ಕರ್ನಾಟಕ

ಇಡೀ ಬೆಂಗಳೂರು ನಗರವನ್ನು ಬೆಚ್ಚಿ ಬೀಳಿಸಿದ್ದ ಎಟಿಎಂ ನಲ್ಲಿ ಮಹಿಳೆ ಮೇಲಿನ ಹಲ್ಲೆ ಪ್ರಕರಣ; ಕೊನೆಗೂ ಸೆರೆ ಸಿಕ್ಕ ಆರೋಪಿ

Pinterest LinkedIn Tumblr

ಬೆಂಗಳೂರು: ಮೂರು ವರ್ಷಗಳ ಹಿಂದೆ ಇಡೀ ಬೆಂಗಳೂರು ನಗರವನ್ನು ಬೆಚ್ಚಿ ಬೀಳಿಸಿದ್ದ ಎಟಿಎಂ ನಲ್ಲಿ ಮಹಿಳೆ ಮೇಲಿನ ಹಲ್ಲೆ ಪ್ರಕರಣದ ಆರೋಪಿ ಕೊನೆಗೂ ಸೆರೆಸಿಕ್ಕಿದ್ದು, ಆಂಧ್ರ ಪ್ರದೇಶದ ಚಿತ್ತೂರಿನಲ್ಲಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ತಿಳಿದುಬಂದಿದೆ.

ಆರೋಪಿಯನ್ನು ಮಧುಕರ ರೆಡ್ಡಿ ಎಂದು ಗುರುತಿಸಲಾಗಿದ್ದು, ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆಯ ಮದನಪಲ್ಲಿ ಪಟ್ಟಣದಲ್ಲಿ ಆತನನ್ನು ಬಂಧಿಸಲಾಗಿದೆ ಎಂದು ತಿಳಿದುಬಂದಿದೆ. ಇನ್ನು ಬಂಧಿತ ವ್ಯಕ್ತಿ ಎಟಿಎಂನಲ್ಲಿ ಹಲ್ಲೆ ಮಾಡಿದ ಆರೋಪಿಯೇ ಎಂಬುದರ ಕುರಿತು ಖಚಿತ ಮಾಹಿತಿ ಇನ್ನು ಹೊರಬಿದ್ದಿಲ್ಲ. ಈ ಬಗ್ಗೆ ಕರ್ನಾಟಕ ಪೊಲೀಸರು ಕೂಡ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. ಹೀಗಾಗಿ ಪ್ರಸ್ತುತ ಆಂಧ್ರಕ್ಕೆ ತೆರಳಿ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ ಬಳಿಕ ಈ ಬಗ್ಗೆ ಸ್ಪಷ್ಟ ಮಾಹಿತಿ ಹೊರ ಬೀಳಲಿದೆ.

ಕಳೆದ ಮೂರುವರೆ ವರ್ಷಗಳ ಹಿಂದೆ ಅಂದರೆ 2013ರ ನವೆಂಬರ್ 19ರಂದು ಬೆಂಗಳೂರಿನ ಕಾರ್ಪೋರೇಷನ್ ಕಚೇರಿ ಆವರಣದಲ್ಲಿರುವ ಕಾರ್ಪೋರೇಷನ್ ಬ್ಯಾಂಕ್ ಎಟಿಎಂ ನಲ್ಲಿ ಹಣ ಡ್ರಾಮಾಡಲು ತೆರಳಿದ್ದ ಜ್ಯೋತಿ ಉದಯ್ ಎಂಬ ಮಹಿಳೆ ಮೇಲೆ ಆರೋಪಿ ಭೀಕರವಾಗಿ ಹಲ್ಲೆ ನಡೆಸಿ ಎಟಿಎಂ ಕಾರ್ಡ್ ಹೊತ್ತು ಪರಾರಿಯಾಗಿದ್ದ. ಜ್ಯೋತಿ ಉದಯ್ ಎಟಿಎಂ ಒಳಗೆ ಹೋಗುತ್ತಿದ್ದಂತೆಯೇ ಎಟಿಎಂನ ಶೆಟರ್ ಮುಚ್ಚಿದ ಆರೋಪಿ ಬಳಿಕ ಹಣ ಡ್ರಾ ಮಾಡಿ ಕೊಡುವಂತೆ ಕೇಳಿದ್ದ. ಇದಕ್ಕೆ ಜ್ಯೋತಿ ಒಪ್ಪದಿದ್ದಾಗೆ ಆಕೆಯ ಮೇಲೆ ತಾನು ತಂದಿದ್ದ ಮಚ್ಚಿನಿಂದ ಭೀಕರವಾಗಿ ಹಲ್ಲೆ ನಡೆಸಿ ಪರಾರಿಯಾಗಿದ್ದ.

ಸುಮಾರು ಹೊತ್ತಿನ ಬಳಿಕ ರಕ್ತದ ಕಲೆಯನ್ನು ಕಂಡ ಸ್ಥಳೀಯರು ಕೂಡಲೇ ಪೊಲೀಸರಿಗೆ ಸುದ್ದಿ ಮುಟ್ಟಿಸಿ ಆಕೆಯನ್ನು ಆಸ್ಪತ್ರೆಗೆ ದಾಖಲು ಮಾಡಿದ್ದರು. ಬರೊಬ್ಬರಿ ನಾಲ್ತು ತಿಂಗಳ ಸತತ ಚಿಕಿತ್ಸೆ ಬಳಿಕ ಜ್ಯೋತಿ ಉದಯ್ ಚೇತರಿಸಿಕೊಂಡಿದ್ದರು. ಆರೋಪಿ ಬಂಧನಕ್ಕಾಗಿ ಬಲೆ ಬೀಸಿದ್ದ ಪೊಲೀಸರು ಸಾಕಷ್ಟು ತಿಂಗಳಗಳ ವರೆಗೆ ತನಿಖೆ ನಡೆಸಿದರೂ ಆತನ ಬಗ್ಗೆ ಮಾಹಿತಿ ಲಭ್ಯವಾಗಿರಲಿಲ್ಲ. ಹೀಗಾಗಿ ಎಟಿಎಂನಲ್ಲಿದ್ದ ಸಿಸಿಟಿವಿ ದೃಶ್ಯಾವಳಿಗಳನ್ನು ವಿವಿಧ ರಾಜ್ಯಗಳಿಗೆ ಕಳುಹಿಸಿ ತನಿಖೆ ನಡೆಸಿದ್ದರು.

ಇದೀಗ ಆಂಧ್ರ ಪ್ರದೇಶದ ಮದನಪಲ್ಲಿಯ ನಲ್ಲಪಲ್ಲಿ ಎಂಬಲ್ಲಿ ನಿಂತಿದ್ದ ಮಧುಕರ್ ರೆಡ್ಡಿಯನ್ನು ಅಲ್ಲಿನ ಓರ್ವ ಟ್ರಾಫಿಕ್ ಪೊಲೀಸರು ಗುರುತಿಸಿ ಅಧಿಕಾರಿಗಳಿಗೆ ವಿಷಯ ಮುಟ್ಟಿಸಿದ್ದು, ಕೂಡಲೇ ಕಾರ್ಯ ಪ್ರವೃತ್ತರಾದ ಆಂಧ್ರ ಪ್ರದೇಶ ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದಾರೆ. ಬಳಿಕ ಆತನನ್ನು ಮೂರು ದಿನಗಳ ವಿಚಾರಣೆಗೊಳಪಡಿಸಿದ್ದು, ಈ ವೇಳೆ ಆತ ಎಟಿಎಂನಲ್ಲಿ ಹಲ್ಲೆ ಮಾಡಿದ್ದು ನಾನೇ ಎಂದು ತಪ್ಪೊಪ್ಪಿಕೊಂಡಿದ್ದಾನೆ ಎಂದು ಹೇಳಲಾಗುತ್ತಿದೆ.

ಈ ವಿಚಾರ ಇದೀಗ ಕರ್ನಾಟಕದ ಪೊಲೀಸರಿಗೂ ವಿಚಾರ ತಿಳಿದಿದ್ದು, ಆತನ ಬಂಧನಕ್ಕೆ ಆಂಧ್ರ ಪ್ರದೇಶಕ್ಕೆ ತೆರಳಿದ್ದಾರೆ. ಅಲ್ಲಿ ಮದನಪಲ್ಲಿ ಕೋರ್ಟ್ ಗೆ ಅರ್ಜಿ ಸಲ್ಲಿಸಿ ನ್ಯಾಯಾಲಯದ ಅನುಮತಿ ಬಳಿಕ ಆರೋಪಿಯನ್ನು ಬೆಂಗಳೂರಿಗೆ ಕರೆತಂದು ವಿಚಾರಣೆ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ.

ಕಾನೂನಿನ ಕಣ್ಣುತಪ್ಪಿಸಲು ಸಾಧ್ಯವಿಲ್ಲ ಎಂಬುದಕ್ಕೆ ಸ್ಪಷ್ಟ ನಿದರ್ಶನ: ಪರಮೇಶ್ವರ್
ಇನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಗೃಹ ಸಚಿವ ಪರಮೇಶ್ವರ ಅವರು, ಕಾನೂನಿನ ಕಣ್ಣಿನಿಂದ ತಪ್ಪಿಸಿಕೊಳ್ಳಲು ಯಾರಿಗೂ ಸಾಧ್ಯವಿಲ್ಲ ಎಂಬುದಕ್ಕೆ ಎಟಿಎಂ ಹಲ್ಲೆ ಪ್ರಕರಣವೇ ಸ್ಪಷ್ಟ ನಿದರ್ಶನವಾಗಿದೆ. ತಪ್ಪಿ ಮಾಡಿದರೆ ಶಿಕ್ಷೆ ಖಂಡಿತ ಎಂದು ಬೆಂಗಳೂರಿನಲ್ಲಿ ಹೇಳಿದ್ದಾರೆ. ಅಂತೆಯೇ ಬಂಧನ ಕುರಿತಂತೆ ಮಾತನಾಡಿದ ಪರಮೇಶ್ವರ ಅವರು, ಆಂಧ್ರ ಪ್ರದೇಶ ಪೊಲೀಸರ ಸಹಕಾರದೊಂದಿಗೆ ಕರ್ನಾಟಕ ಪೊಲೀಸರು ಆಂಧ್ರ ಪ್ರದೇಶದ ಅನಂತಪುರದಲ್ಲಿ ಬಂಧಿಸಿದ್ದಾರೆ ಎಂದು ಹೇಳಿದರು.

Comments are closed.