ಕರ್ನಾಟಕ

ಗಂಡಸರೇ ಇಲ್ಲದೇ ಅನಾಥವಾದ ಗದಗದ ಈ ಗ್ರಾಮ!

Pinterest LinkedIn Tumblr


ಗದಗ(ಫೆ.11): ಗದಗದ ಆ ಗ್ರಾಮದಲ್ಲಿ ಜಾನುವಾರುಗಳಷ್ಟೆ ಅಲ್ಲ, ದೇವಸ್ಥಾನಗಳು ಕೂಡ ಅನಾಥವಾಗಿವೆ. ತಿನ್ನಲು ಮೇವು ಇಲ್ಲದೇ, ಕುಡಿಯಲು ನೀರಿಲ್ಲದೇ ಜಾನುವಾರುಗಳು ಆರೈಕೆ ಇಲ್ಲದೇ ನರಳಾಡುತ್ತಿವೆ. ನೆಮ್ಮದಿಯನ್ನೇ ಕಳೆದುಕೊಂಡ ಗ್ರಾಮದ ಜನರ ಬದುಕು ಹೇಳತೀರದ್ದಾಗಿದೆ. ಏನಿದು ಅಂತೀರಾ? ನೀವೆ ನೋಡಿ..
ಗದಗ ಜಿಲ್ಲೆ ಶಿರಹಟ್ಟಿ ತಾಲೂಕಿನ ಬಟ್ಟೂರು ಗ್ರಾಮದಲ್ಲಿ ಜಾನುವಾರುಗಳು ಬಾಯಾರಿ ಬಸವಳಿದು ನಿಂತಿವೆ, ಪೂಜೆ ಮಾಡಲು ಪೂಜಾರಿಯೇ ಇಲ್ಲದೇ ಅನಾಥವಾಗಿದೆ ಇಲ್ಲಿನ ದೇವಾಲಯ. ಇನ್ನು ಊರಿನ ಗ್ರಾಮಸ್ಥರಲ್ಲಿ ಕೆಲವರು ಮನೆಗಳಿಗೆ ಬೀಗ ಬಡಿದು ಊರನ್ನೇ ಬಿಟ್ಟಿದ್ದಾರೆ. ಲಕ್ಷ್ಮೇಶ್ವರ ಪೊಲೀಸ್ ಠಾಣೆಗೆ ಬೆಂಕಿ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ದುಷ್ಕರ್ಮಿಗಳ ಬಂಧನಕ್ಕೆ ಪೊಲೀಸರು ಮುಂದಾಗಿದ್ದು, ಇದೇ ಕಾರಣದಿಂದ ಗ್ರಾಮದ ಪುರುಷರು ಬಂಧನದ ಭೀತಿಯಿಂದ ಊರು ಬಿಟ್ಟಿದ್ದಾರೆ. ಇದೆಲ್ಲಾ ಫೆ.5 ರಂದು ನಡೆದ ಬಟ್ಟೂರು ಗ್ರಾಮದ ಶಿವಪ್ಪನ ಲಾಕಪ್ ಡೆತ್ ಎಫೆಕ್ಟ್​..
ಗ್ರಾಮದಲ್ಲಿ ಕಿರಾಣಿ ಅಂಗಡಿ, ಹಿಟ್ಟಿನ ಗಿರಣಿಗಳಿಗೆ ಬೀಗ ಏನೋ ಬಿದ್ದಿದೆ. ಆದರೆ ಕಳೆದ ಆರು ದಿನಗಳಿಂದ ಕಟ್ಟಿದ ಜಾನುವಾರು ಹಗಲು, ರಾತ್ರಿ ಎನ್ನದೇ ಕಟ್ಟಿದ ಜಾಗ ಬಿಟ್ಟು ಕದಲದಂತಾಗಿದೆ. ಮೇವು, ನೀರು ಹಾಕಲು ಗಂಡು ಧಿಕ್ಕಿಲ್ಲದಂತಾಗಿದೆ ಈ ಗ್ರಾಮದಲ್ಲಿ. ಈ ಮೂಕ ಪ್ರಾಣಿಗಳ ರೋಧನೆ ಕಂಡು ಮಹಿಳೆಯರು ಮಮ್ಮುಲ ಮರಗುತ್ತಿದ್ದಾರೆ.
ಪೊಲೀಸರಿಗೆ ಹೆದರಿ ಪೂಜಾರಿಗಳೂ ಕೂಡಾ ದೇವಸ್ಥಾನಕ್ಕೆ ಬೀಗ ಜಡಿದುಕೊಂಡು ಊರು ಬಿಟ್ಟಿದ್ದಾರೆ. ಯಾರೋ ಮಾಡಿದ ತಪ್ಪಿಗೆ ಗ್ರಾಮವೇ ನರುಳುವಂತಾಗಿದೆ. ದಿನದಿಂದ ದಿನಕ್ಕೆ ಬಟ್ಟೂರು ಗ್ರಾಮದ ಪರಿಸ್ಥಿತಿ ಬಿಗಡಾಯಿಸುತ್ತಿದೆ. ಜನರ ನೋವು, ಆಕ್ರಂದನ ಹೆಚ್ಚಾಗುತ್ತಿದೆ. ಇನ್ನಾದರೂ ಜಿಲ್ಲಾಡಳಿತ ಎಚ್ಚೆತ್ತು ಅಮಾಯಕರಿಗೆ ತೊಂದರೆಯಾಗದಂತೆ ಕ್ರಮ ವಹಿಸಬೇಕಿದೆ. ತಪ್ಪು ಮಾಡಿದ ದುಷ್ಕರ್ಮಿಗಳನ್ನು ಬಂಧಿಸಿ ಗ್ರಾಮದಲ್ಲಿ ಮತ್ತೆ ನೆಮ್ಮದಿ ಮರುಕಳಿಸುವಂತೆ ಮಾಡಬೇಕಿದೆ.

Comments are closed.