ಕರ್ನಾಟಕ

ಅಕ್ರಮ ಶಸ್ತ್ರಾಸ್ತ್ರ ಹೊಂದಿದ್ದ ಆರೋಪ ಎದುರಿಸುತ್ತಿರುವ ಪತ್ರಕರ್ತ ಅಗ್ನಿ ಶ್ರೀಧರ್‌ಗೆ ಮಧ್ಯಂತರ ಜಾಮೀನು

Pinterest LinkedIn Tumblr

ಬೆಂಗಳೂರು: ಅಕ್ರಮ ಶಸ್ತ್ರಾಸ್ತ್ರ ಹೊಂದಿದ್ದ ಆರೋಪ ಎದುರಿಸುತ್ತಿರುವ ಪತ್ರಕರ್ತ ಅಗ್ನಿ ಶ್ರೀಧರ್ ಅವರಿಗೆ ನಗರದ 53ನೇ ಸೆಷನ್ಸ್ ನ್ಯಾಯಾಲಯ15 ದಿನಗಳ ಮಧ್ಯಂತರ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.

ನ್ಯಾಯಾಧೀಶರಾದ ವನಮಾಲ ಆನಂದರಾವ್ ಅವರು ಶುಕ್ರವಾರ ಜಾಮೀನು ಅರ್ಜಿಯ ವಿಚಾರಣೆ ನಡೆಸಿದರು. ಶ್ರೀಧರ್ ಪರ ವಾದ ಮಂಡಿಸಿದ ಹಿರಿಯ ವಕೀಲ ಸಿ.ಎಚ್.ಹನುಮಂತರಾಯ, ‘ಬೆದರಿಕೆ ಪ್ರಕರಣದ ಆರೋಪಿ ರೋಹಿತ್, ಮಾರಕಾಸ್ತ್ರಗಳೊಂದಿಗೆ ಶ್ರೀಧರ್ ಮನೆಯಲ್ಲಿ ಅಡಗಿದ್ದಾನೆ. ಆತನನ್ನು ಬಂಧಿಸಬೇಕು ಎಂದು ಪೊಲೀಸರು ನ್ಯಾಯಾಲಯದಿಂದ ಸರ್ಚ್‌ವಾರೆಂಟ್ ಪಡೆದುಕೊಂಡಿದ್ದರು.

ಶೋಧ ನಡೆಸಿದಾಗ ಅಲ್ಲಿ ರೋಹಿತ್ ಸಿಗಲಿಲ್ಲ. ಆತನಿಗೆ ಸೇರಿದ ಮಾರಕಾಸ್ತ್ರಗಳೂ ಪತ್ತೆಯಾಗಲಿಲ್ಲ. ಅಲ್ಲಿಗೆ ಸರ್ಚ್‌ವಾರೆಂಟ್‌ನ ಉದ್ದೇಶ ಸುಳ್ಳಾಯಿತು. ಬರಿಗೈಲಿ ವಾಪಸ್ ಹೋದರೆ ಮುಜುಗರವಾಗುತ್ತದೆ ಎಂದು ಶ್ರೀಧರ್ ಅವರ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿದ್ದಾರೆ’ ಎಂದು ಹೇಳಿದರು.

‘ಶ್ರೀಧರ್ ಮಾತ್ರವಲ್ಲದೆ, ಜತೆಗಿದ್ದ ಸೈಯದ್ ಅಮಾನ್ ಅಲಿಯಾಸ್ ಬಚ್ಚನ್ ಹಾಗೂ ಅವರ ಸೆಕ್ಯುರಿಟಿ ಗಾರ್ಡ್‌ಗಳ ವಿರುದ್ಧವೂ ಪ್ರಕರಣ ದಾಖಲಿಸಿದ್ದಾರೆ. ಬಚ್ಚನ್ ಅವರು ತಮ್ಮ ಕುಟುಂಬದ ಭದ್ರತೆಗಾಗಿ ಸೆಕ್ಯುರಿಟಿ ಏಜೆನ್ಸಿಯೊಂದರಿಂದ ಸಿಬ್ಬಂದಿಯನ್ನು ನೇಮಿಸಿಕೊಂಡಿದ್ದಾರೆ. ಏಜೆನ್ಸಿಯು ಅವರಿಗೆ ರಿವಾಲ್ವರ್‌ಗಳನ್ನು ಕೊಟ್ಟಿದೆ. ಪೊಲೀಸರು ಅವೇ ರಿವಾಲ್ವರ್‌ಗಳನ್ನು ಜಪ್ತಿ ಮಾಡಿದ್ದಾರೆ.’

‘ಶ್ರೀಧರ್ ಅವರು 19 ವರ್ಷಗಳಿಂದ ಅಪರಾಧ ಚಟುವಟಿಕೆಗಳಿಂದ ದೂರ ಉಳಿದಿದ್ದಾರೆ. ತಮ್ಮ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿದ್ದರಿಂದ ಅವರಿಗೆ ಆಘಾತವಾಗಿದೆ. ಎದೆ ನೋವಿನಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. ಹೀಗಾಗಿ, ಜಾಮೀನು ಮಂಜೂರು ಮಾಡಬೇಕು’ ಎಂದು ಹನುಮಂತರಾಯ ವಾದ ಮಂಡಿಸಿದರು.

‘₹ 50 ಸಾವಿರ ಮೊತ್ತದ ವೈಯಕ್ತಿಕ ಬಾಂಡ್ ಹಾಗೂ ಒಬ್ಬರ ಶ್ಯೂರಿಟಿ ನೀಡಬೇಕು, ಪೊಲೀಸರ ವಿಚಾರಣೆಗೆ ಸಹಕರಿಸಬೇಕು, ಸಾಕ್ಷಿಗಳಿಗೆ ಬೆದರಿಕೆ ಹಾಕಬಾರದು’ ಎಂಬ ಷರತ್ತುಗಳನ್ನು ವಿಧಿಸಿ ಜಾಮೀನು ನೀಡಿದರು.

Comments are closed.