ಬೆಂಗಳೂರು: ರಾಜ್ಯ ಸರ್ಕಾರದ ಭದ್ರತಾ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಎಂದು ಹೇಳಿಕೊಂಡು ಖಾಸಗಿ ಕಂಪೆನಿಗಳ ಮೇಲೆ ದಾಳಿ ನಡೆಸಿ ಮೊಬೈಲ್ ಮತ್ತು ಟ್ಯಾಬ್‌ಗಳನ್ನು ಕಳವು ಮಾಡುತ್ತಿದ್ದ ಎಂಬಿಎ ಪದವಿಧರ ಸೇರಿದಂತೆ ಇಬ್ಬರನ್ನು ಕೋರಮಂಗಲ ಪೊಲೀಸರು ಬಂಧಿಸಿದ್ದಾರೆ.
ಕೋಲಾರ ಮೂಲದ ಬಿಟಿಎಂ ಲೇಔಟ್ ನಿವಾಸಿ ಇರ್ಫಾನ್ ಪಾಷಾ(30) ಮತ್ತು ಅರ್ಬಾಜ್ ಖಾನ್(21) ಬಂಧಿತರು. ಇವರಿಂದ 3 ಲಕ್ಷ ಮೌಲ್ಯದ 5 ಮೊಬೈಲ್ ಹಾಗೂ 1 ಟ್ಯಾಬ್ ಹಾಗೂ ಪೊಲೀಸರ ಸಮವಸ್ತ್ರ, ಪಿಸ್ತೂಲ್ ಪೌಚ್, ನಕಲಿ ಗುರುತಿನ ಚೀಟಿ ಇತರೆ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಆರೋಪಿಗಳ ಪೈಕಿ ಇರ್ಫಾನ್ ಪಾಷಾ ಸರ್ಕಾರದ ಭದ್ರತೆ ವಿಭಾಗದ ಹೆಚ್ಚುವರಿ ಆಯುಕ್ತ ಹಾಗೂ ಆಡಳಿತ (ಇ-ಆಡಳಿತ) ಎಂಬ ನಕಲಿ ಗುರುತಿನ ಚೀಟಿ ಹೊಂದಿದ್ದು, ಕೆಲ ಖಾಸಗಿ ಕಂಪೆನಿಗಳ ಮೇಲೆ ದಾಳಿ ನಡೆಸಿ ಬೆಳೆಬಾಳುವ ವಸ್ತುಗಳನ್ನು ದೋಚುತ್ತಿದ್ದ. ಕೃತ್ಯಕ್ಕೆ ಅರ್ಬಾಜ್ ಖಾನ್ ಸಹಕಾರ ನೀಡುತ್ತಿದ್ದ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಎಂಬಿಎ ಪದವೀಧರನಾದ ಇರ್ಫಾನ್ ಪೊಲೀಸ್ ಇಲಾಖೆಗೆ ಸೇರಬೇಕೆಂಬ ಬಯಕೆ ಹೊಂದಿದ್ದ. ಆದರೆ, ಸಾಧ್ಯವಾಗಿರಲಿಲ್ಲ. ಕೆಲ ಬೆಂಗಳೂರಿಗೆ ಬಂದು ನಿರುದ್ಯೋಗಿಯಾಗಿದ್ದ. ಈತ ಖಾಸಗಿ ಕಂಪನಿಯಲ್ಲಿ ಬಿಪಿಓ ಕೆಲಸ ಕೊಡಿಸುತ್ತೇನೆಂದು “ಅರೇಕೋ ಸಾಫ್ಟ್ವೇರ್ ಸೆಲ್ಯೂಷನ್’ ಎಂಬ ಕಚೇರಿ ತೆರೆದು ಮೋಸ ಮಾಡುತ್ತಿದ್ದ. ಈ ಮಧ್ಯೆ ಸಹಾಯಕನಾಗಿದ್ದ ಅರ್ಬಾನ್ ಯೋಜನೆ ರೂಪಿಸಿ ಖಾಸಗಿ ವೇಷಭೂಷಣ ಧರಿಸಿ ಖಾಸಗಿ ಕಂಪನಿಗಳ ಮೇಲೆ ದಾಳಿ ನಡೆಸುತ್ತಿದ್ದರು ಎಂದರು.
ಜಸ್ಟ್ ಡಯಲ್, ಆಡಿ ಶೋರೂಂ ಮೇಲೆ ದಾಳಿ
ಅ.16ರಂದು ರಾತ್ರಿ 9 ಗಂಟೆ ಸುಮಾರಿಗೆ ಕೋರಮಂಗಲ 7ನೇ ಬ್ಲಾಕ್‌ನಲ್ಲಿರುವ ಜಸ್ಟ್ ಡಯಲ್ ಕಂಪೆನಿ ಮೇಲೆ ಮಫ್ತಿಯಲ್ಲಿ ಇಬ್ಬರು ದಾಳಿ ನಡೆಸಿದ್ದಾರೆ. ಇದನ್ನು ಪ್ರಶ್ನಿಸಿದ ಭದ್ರತಾ ಸಿಬ್ಬಂದಿಗೆ ಆರೋಪಿಗಳು ತಮ್ಮ ನಕಲಿ ಗುರುತಿನ ಚೀಟಿ ತೋರಿಸಿ ಕಚೇರಿಯಲ್ಲಿ ಮಾದಕ ವಸ್ತು ಮತ್ತು ಮದ್ಯ ಇಟ್ಟಿರುವ ಮಾಹಿತಿ ಇದ್ದು, ದಾಳಿ ನಡೆಸುತ್ತಿದ್ದೇವೆ ಎಂದು ಬೆದರಿಸಿದ್ದಾರೆ.
ಈ ವೇಳೆ ಕಂಪೆನಿಯಲ್ಲಿದ್ದ ಐದು ಐಷಾರಾಮಿ ಮೊಬೈಲ್ ಹಾಗೂ ಎಲೆಕ್ಟ್ರಾನಿಕ್ ವಸ್ತುಗಳನ್ನು ಕಳವು ಮಾಡಿದ್ದರು. ಬಳಿಕ ಹೊಸೂರು ರಸ್ತೆಯ ಪರಪ್ಪನ ಅಗ್ರಹಾರದಲ್ಲಿರುವ ಆಡಿ ಶೋರೂಂ ಮೇಲೂ ಇದೇ ಮಾದರಿಯಲ್ಲಿ ದಾಳಿ ನಡೆಸಿ ಅಮೂಲ್ಯ ವಸ್ತುಗಳನ್ನು ದೋಚಿ ಪರಾರಿಯಾಗಿದ್ದರು.
ಸುಳಿವು ಕೊಟ್ಟ ಸಿಸಿಟಿವಿ ದೃಶ್ಯಗಳು
ಘಟನೆ ಕುರಿತು ಜಸ್ಟ್‌ಡಯಲ್ ಕಂಪೆನಿಯವರು ಕೋರಮಂಗಲ ಠಾಣೆಗೆ ದೂರು ನೀಡಿದ್ದು, ಈ ಸಂಬಂಧ ಡಿಸಿಪಿ ಬೋರಲಿಂಗಯ್ಯ, ಎಸಿಪಿ ಲಕ್ಷಿ$¾àನಾರಾಯಣ ನೇತೃತ್ವದಲ್ಲಿ ತಂಡ ರಚಿಸಿ ಶೋರೂಂಗಳ ಸಿಸಿಟಿವಿಯಲ್ಲಿ ಸೆರೆಯಾಗಿದ್ದ ಆರೋಪಿಗಳ ಚಹರೆ ಪರಿಶೀಲಿಸಿದರು. ಬಳಿಕ ಈ ಭಾಗದ ಮೊಬೈಲ್ ಟವರ್ ಡಂಪ್ ಸಂಗ್ರಹಿಸಿದ್ದರು. ಈ ವೇಳೆ ಇರ್ಫಾನ್ ಖಾನ್ ಬಗ್ಗೆ ಮಾಹಿತಿ ಪತ್ತೆಯಾಗಿತ್ತು. ವಾಟ್ಸಪ್ ಡಿಪಿ ಚಹರೆಯಿಂದ ಆರೋಪಿಯನ್ನು ಗುರುರು ಹಚ್ಚಲಾಯಿತು.
ಡಿಪಿಎಆರ್ ಅಪರ ಕಾರ್ಯದರ್ಶಿ!
ಆರೋಪಿ ಇರ್ಫಾನ್‌ಪಾಷಾ ನಕಲಿ ಗುರುತಿನ ಚೀಟಿ ಹೊಂದಿದ್ದು, ಇದರಲ್ಲಿ ತನ್ನ ಕಚೇರಿಯ ವಿಳಾಸವನ್ನು ವಿಧಾನಸೌಧ ಮೊದಲ ಮಹಡಿ ಕೊಠಡಿ ಸಂಖ್ಯೆ 101 ಎಂದು ನಮೂದಿಸಿದ್ದಾನೆ. ಅಷ್ಟೇ ಅಲ್ಲದೇ, ಸರ್ಕಾರದ ಕಮಿಷನರ್ ಅಪರ ಕಾರ್ಯದರ್ಸಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ(ಇ-ಆಡಳಿತ) ಎಂದು ನಮೂದಿಸಿ ಸ್ಥಿರ ದೂರವಾಣಿ ಸಂಖ್ಯೆ ಮತ್ತು ಇ-ಮೇಲ್, ಪ್ಯಾಕ್ಸ್ ನಂಬರ್ ಮುದ್ರಿಸಿಕೊಂಡಿದ್ದಾನೆ.
ಈ ಹಿಂದೆ ಅನಿರೀಕ್ಷಿತ ಸಂದರ್ಭದಲ್ಲಿ ಡಿಪಿಎಆರ್‌ನ ಹಿರಿಯ ಅಧಿಕಾರಿಯೊಬ್ಬರನ್ನು ಪರಿಚಯಿಸಿಕೊಂಡಿದ್ದ ಆರೋಪಿ ಇರ್ಫಾನ್ ಪಾಷಾ ಅವರಿಂದ ವಿಸಿಟಿಂಗ್ ಕಾರ್ಡ್ ಪಡೆದುಕೊಂಡಿದ್ದ. ಈ ಹಿನ್ನೆಲೆ ಕಾರ್ಡ್ ರೂಪಿಸಿದ್ದಾನೆ ಎಂದು ಎಂದು ಪೊಲೀಸ್ ಅಧಿಕಾರಿಯೊಬ್ಬರು “ಉದಯವಾಣಿ’ಗೆ ತಿಳಿಸಿದರು.
-ಉದಯವಾಣಿ
Comments are closed.