ರಾಷ್ಟ್ರೀಯ

ತೇಜ್‌ ಬಹದ್ದೂರ್‌ ಕೆಲಸ ಮಾಡುವ ಸ್ಥಳದಲ್ಲೇ ಎರಡು ದಿನ ಇರಲು ಪತ್ನಿಗೆ ಅವಕಾಶ

Pinterest LinkedIn Tumblr


ನವದೆಹಲಿ: ಗಡಿ ಭದ್ರತಾ ಪಡೆಯಲ್ಲಿ ನೀಡಲಾಗುತ್ತಿದ್ದ ಕಳಪೆ ಆಹಾರದ ಬಗ್ಗೆ ಫೇಸ್‌ಬುಕ್‌ನಲ್ಲಿ ವಿಡಿಯೊ ಪೋಸ್ಟ್‌ ಮಾಡಿ ಸುದ್ದಿಯಾಗಿದ್ದ ಯೋಧ ತೇಜ್‌ ಬಹದ್ದೂರ್‌ ಯಾದವ್‌ ಅವರನ್ನು ಭೇಟಿಯಾಗಲು ಪತ್ನಿ ಶರ್ಮಿಳಾ ಯಾದವ್ ಅವರಿಗೆ ದೆಹಲಿ ಹೈಕೋರ್ಟ್‌ ಶುಕ್ರವಾರ ಅನುಮತಿ ನೀಡಿದೆ. ತೇಜ್‌ ಬಹದ್ದೂರ್‌ ಕೆಲಸ ಮಾಡುವ ಸ್ಥಳದಲ್ಲೇ ಎರಡು ದಿನ ಇರಲು ಪತ್ನಿಗೆ ಅವಕಾಶ ಕಲ್ಪಿಸಿದೆ.

ಪತಿ ತೇಜ್‌ ಬಹದ್ದೂರ್‌ ಯಾದವ್‌ ನಾಪತ್ತೆಯಾಗಿದ್ದಾರೆ. ಅವರನ್ನು ಹುಡುಕಿಕೊಡಿ ಎಂದು ಶರ್ಮಿಳಾ ಯಾದವ್‌ ಅವರು ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್‌ ಅರ್ಜಿಯನ್ನು ದೆಹಲಿ ಹೈಕೋರ್ಟ್ ವಿಚಾರಣೆ ನಡೆಸಿತ್ತು. ನ್ಯಾಯಮೂರ್ತಿ ಜಿ.ಎಸ್.ಸಿಸ್ತಾನಿ ಮತ್ತು ವಿಜಯ್‌ ಗೋಯೆಲ್‌ ಅವರನ್ನು ಒಳಗೊಂಡ ವಿಭಾಗೀಯ ಪೀಠ ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಂಡಿತ್ತು.

‘ಯೋಧ ತೇಜ್‌ ಬಹದ್ದೂರ್‌ ಅವರನ್ನು ಗಡಿ ಭದ್ರತಾ ಪಡೆ ಅಕ್ರಮವಾಗಿ ಸೆರೆಯಲ್ಲಿ ಇಟ್ಟಿಲ್ಲ. ಅವರನ್ನು ಜಮ್ಮುವಿನ ಸಾಂಬಾ ವಲಯದ ಕಲಬರಿಯಲ್ಲಿ 88 ನೇ ಬೆಟಾಲಿಯನ್‌ ಮುಖ್ಯಕಚೇರಿಗೆ ವರ್ಗ ಮಾಡಲಾಗಿದೆ’ ಎಂದು ಹೆಚ್ಚುವರಿ ಸಾಲಿಸಿಟರ್ ಜನರಲ್ (ಎಎಸ್‌ಜಿ) ಸಂಜಯ್‌ ಜೈನ್‌ ಅವರು ನ್ಯಾಯಾಲಯಕ್ಕೆ ತಿಳಿಸಿದರು.

‘ಪತಿಗೆ ಜೀವ ಬೆದರಿಕೆ ಇದೆ ಎಂಬ ಆತಂಕ ಪತ್ನಿಗೆ ಇದ್ದರೆ ಅವರು ತಮ್ಮ ಪುತ್ರನ ಜತೆ ಗಂಡನನ್ನು ಭೇಟಿ ಮಾಡಬಹುದು’ ಎಂದು ಅವರು ವಿವರಿಸಿದರು.
‘ಶರ್ಮಿಳಾ ಅವರು ಪತಿಯನ್ನು ಭೇಟಿ ಮಾಡಲು ಎಲ್ಲ ವ್ಯವಸ್ಥೆ ಮಾಡಬೇಕು. ಅದರಲ್ಲಿ ಯಾವುದೇ ತೊಂದರೆಯಾಗ ಬಾರದು.

ಇದಕ್ಕೆ ಬೇಕಾದ ಸಿದ್ಧತೆಗಳನ್ನು ಮಾಡಿಕೊಡಬೇಕು’ ಎಂದು ಕೇಂದ್ರ ಸರ್ಕಾರ ಮತ್ತು ಗಡಿ ಭದ್ರತಾ ಪಡೆಯ ಪರವಾಗಿ ಹಾಜ ರಾಗಿದ್ದ ಎಎಸ್‌ಜಿ ಅವರಿಗೆ ಕೋರ್ಟ್‌ ಸೂಚಿಸಿತು.

Comments are closed.