ಕರ್ನಾಟಕ

ಭದ್ರಾವತಿಯ ಆಲೆಮನೆಗಳಲ್ಲಿ ಕೃತಕ ಬೆಲ್ಲ ತಯಾರಿಕೆ!

Pinterest LinkedIn Tumblr


ಶಿವಮೊಗ್ಗ: ರಾಜ್ಯದಲ್ಲಿ ಗುಣಮಟ್ಟದ ಬೆಲ್ಲ ತಯಾರಿಕೆಯಲ್ಲಿ ಭದ್ರಾವತಿ ನಂಬರ್ 1 ಸ್ಥಾನ ಪಡೆದಿತ್ತು, ಆದರೆ ದಿನ ಕಳೆದಂತೆಲ್ಲಾ ಕೃತಕ ಬೆಲ್ಲ ತಯಾರಾಗುತ್ತಿರುವ ಹಿನ್ನೆಲೆಯಲ್ಲಿ ಭದ್ರಾವತಿ ಬೆಲ್ಲಕ್ಕೆ ಕೆಟ್ಟ ಹೆಸರು ಬರುತ್ತಿದೆ.

ಕೃತಕ ಬೆಲ್ಲ ತಯಾರಾಗುತ್ತಿರುವ ಬಗ್ಗೆ ಮಾಹಿತಿ ಪಡೆದ ಜಿಲ್ಲಾಡಳಿತ ಆಲೆಮನೆಗಳ ಮೇಲೆ ದಾಳಿ ನಡೆಸಿದಾಗ ಅವರಿಗೆ ಅಲ್ಲಿ ಆಘಾತ ಕಾದಿತ್ತು, ಬೆಲ್ಲ ತಯಾರಿಕೆಗೆ ಪ್ರಮುಖವಾದ ಅಂಶವಾದ ಕಬ್ಬನ್ನು ಬಳಸದೇ ಕೇವಲ ರಸಾಯನಿಕಗಳನ್ನು ಉಪಯೋಗಿಸಿ ಬೆಲ್ಲ ತಯಾರಾಗುತ್ತಿರುವುದನ್ನು ಕಂಡು ಅಧಿಕಾರಿಗಳು ಹೌಹಾರಿದ್ದಾರೆ.

ಬಾಗಲಕೋಟದ ಮಹಾಲಿಂಗಪುರ, ಮಂಡ್ಯದ ಪಾಂಡವಪುರದ ಬಳಿಕ ಭದ್ರಾವತಿಯಲ್ಲಿ ರಾಜ್ಯದಲ್ಲೇ ಅತಿಹೆಚ್ಚು ಬೆಲ್ಲ ಉತ್ಪಾದನೆಯಾಗುತ್ತದೆ. ದಶಕಗಳ ಹಿಂದೆ 150ಕ್ಕೂ ಹೆಚ್ಚು ಸಾಂಪ್ರದಾಯಿಕ ಆಲೆಮನೆಗಳಿದ್ದವು. ಈಗ ಅವುಗಳ ಸಂಖ್ಯೆ 92 ಕ್ಕೆ ಇಳಿದಿದೆ.

ಉತ್ಪಾದನೆಯಲ್ಲಿ 3ನೇ ಸ್ಥಾನದಲ್ಲಿದ್ದರೂ ಗುಣಮಟ್ಟದಲ್ಲಿ ಮಾತ್ರ ಭದ್ರಾವತಿ ಬೆಲ್ಲ ರಾಜ್ಯಕ್ಕೆ ನಂ.1 ಸ್ಥಾನದಲ್ಲಿದೆ. ಬೇಡಿಕೆಯನ್ನು ಲಾಭವಾಗಿ ಮಾಡಿಕೊಳ್ಳಲು ಅಡ್ಡದಾರಿ ಹಿಡಿದ ಕೆಲವರು ನಕಲಿ ಬೆಲ್ಲ ತಯಾರಿಕೆಗೆ ಕೈ ಹಾಕಿದ್ದಾರೆ. ಖಚಿತ ಮಾಹಿತಿ ಮೇರೆಗೆ ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಪ್ರಾಧಿಕಾರ ಹಾಗೂ ಪೊಲೀಸ್‌ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದಾಗ ಈ ಸಂಗತಿ ಬಯಲಿಗೆ ಬಂದಿದೆ.

ಪಾಂಡವಪುರ ಮತ್ತು ಮಹಾಲಿಂಗಪುರದಲ್ಲಿ ಬೆಲ್ಲ ತಯಾರಿಯ ಕೊನೆಯಲ್ಲಿ ಉಳಿಯುವ ಬಿಸಾಡುವಂತಹ ಅಂಟು ಬೆಲ್ಲ ಹಾಗೂ ಸಕ್ಕರೆ ಕಾರ್ಖಾನೆಗಳಲ್ಲಿನ ಕಳಪೆ ದರ್ಜೆ ಸಕ್ಕರೆಯನ್ನು ತಂದು ಅದಕ್ಕೆ ನೀರು, ರಸಗೊಬ್ಬರ ಮತ್ತು ಇತರೆ ರಾಸಾಯನಿಕವನ್ನು ಬೆರೆಸಿ, ಬೇಯಿಸಿ ಹದ ತೆಗೆದು ಬೆಲ್ಲ ಮಾಡಲಾಗುತ್ತದೆ. ಇಂತಹ ಬೆಲ್ಲ ಅಸಲಿಯಂತೆ ಕಾಣುತ್ತದೆ. ಕಡಿಮೆ ದರಕ್ಕೆ ಲಭ್ಯವಾಗುವುದರಿಂದ ಡೀಲರ್‌ಗಳು ವ್ಯಾಪಾರಿಗಳಿಗೆ ಸಾಮಾನ್ಯ ಬೆಲ್ಲದಷ್ಟೇ ದರ ವಿಧಿಸಿ ಮಾರಾಟ ಮಾಡುತ್ತಾರೆ.

ನಕಲಿ ಬೆಲ್ಲ ತಯಾರಿಸುವವರು ಬೆಲ್ಲ ಕಾಯಿಸಲು ಉರುವಲಾಗಿ ದ್ವಿಚಕ್ರವಾಹನಗಳ ಹಳೇ ಟೈರ್‌ಗಳು ಮತ್ತು ಪ್ಲಾಸ್ಟಿಕ್‌ಗಳನ್ನು ಬಳಸುತ್ತಿದ್ದಾರೆ. ಅವುಗಳನ್ನು ಬೆಂಗಳೂರಿಂದ ಲಾರಿಗಳಲ್ಲಿ ಲೋಡ್‌ಗಟ್ಟಲೆ ತರಿಸಿ ಆಲೆಮನೆಗಳ ಆವರಣದಲ್ಲಿ ತುಂಬಿಕೊಂಡಿರುವುದು ಪತ್ತೆಯಾಗಿದೆ. ಆಲೆಮನೆ ಮಾಲೀಕರು ನಕಲಿ ಬೆಲ್ಲ ತಯಾರಿಸಿ ಜನರಿಗೆ ವಿಷ ತಿನ್ನಿಸುವುದರ ಜತೆಗೆ ಟೈರ್‌ ಮತ್ತು ಪ್ಲಾಸ್ಟಿಕ್ಕನ್ನು ಭಾರಿ ಪ್ರಮಾಣದಲ್ಲಿ ಸುಟ್ಟು ಪರಿಸರಕ್ಕೆ ಹಾನಿಯನ್ನುಂಟು ಮಾಡುತ್ತಿದ್ದಾರೆ.

ಆಲೆಮನೆಗಳಲ್ಲಿ ದಟ್ಟ ಹೊಗೆ ಎದ್ದು ಸುತ್ತಮುತ್ತಲ ಪ್ರದೇಶದಲ್ಲಿ ಟೈರ್‌ ಸುಟ್ಟ ವಾಸನೆ ಬೀರಿ ನಿವಾಸಿಗಳಿಗೆ ಮೂಗು ಮತ್ತು ಎದೆಯುರಿ ಕಾಣಿಸಿಕೊಳ್ಳುತ್ತಿತ್ತು. ಈ ಬಗ್ಗೆ ನಿವಾಸಿಗಳು ಪೊಲೀಸ್‌ ಠಾಣೆಗೆ ದೂರು ನೀಡಿದಾಗ ಅಸಲಿ ಸಂಗತಿ ಬಯಲಿಗೆ ಬಂದಿದೆ.

ನಕಲಿ ಬೆಲ್ಲ ತಯಾರಿಕೆ ಭದ್ರಾವತಿಯ ಗುಣಮಟ್ಟದ ಬೆಲ್ಲದ ಗೌರವಕ್ಕೆ ಚ್ಯುತಿ ತಂದಿದೆ. ಶುಕ್ರವಾರ ಬೆಳಗ್ಗೆ ಆಲೆಮನೆ ಮಾಲೀಕರ ಸಭೆ ಕರೆದು ನಕಲಿ ಬೆಲ್ಲ ತಯಾರಿಸುವವರಿಗೆ ಎಚ್ಚರಿಕೆ ನೀಡಲಾಗುವುದು ಎಂದು ಆಲೆಮನೆಗಳ ಮಾಲೀಕರ ಸಂಘ ಅಧ್ಯಕ್ಷರು ಮಣಿಶೇಖರ್ ತಿಳಿಸಿದ್ದಾರೆ.

ಬೆಲ್ಲ ತಯಾರಿಸುವುದು ಹೇಗೆ?

ಆಲೆಮನೆಗಳಲ್ಲಿ ಕಬ್ಬು ಅರೆದು ಹಾಲನ್ನು ಹದವಾಗಿ ಕುದಿಸಿ ಬೆಲ್ಲ ಮಾಡುವುದು ಎಲ್ಲರಿಗೂ ಗೊತ್ತು. ಕಬ್ಬು ಅರೆಯದೆ, ಹಾಲನ್ನೂ ಕುದಿಸದೆ ಬೆಲ್ಲ ತಯಾರಿಸಲಾಗುತ್ತಿದೆ. ಪಾಂಡವಪುರ ಮತ್ತು ಮಹಾಲಿಂಗಪುರ ಕಾರ್ಖಾನೆಗಳಲ್ಲಿ ತಿರಸ್ಕರಿಸಿ ಉಳಿದಿರುವ ಕಡಿಮೆ ಗುಣ ಮಟ್ಟದ ಕಬ್ಬನ್ನು ಬಳಸಿ, ಹಾಗೂ ಪ್ಯಾಕ್ಟರಿಗಳಲ್ಲಿ ಉಳಿದ ಕಬ್ಬಿನ ಅವಶೇಷಗಳನ್ನು ಬಳಸಿ ಕೊಂಡು ಈ ನಕಲಿ ಹಾಗೂ ವಿಷಪೂರಿತ ಬೆಲ್ಲ ತಯಾರಿಸಲಾಗುತ್ತಿದೆ.

ಜೊತೆಗೆ ಬೆಲ್ಲ ಕಾಯಿಸಲು ಪ್ಲಾಸ್ಟಿಕ್ ಹಾಗೂ ಟೈರ್ ಕೂಡ ಬಳಸಲಾಗುತ್ತಿದೆ. ಈಸಂಬಂಧಹಲವು ಗ್ರಾಮಸ್ಥರು ದೂರು ನೀಡಿದ ಮೇಲೆ ಅಂಥ ಆಲೆಮನೆಗಳ ಮೇಲೆ ಪೊಲೀಸರು ದಾಳಿ ಮಾಡಿದ್ದಾರೆ, ಈ ವೇಳೆ ಈ ನಕಲಿ ಬೆಲ್ಲ ಮತ್ತು ಹೆಚ್ಚಿನ ಪ್ರಮಾಣದ ಟೈರ್ ಮತ್ತು ಕೆಮಿಕಲ್ ಗಳನ್ನು ವಶಪಡಿಸಿಕೊಂಡಿದ್ದಾರೆ.

Comments are closed.