ಕರ್ನಾಟಕ

ಉಕ್ಕಿನ ಮೇಲ್ಸೇತುವೆ ಯೋಜನೆ: 65 ಕೋಟಿ ಕಮಿಷನ್ ಪಡೆದ ಸಿದ್ದರಾಮಯ್ಯ: ಯಡಿಯೂರಪ್ಪ

Pinterest LinkedIn Tumblr


ಬೆಂಗಳೂರು: ಉಕ್ಕಿನ ಮೇಲ್ಸೇತುವೆ ಯೋಜನೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ₹65 ಕೋಟಿ ಕಮಿಷನ್ ಸಂದಾಯವಾಗಿದೆ ಎಂದು ಬಿಜೆಪಿ ರಾಜ್ಯ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಆರೋಪಿಸಿದರು.

ಸಿದ್ದರಾಮಯ್ಯ ಅವರಿಗೆ ₹65 ಕೋಟಿ ಕಮಿಷನ್ ಸಂದಾಯವಾಗಿರುವ ವಿಚಾರವು ಮುಖ್ಯಮಂತ್ರಿಯವರ ಅಪ್ತ ಹಾಗೂ ವಿಧಾನಪರಿಷತ್ ಸದಸ್ಯ ಗೋವಿಂದರಾಜು ಅವರ ಡೈರಿಯಲ್ಲಿ ಉಲ್ಲೇಖವಾಗಿದೆ. ಡೈರಿಯನ್ನು ಜಾರಿ ನಿರ್ದೇಶನಾಲಯ ತನಿಖೆ ನಡೆಸುತ್ತಿದ್ದು, ಡೈರಿ ಬಹಿರಂಗಗೊಂಡರೆ ಸತ್ಯ ಸಂಗತಿ ಬಯಲಿಗೆ ಬರಲಿದೆ ಎಂದು ಭಾನುವಾರ ಮಾಧ್ಯಮ ಗೋಷ್ಠಿಯಲ್ಲಿ ತಿಳಿಸಿದರು.

ಈ ಡೈರಿಯನ್ನು ನಿಮಗೆ ಜಾರಿ ನಿರ್ದೇಶನಾಲಯ ನೀಡಿದೆಯೇ ಎಂಬ ಪ್ರಶ್ನೆಗೆ, ಈ ಮಾಹಿತಿಯನ್ನು ಕೆಲವು ಕಾಂಗ್ರೆಸ್ ನಾಯಕರು ಮತ್ತು ಪ್ರಾಮಾಣಿಕ ಅಧಿಕಾರಿಗಳು ನನಗೆ ನೀಡಿದ್ದಾರೆ ಎಂದು ಹೇಳಿದರು.

ಗೋವಿಂದರಾಜು ಅವರು ಸಿದ್ದರಾಮಯ್ಯ ಅವರ ಟ್ರೆಜರರ್. ಅವರು ಪೋಸ್ಟ್ ಮ್ಯಾನ್ ರೀತಿ ಕೆಲಸ ಮಾಡುತ್ತಿದ್ದಾರೆ. ಉಕ್ಕಿನ ಮೇಲ್ಸೇತುವೆ ಜಾರಿ ಮಾಡಲು ಮುಖ್ಯಮಂತ್ರಿಯವರ ಶಿಷ್ಯ ಕೋಟಿ ₹150 ಕೋಟಿ ಕಮಿಷನ್ ಅನ್ನು ಪಡೆದಿದೆ. ಅದರಲ್ಲಿ 65 ಕೋಟಿಯನ್ನು ಸಿದ್ದರಾಮಯ್ಯ ಅವರಿಗೆ ತಲುಪಿಸಲಾಗಿದೆ ಎಂದು ಗೋವಿಂದರಾಜು ಅವರ ಡೈರಿಯಲ್ಲಿ ನಮೂದಾಗಿದೆ.

ಈ ಡೈರಿ ಬಿಡುಗಡೆ ಆದರೆ ಉಕ್ಕಿನ ಸೇತುವೆ ಸಂಬಂಧಿಸಿದಂತೆ ಪಡೆದಿರುವ ಲಂಚದ ಪ್ರಸಂಗ ಬಯಲಿಗೆ ಬರುತ್ತದೆ. ಅಗ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜಿನಾಮೆ ನೀಡಬೇಕಾಗುತ್ತದೆ ಎಂದರು.

ಡೈರಿಯಲ್ಲಿ ಸಿದ್ದರಾಮಯ್ಯ ಹೆಸರು ನಮೂದಾಗಿರುವ ವಿಷಯಕ್ಕೆ ಸಂಬಂಧಿಸಿದಂತೆ ಗೋವಿಂದರಾಜು ಅವರು ಹೇಳಿಕೆಯನ್ನು ನೀಡಬೇಕು. ಜಾರಿ ನಿರ್ದೇಶನಾಲಯ ದಾಳಿ ನಡೆಸಿದ್ದು, ಅವರ ಮನೆಯಿಂದ ಡೈರಿ ವಶ ಪಡಿಸಿಕೊಂಡಿರುವುದು ನಿಜವೇ, ಅಲ್ಲವೇ ಎಂಬುದನ್ನು ಗೋವಿಂದರಾಜು ಹೇಳಲಿ ಎಂದರು.

ಪರಿಸರಕ್ಕೆ ಹಾನಿಯುಂಟು ಮಾಡುವ ಉಕ್ಕಿನ ಮೇಲ್ಸೇತುವೆಗೆ ಸಾರ್ವಜನಿಕರ ವಿರೋಧವಿದೆ. ಹಸಿರು ಪೀಠವೂ ತಡೆಯಾಜ್ಞೆ ನೀಡಿದೆ. ಹಾಗಿದ್ದರೂ ತರಾತುರಿಯಲ್ಲಿ ಯೋಜನೆಯನ್ನು ಕಾರ್ಯಗತಗೊಳಿಸಲು ಹೊರಟ್ಟಿದ್ದು ಏತಕ್ಕೆ? ಆರಂಭದಲ್ಲಿ ಇದ್ದ ಯೋಜನಾ ವೆಚ್ಚ ₹1350 ಕೋಟಿಗಳಿಂದ ₹2000 ಕೋಟಿಗೆ ಹೆಚ್ಚಿಸಿದ್ದು ಈ ಕಾರಣಕ್ಕೆ.

₹1000 ಕೋಟಿಯಲ್ಲಿ ಮೊದಲ ಕಂತು:
ಕಾಂಗ್ರೆಸ್ ಹೈಕಮಾಂಡ್ ₹1000 ಕೋಟಿ ತಲುಪಿಸಿರುವ ಪ್ರಕರಣದಲ್ಲಿ ₹65 ಕೋಟಿ ಮೊದಲ ಕಂತು. ಮುಂಬರುವ ದಿನಗಳಲ್ಲಿ ಇನ್ನಷ್ಟು ಹಗರಣಗಳು ಹೊರಬೀಳಲಿವೆ ಎಂದರು.

ಬೆಳಗಾವಿಯಲ್ಲಿ ಇತ್ತಿಚೆಗೆ ಸಚಿವ ರಮೇಶ್ ಜಾರಕಿಹೊಳಿ ಮತ್ತು ಲಕ್ಷ್ಮಿ ಹೆಬ್ಬಾಳ್ಕರ್ ಅವರ ಮನೆಯಲ್ಲಿ ₹162 ಕೋಟಿ ಅಘೋಷಿತ ಆಸ್ತಿ, ₹41 ಲಕ್ಷ ನಗದು ಸಿಕ್ಕಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕಿಂಚಿತ್ತು ಮಾನ ಮರ್ಯಾದೆ ಇದ್ದಿದ್ದರೆ, ತಕ್ಷಣವೇ ಸಚಿವ ರಮೇಶ್ ಜಾರಕಿಹೊಳಿ ಅವರ ರಾಜಿನಾಮೆ ಪಡೆಯಬೇಕಿತ್ತು ಎಂದು ಯಡಿಯೂರಪ್ಪ ಹೇಳಿದರು.

Comments are closed.