ಕೈದಿಗಳ ಬಿಡುಗಡೆಗೆ ಒಪ್ಪಿಗೆ ನೀಡಲಾಗಿದೆ ಎಂದು ಸಂಪುಟ ಸಭೆ ಬಳಿಕ ಮಾತನಾಡಿದ ಕಾನೂನು ಸಚಿವ ಟಿ.ಬಿ. ಜಯಚಂದ್ರ ತಿಳಿಸಿದರು.
ಪಿಪಿಪಿ ಯೋಜನೆಯಡಿ ತಲಾ 46,750 ಮೆಟ್ರಿಕ್ ಟನ್ ಸಾಮರ್ಥ್ಯದ 7 ಉಗ್ರಾಣಗಳನ್ನು ತಲಾ 32,800 ಮೆಟ್ರಿಕ್ ಟನ್ ಸಾಮರ್ಥ್ಯದ ಶೀತಲ ಗೃಹಗಳನ್ನಾಗಿ ಪರಿವರ್ತಿಸಲಾಗುವುದು. ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ಖಾಸಗಿ ಸಹಭಾಗಿತ್ವದಲ್ಲಿ ಸಮಗ್ರ ಕೃಷಿ ಅಭಿವೃದ್ಧಿ ಹಾಗೂ ರೈತ ಉತ್ಪಾದಕ ಸಂಸ್ಥೆಗಳ ಕಾರ್ಯಕ್ರಮ ಅನುಷ್ಠಾನಕ್ಕೆ ಸಮ್ಮತಿಸಲಾಗಿದೆ. ತೋಟಗಾರಿಕೆ ಬೆಳೆಗಳ ದರ ಕುಸಿತವಾದಾಗ ಆವರ್ತ ನಿಧಿಯಿಂದ ಬಳಕೆ ಮಾಡಿಕೊಂಡಿರುವ 19.93 ಕೋಟಿ ರೂ. ಮನ್ನಾ ಮಾಡಲು ತೀರ್ಮಾನವಾಗಿದೆ ಎಂದರು.