ಅಂತರಾಷ್ಟ್ರೀಯ

ಟ್ರಂಪ್‌ಗೆ ಮುಖಭಂಗ : ಅಮೆರಿಕಾ ಪ್ರವೇಶ ನಿರ್ಬಂಧಕ್ಕೆ ಕೋರ್ಟ್ ತಡೆ

Pinterest LinkedIn Tumblr

ವಾಷಿಂಗ್ಟನ್: ಮುಸ್ಲಿಮರ ಪ್ರಭಾವವಿರುವ 7 ಪ್ರಮುಖ ದೇಶಗಳಿಂದ ಅಮೆರಿಕಕ್ಕೆ ಬರುವವರ ವೀಸಾ ರದ್ದು ಪಡಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನಿರ್ಧಾರಕ್ಕೆ ಫೆಡರಲ್ ನ್ಯಾಯಾಲಯ ತಡೆಯಾಜ್ಞೆ ನೀಡಿದೆ. ಈ ರೀತಿಯ ವಿವಾದಾತ್ಮಕ ನಿರ್ಧಾರ ಕೈಗೊಳ್ಳುವ ಮೂಲಕ ಅಮೆರಿಕಾದ ನೂತನ ಅಧ್ಯಕ್ಷ ಟ್ರಂಪ್ ವಿಶ್ವದೆಲ್ಲೆಡೆ ಚರ್ಚೆಯ ವಿಷಯವಾಗಿದ್ದಾರೆ.

ಮುಸ್ಲಿಂ ರಾಷ್ಟ್ರಗಳು ಈ ನಿರ್ಧಾರದಿಂದ ಬೆಚ್ಚಿಬೀಳುವಂತಾಗಿದೆ. ಮತ್ತೊಂದೆಡೆ ಟ್ರಂಪ್ ನಿರ್ಧಾರದ ವಿರುದ್ಧ ವ್ಯಾಪಕ ಟೀಕೆಗಳು ವ್ಯಕ್ತವಾಗುತ್ತಿದೆ.

ಏಳು ಮುಸ್ಲಿಂ ರಾಷ್ಟ್ರಗಳ ನಾಗರಿಕರಿಗೆ ಅಮೆರಿಕಾ ಪ್ರವೇಶಿಸಲು ನಿರ್ಬಂಧ ಹೇರಿದ ನಂತರ ಸುಮಾರು 1 ಲಕ್ಷ ವೀಸಾಗಳು ರದ್ದಾಗಿವೆ. ಯೆಮೆನ್ ಸೋದರರಿಬ್ಬರನ್ನು ಡಲ್ಲಾಸ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ವಾಪಸ್ ಕಳುಹಿಸಿದ ಪ್ರಕರಣ ಸಂಬಂಧ ವಿಚಾರಣೆ ನಡೆಸುತ್ತಿದ್ದ ಸಂದರ್ಭದಲ್ಲಿ 1 ಲಕ್ಷ ವೀಸಾಗಳ ರದ್ದತಿ ಕುರಿತ ಮಾಹಿತಿಯನ್ನು ಅಮೆರಿಕಾ ಸರ್ಕಾರ ನ್ಯಾಯಾಲಯಕ್ಕೆ ನೀಡಿದೆ. ಅಮೆರಿಕಾದ ಅಧ್ಯಕ್ಷ ಟ್ರಂಪ್ ಅವರ ನೂತನ ವಲಸೆ ನೀತಿಯಿಂದ ವಿದೇಶಗಳು ಇಕ್ಕಟ್ಟಿಗೆ ಸಿಲುಕಿವೆ.

ಏಳು ಮುಸ್ಲಿಂ ರಾಷ್ಟ್ರಗಳಿಂದ ಅಮೆರಿಕಾದ ಬರುವವರ ವೀಸಾವನ್ನು ನಿಷೇಧಿಸಿ ಅಮೆರಿಕಾ ಅಧ್ಯಕ್ಷ ಟ್ರಂಪ್ ಅವರ ಆದೇಶಕ್ಕೆ ಅಮೆರಿಕಾ ಫೆಡರಲ್ ನ್ಯಾಯಾಧೀಶ ಜೇಮ್ಸ್ ರಾಬರ್ಟ್ ತಾತ್ಕಾಲಿಕ ತಡೆ ನೀಡಿದ್ದು, ಈ ತಡೆ ರಾಷ್ಟ್ರದಾದ್ಯಂತ ಜಾರಿಯಲ್ಲಿರುತ್ತದೆ.

ನ್ಯಾಯಾಲಯದ ತಡೆ ಆದೇಶದಿಂದ ವೀಸಾ ನಿಷೇಧ ಆದೇಶ ಹೊರಡಿಸಿದ್ದ ಅಧ್ಯಕ್ಷ ಟ್ರಂಪ್‌ಗೆ ಭಾರಿ ಹಿನ್ನಡೆಯಾಗಿದೆ.

ಅಮೆರಿಕಾ ಸಂವಿಧಾನದಲ್ಲಿ ದೇಶದ ಕಾನೂನು ಪರಮೋಚ್ಛ, ಅಧ್ಯಕ್ಷರು ಸೇರಿದಂತೆ, ಎಲ್ಲರೂ ಅದಕ್ಕೆ ಬದ್ಧರಾಗಿರಬೇಕು. ಅದರ ಮೇಲೆ ಮೇಲುಗೈ ಯಾರಿಗೂ ಇಲ್ಲ ಎಂದು ವಾಷಿಂಗ್ಟನ್ ಆಟಾರ್ನಿ ಜನರಲ್ ಫೆರ್ಗೂಸನ್ ಹೇಳಿದ್ದಾರೆ. ಅಧ್ಯಕ್ಷ ಟ್ರಂಪ್‌ರ ವೀಸಾ ನಿಷೇಧ ಆದೇಶವನ್ನು ಫರ್ಗೂಸನ್ ವಿರೋಧಿಸಿದ್ದರು.

ಇರಾನ್, ಇರಾಕ್, ಲಿಬಿಯಾ, ಸೋಮಾಲಿಯಾ, ಸು‌ಡಾನ್, ಸಿರಿಯಾ ಮತ್ತು ಎಮೆನ್‌ನಿಂದ ಅಮೆರಿಕಾಗೆ ವಿವಿಧ ಉದ್ದೇಶಗಳಿಂದ ಬರುವವರು ಹಾಗೂ ವಲಸೆಗಾರರಿಗೆ, ನ್ಯಾಯಾಲಯದ ಈ ತಡೆ ಆದೇಶ ತಕ್ಷಣದ ಉಪಶಮನವಾಗಿದೆ. ಈ ಆದೇಶ ದೇಶದಾದ್ಯಂತ ಅನ್ವಯವಾಗುವುದರಿಂದ, ಅಧ್ಯಕ್ಷ ಟ್ರಂಪ್ ಅವರ ವೀಸಾ ನಿಷೇಧ ಆದೇಶವನ್ನು ಜಾರಿ ಮಾಡಲು ಅಧಿಕಾರಿಗಳಿಗೆ ಸಾಧ್ಯವಾಗುವುದಿಲ್ಲ.

ಆದೇಶವನ್ನು ಪ್ರಶ್ನಿಸುತ್ತೇವೆ
ಇದೇ ವೇಳೆ ನ್ಯಾಯಾಲಯದ ಈ ತಡೆ ಆದೇಶವನ್ನು ಪ್ರಶ್ನಿಸಿ ತಕ್ಷಣದಲ್ಲಿಯೇ ತುರ್ತು ಮೇಲ್ಮನವಿ ಸಲ್ಲಿಸುವುದಾಗಿ ಶ್ವೇತ ಭವನ ತಿಳಿಸಿದೆ.

ಅಧ್ಯಕ್ಷ ಟ್ರಂಪ್ ಅವರ ಆದೇಶ, ಭಯೋತ್ಪಾದಕರಿಂದ ಮತ್ತು ಅಮೆರಿಕಾ ವಿರೋಧಿ ಶಕ್ತಿಗಳಿಂದ ಅಮೆರಿಕಾವನ್ನು ರಕ್ಷಿಸುವ ಉದ್ದೇಶದಿಂದ ಕೂಡಿತ್ತು. ಅಮೆರಿಕಾದ ಆಂತರಿಕ ರಕ್ಷಣೆಯ ಹಿನ್ನೆಲೆಯಲ್ಲಿ ಅಧ್ಯಕ್ಷರ ಕಾರ್ಯಕಾರಿ ಆದೇಶ ಸೂಕ್ತ ಹಾಗೂ ಕಾನೂನು ಸಮ್ಮತವಾಗಿತ್ತು ಎಂದು ಶ್ವೇತಭವನದ ಮಾಧ್ಯಮ ಕಾರ್ಯದರ್ಶಿ ಸೆಯಾನ್ ಸ್ಪೈಸರ್ ಹೇಳಿದ್ದಾರೆ.

ಯಾವುದೇ ದೇಶದಿಂದ ಅಮೆರಿಕಾದ ಹಿತಕ್ಕೆ ಧಕ್ಕೆ ತರುವವರು, ಅಮೆರಿಕಾವನ್ನು ದ್ವೇಷಿಸುವವರು, ಅಮೆರಿಕಾ ಪ್ರವೇಶಿಸದಂತೆ ತಡೆಯುವ ಮೂಲಕ ಅಮೆರಿಕನ್ನರ ರಕ್ಷಣೆ ಉದ್ದೇಶದಿಂದ ಅಧ್ಯಕ್ಷರು ಕೈಗೊಳ್ಳುವ ತೀರ್ಮಾನ, ನೀಡುವ ಆದೇಶಗಳು ಸಂವಿಧಾನಾತ್ಮಕ ಆಶಯ ಮತ್ತು ಅಧಿಕಾರವನ್ನು ಹೊಂದಿರುತ್ತದೆ ಎಂದು ಸೆಯಾನ್ ಸ್ಪೈಸರ್ ಹೇಳಿದ್ದಾರೆ.

ಕಳೆದ ವಾರ ಆದೇಶ
ಏಳು ಮುಸ್ಲಿಂ ಬಹುಸಂಖ್ಯಾತ ರಾಷ್ಟ್ರಗಳಿಂದ ಅಮೆರಿಕಾಗೆ ಬರುವವರ ವೀಸಾಗಳ ಮೇಲೆ ನಿಷೇಧ ಹೇರಿ ಕಳೆದ ವಾರ ಅಧ್ಯಕ್ಷ ಟ್ರಂಪ್ ಆದೇಶ ನೀಡಿದ್ದರು.

ಈ ಆದೇಶ ಜಾರಿಯಿಂದ ಮುಸ್ಲಿಂ ರಾಷ್ಟ್ರಗಳಿಂದ ವಿವಿಧ ಉದ್ದೇಶಗಳಿಗಾಗಿ ಅಮೆರಿಕಾಗೆ ಬರುವವರ ಮತ್ತು ಆ ರಾಷ್ಟ್ರಗಳಿಂದ ಅಮೆರಿಕಾಗೆ ಬರುವ ವಲಸಿಗರ ವೀಸಾಗಳ ಕುರಿತಂತೆ ಕಠಿಣ ಪರಿಶೀಲನೆಗೆ ಒಳಪಡಿಸುವ ಅವಕಾಶವೂ ಆ ಆದೇಶ ನೀಡಿತು. ಟ್ರಂಪ್ ಅವರ ಈ ಆದೇಶಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿತ್ತು.

ಅಮೆರಿಕಾದ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಅವರು ಈ ತಾರತಮ್ಯ ನೀತಿಯನ್ನು ಕಟುವಾಗಿ ಟೀಕಿಸಿದ್ದರು.

Comments are closed.