ಕರ್ನಾಟಕ

ಕಸಾಯಿಖಾನೆಗೆ ದಾಳಿ;ಪೊಲೀಸರ ಮೇಲೆ ಹಲ್ಲೆ ; 12 ಸೆರೆ

Pinterest LinkedIn Tumblr


ಬೆಂಗಳೂರು: ಅಕ್ರಮ ಕಸಾಯಿಖಾನೆಗಳ ಮುಚ್ಚಲು ಹೈಕೋರ್ಟ್‌ ನೇಮಿಸಿದ ಕೋರ್ಟ್‌ ಕಮಿಷನರ್‌ ತಂಡ ಹಾಗೂ ಪೊಲೀಸರ ಮೇಲೆ ಕಸಾಯಿಖಾನೆ ಮಾಲೀಕರು ಹಲ್ಲೆ ನಡೆಸಿ, ಪೊಲೀಸರ ವಾಹನವನ್ನು ಜಖಂಗೊಳಿಸಿರುವ ಘಟನೆ ಯಲಹಂಕ ನ್ಯೂಟೌನ್‌ ಠಾಣೆ ವ್ಯಾಪ್ತಿಯಲ್ಲಿ ಮಂಗಳವಾರ ಸಂಜೆ ನಡೆದಿದೆ.

ವಕೀಲರಾದ ಹರೀಶ್‌, ಪ್ರಸನ್ನ, ಪವನ್‌, ಸರ್ಕಾರಿ ಅಭಿಯೋಜಕ ರಾಚಯ್ಯ, ದೂರುದಾರರಾದ ಕವಿತಾ ಜೈನ್‌ ಹಾಗೂ ಜೋಶಿನ್‌ ಆಂಥೋಣಿ ಹಾಗೂ ವಿದ್ಯಾರಣ್ಯಪುರ ಠಾಣೆ ಪೊಲೀಸರ ಮೇಲೆ ಹಲ್ಲೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ನಗರದಲ್ಲಿ ಅಕ್ರಮವಾಗಿ ಕಸಾಯಿಖಾನೆ ಪತ್ತೆ ಹಚ್ಚಿ ಕ್ರಮಕೈಗೊಳ್ಳಲು ಹೈಕೋರ್ಟ್‌ ಕೋರ್ಟ್‌ ಕಮಿಷನರ್‌ ಗಳನ್ನು ನೇಮಿಸಿತ್ತು. ಈ ಹಿನ್ನೆಲೆ ಬೆಟ್ಟಹಳ್ಳಿ ವ್ಯಾಪ್ತಿಯಲ್ಲಿ ಕಳೆದ ಹಲವು ವರ್ಷಗಳಿಂದ ಅಕ್ರಮವಾಗಿ ನಡೆಸುತ್ತಿದ್ದ ಕಸಾಯಿಖಾನೆಗಳನ್ನು ಪತ್ತೆಹಚ್ಚಿ ಮಂಗಳವಾರ ಸಂಜೆ ನೋಟಿಸ್‌ ನೀಡಿ ಕಸಾಯಿಖಾನೆ ಮುಚ್ಚಿಸಲು ಸ್ಥಳೀಯ ಪೊಲೀಸರೊಂದಿಗೆ ಕಮಿಷನರ್‌ಗಳು ಸ್ಥಳಕ್ಕೆ ತೆರಳಿದ್ದರು.

ಆಗ 20ಕ್ಕೂ ಹೆಚ್ಚು ಜಾನುವಾರುಗಳನ್ನು ಕಾಂಪೌಂಡ್‌ ಒಂದರಲ್ಲಿ ಕೂಡಿಹಾಕಲಾಗಿತ್ತು. ಈ ವೇಳೆ 200 ಮೀ. ದೂರದಲ್ಲಿ ಜಾನುವಾರುಗಳನ್ನು ಕೊಲ್ಲುತ್ತಿದ್ದರು. ಆದರೆ, ಕಮಿಷನರ್‌ಗಳನ್ನು ಕಂಡ 100ಕ್ಕೂ ಹೆಚ್ಚು ಸ್ಥಳೀಯರು ಪೊಲೀಸರು ಸೇರಿದಂತೆ ಎಲ್ಲರ ಮೇಲೆ ಹಲ್ಲೆಗೆ ಮುಂದಾದರು. ಅಲ್ಲದೇ ಅಧಿಕಾರಿಗಳ ಕಾರಿನ ಗಾಜುಗಳ ಮೇಲೆ ಕಲ್ಲು ಮತ್ತು ದೊಣ್ಣೆಗಳಿಂದ ದಾಳಿ ನಡೆಸಿ ವಾಹನಗಳನ್ನು ಜಖಂಗೊಳಿಸಿದ್ದಾರೆ. ಕೂಡಲೇ ಮಾಹಿತಿ ಪಡೆದ ಹಿರಿಯ ಪೊಲೀಸರು ಕೆಎಸ್‌ಆರ್‌ಪಿ ತುಕಡಿಯೊಂದಿಗೆ ಸ್ಥಳಕ್ಕೆ ತೆರಳಿ ಪರಿಸ್ಥಿತಿ ನಿಯಂತ್ರಿಸಲು ಕ್ರಮಕೈಗೊಂಡಿದ್ದಾರೆ.

ಈ ವೇಳೆ ಕೆಲವರನ್ನು ಪೊಲೀಸರು ವಶಕ್ಕೆ ಪಡೆದು ಯಲಹಂಕ ನ್ಯೂಟೌನ್‌ ಪೊಲೀಸ್‌ ಠಾಣೆಗೆ ಕೆರದೊಯ್ದರು. ಇದರಿಂದ ಇನ್ನಷ್ಟು ಆಕ್ರೋಶಗೊಂಡ ಒಂದು ಕೋಮಿನವರು ಪೊಲೀಸ್‌ ಠಾಣೆ ಬಳಿ ಮೊಕ್ಕಂ ಹೂಡಿ ದಾಂಧಲೆ ಆರಂಭಿಸಿದರು. ಈ ಸಂದರ್ಭದಲ್ಲಿ ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು
ಲಘು ಲಾಠಿ ಪ್ರಹಾರ ನಡೆಸಿದರು.

ಪೊಲೀಸರ ವಾಹನ ಜಖಂ

ನಾಲ್ಕೈದು ಕಾರುಗಳಲ್ಲಿ ಕೋರ್ಟ್‌ ಕಮಿಷನರ್‌ಗಳು ಸ್ಥಳಕ್ಕೆ ಬರುತ್ತಿದ್ದಂತೆ ಕಸಾಯಿಖಾನೆಯನ್ನು ಮುಚ್ಚಲಾಯಿತು. ಸ್ಥಳಕ್ಕೆ ಹೋಗುತ್ತಿದ್ದಂತೆ ಸಿಬ್ಬಂದಿ ತೆರೆಯುವಂತೆ ಸೂಚಿಸಿದರು ಪ್ರತಿಕ್ರಿಯೆ ನೀಡಲಿಲ್ಲ. ಆಗ ಸಿಬ್ಬಂದಿ ಅಂಗಡಿಯ ಬೀಗ ಹೊಡೆಯಲು ಮುಂದಾದರು. ಇದೇ ವೇಳೆ ಸ್ಥಳೀಯರು ಪೊಲೀಸರು ಮತ್ತು ಅಧಿಕಾರಿಗಳ ಜತೆ ವಾಗ್ವಾದಕ್ಕೀಳಿದರು. ಇದಕ್ಕಿದ್ದಂತೆ ಕಾರುಗಳ ಮೇಲೆ ಕಲ್ಲೂ ತೂರಾಟ ನಡೆಸಿ, ಪೊಲೀಸರು ಮತ್ತು ಅಧಿಕಾರಿಗಳ ಕಾರುಗಳನ್ನು ಜಖಂಗೊಳಿಸಿದ್ದಾರೆ.

ಪೊಲೀಸರಿಂದಲೇ ಮಾಹಿತಿ ಸೋರಿಕೆ?

ಬಿಬಿಎಂಪಿ ವ್ಯಾಪ್ತಿಯಲ್ಲಿ ಅಕ್ರಮವಾಗಿ ಕಾರ್ಯ ನಿರ್ವಹಿಸುತ್ತಿದ್ದ ಕಸಾಯಿಖಾನೆಗಳ ಪರಿಶೀಲನೆ ನಡೆಸುವುದಕ್ಕೆ ಹೈಕೋರ್ಟ್‌ನ ಏಕಸದಸ್ಯ ಪೀಠ ಕಮಿಷನರ್‌ಗಳನ್ನು ನೇಮಿಸಿತ್ತು. ಸ್ಥಳ ಪರಿಶೀಲನೆ ಮೇಲೆ ಕಮಿಷನರ್‌ ಗಳಿಗೆ ಸೂಕ್ತ ಭದ್ರತೆ ವಹಿಸುವಂತೆ ನಗರ ಪೊಲೀಸ್‌
ಆಯುಕ್ತರಿಗೆ ಸೂಚಿಸಲಾಗಿತ್ತು. ಅಲ್ಲದೇ ಭೇಟಿ ನೀಡುವ ಸ್ಥಳಗಳ ಮಾಹಿತಿಯನ್ನು ಬಹಿರಂಗ ಪಡಿಸದ್ದಂತೆಯೂ ಹೇಳಲಾಗ್ತಿತು. ಆದರೂ ಸ್ಥಳೀಯ ಪೊಲೀಸರೇ ಕಸಾಯಿಖಾನೆ ಮಾಲೀಕರಿಗೆ ಅಧಿಕಾರಿಗಳ ದಾಳಿ ಬಗ್ಗೆ ಮಾಹಿತಿ ನೀಡಿದ್ದಾರೆ. ಇದರಿಂದ ಕಮಿಷನರ್‌ ಬರುವ ಮೊದಲೇ ಕಸಾಯಿಖಾನೆಗೆ ಬೀಗ ಹಾಕಲಾಗಿತ್ತು ಎಂದು ಗೋ ಗ್ಯಾಂಗ್‌ ಎಂಬ ಎನ್‌ಜಿಓ ಸಂಸ್ಥೆ ಆರೋಪಿಸಿದೆ.

ಹೈಕೋರ್ಟ್‌ ಸೂಚನೆ

ಅಕ್ರಮವಾಗಿ ಕಸಾಯಿಖಾನೆಗಳನ್ನು ಪತ್ತೆ ಹಚ್ಚಲು ಗೋಗ್ಯಾಂಗ್‌ ಎಂಬ ಎನ್‌ಜಿಒ ಸಂಸ್ಥೆ ಹೈಕೋರ್ಟ್‌ಗೆ ಮನವಿ ಮಾಡಿತ್ತು. ಈ ಹಿನ್ನೆಲೆ ಅಕ್ರಮ ಕಸಾಯಿಖಾನೆ ಪತ್ತೆ ಹಚ್ಚಲು ಮೂರು ಜನರನ್ನೊಳಗೊಂಡ ಕಮಿಷನರ್‌ ತಂಡದ ಸಮಿತಿಯನ್ನು ಹೈಕೋರ್ಟ್‌ ಸೆ.10ರಂದು ರಚಿಸಿತ್ತು.

ಹೈಕೋರ್ಟ್‌ ಸೂಚನೆಯಂತೆ ಸಮಿ ತಿಯ ಆಯುಕ್ತರು ಬೆಟ್ಟಹಳ್ಳಿಯಲ್ಲಿ ಅಕ್ರಮವಾಗಿ ಕಸಾಯಿಖಾನೆ ನಡೆಯು ತ್ತಿದೆ ಎಂಬ ಮಾಹಿತಿ ಮೇರೆಗೆ ನೋಟಿಸ್‌ ನೀಡಲು ಹೋದಾಗ ಘಟನೆ ಸಂಭವಿ ಸಿದೆ ಎಂದು ಕಮಿಷನರ್‌ವೊಬ್ಬರು “ಉದಯವಾಣಿ’ಗೆ ತಿಳಿಸಿದ್ದಾರೆ.

ದಾಳಿಯಲ್ಲಿ ಭಾಗಿಯಾಗಿದ್ದ 12 ಮಂದಿ ಆರೋಪಿಗಳನ್ನು ವಶಕ್ಕೆ ಪಡೆದಿರುವುದಾಗಿ ಬೆಂಗಳೂರು ನಗರ ಪೊಲೀಸ್‌ ಆಯುಕ್ತ ಟಿ.ಸುನೀಲ್‌ಕುಮಾರ್‌ ತಿಳಿಸಿದ್ದಾರೆ.

-ಉದಯವಾಣಿ

Comments are closed.