ಕರ್ನಾಟಕ

ರಾಜ್ಯದಲ್ಲಿ ಮಧ್ಯಂತರ ವಿಧಾನಸಭೆ ಚುನಾವಣೆ: ಹೆಚ್.ಡಿ. ಕುಮಾರಸ್ವಾಮಿ

Pinterest LinkedIn Tumblr


ಬೆಂಗಳೂರು, ಫೆ. ೨- ರಾಜ್ಯ ಸರ್ಕಾರದಲ್ಲಿನ ಇತ್ತೀಚಿನ ಬೆಳವಣಿಗೆಗಳನ್ನು ಗಮನಿಸಿದರೆ ವಿಧಾನಸಭೆಗೆ ಇದೇ ವರ್ಷ ಮಧ್ಯಂತರ ಚುನಾವಣೆ ನಡೆಯುವ ಸಾಧ್ಯತೆ ಇದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ, ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಇಂದಿಲ್ಲಿ ಭವಿಷ್ಯ ನುಡಿದರು.

ಸರ್ಕಾರದಲ್ಲಿನ ದಿನನಿತ್ಯದ ಬೆಳವಣಿಗೆಗಳನ್ನು ನೋಡ್ತಾ ಇದ್ದರೆ ಸರ್ಕಾರ ಇನ್ನೂ ಅರೇಳು ತಿಂಗಳಲ್ಲಿ ಪಥನಗೊಳ್ಳಲಿದೆ. ಗುಜರಾತ್‌ ವಿಧಾನಸಭೆಗೆ ಚುನಾವಣೆ ನಡೆಯುವ ಸಂದರ್ಭದಲ್ಲೇ ರಾಜ್ಯ ವಿಧಾನಸಭೆಗೂ ಅವಧಿಗೆ ಮುನ್ನ ಚುನಾವಣೆ ಎದುರಾಗುವ ಲಕ್ಷಣಗಳು ಗೋಚರಿಸುತ್ತಿವೆ ಎಂದರು.

ಬಿಗ್‌ಬಾಸ್ ಕಾರ್ಯಕ್ರಮದಲ್ಲಿ ಪ್ರಥಮ ಸ್ಥಾನಗಳಿಸಿರುವ ಪ್ರಥಮ್ ಅವರು ತಮ್ಮನ್ನು ಭೇಟಿ ಮಾಡಿದ ಸಂದರ್ಭದಲ್ಲಿ ಅವರನ್ನು ಅಭಿನಂದಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಪೂರ್ಣಾವಧಿ ಮುಗಿಸುವ ಲಕ್ಷಣಗಳು ಕಾಣುತ್ತಿಲ್ಲ. 2018 ಕ್ಕೆ ಬದಲಾಗಿ ಇದೇ ವರ್ಷ ವಿಧಾನಸಭೆಗೆ ಚುನಾವಣೆ ಎದುರಾಗಲಿದೆ ಎಂದರು.

ವ್ಯಂಗ್ಯ

ಬಿಜೆಪಿ ನಾಯಕರು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ 150 ಸ್ಥಾನ ಗೆಲ್ಲುತ್ತೇವೆ ಎಂದು ಈಗಾಗಲೇ ಎಲ್ಲ ಕಡೆ ಹೇಳಿಕೊಂಡು ಬರುತ್ತಿದ್ದಾರೆ. ಪರಿಸ್ಥಿತಿ ಹೀಗಿರುವಾಗ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿರುವ ಕೇಂದ್ರದ ಮಾಜಿ ಸಚಿವ ಎಸ್.ಎಂ. ಕೃಷ್ಣ ಅವರು ಬಿಜೆಪಿಗೆ ಸೇರಿದರೆ ಆನೆಬಲ ಬಂದಂತಾಗುತ್ತದೆ ಎಂದು ಆ ಪಕ್ಷದ ನಾಯಕರೇ ಹೇಳುತ್ತಿದ್ದಾರೆ ಎಂದು ಕುಮಾರಸ್ವಾಮಿ ವ್ಯಂಗ್ಯವಾಡಿದರು.

ಬಿಜೆಪಿಯನ್ನು ಕಟ್ಟಿ ಬೆಳೆಸಿದ ಹಿರಿಯ ನಾಯಕ ಎಲ್.ಕೆ. ಅಡ್ವಾಣಿ ಅವರನ್ನೇ ಆ ಪಕ್ಷದ ಮುಖಂಡರು ಕಡೆಗಣಿಸಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಕೃಷ್ಣ ಅವರು ಪಕ್ಷಕ್ಕೆ ಬಂದರೆ ಆನೆಬಲ ಬರುತ್ತದೆ ಎಂಬ ಆಶಯವನ್ನು ಆ ಮುಖಂಡರು ಹೇಳಿಕೊಳ್ಳುತ್ತಿದ್ದಾರೆ ಎಂದರು.

ಚಿತ್ರನಟ ಹಾಗೂ ಮಾಜಿ ಸಚಿವ ಅಂಬರೀಷ್ ಅವರು ಜೆಡಿಎಸ್‌ಗೆ ಸೇರಲಿದ್ದಾರೆ ಎಂಬ ಬಗ್ಗೆ ಅವರ ಗಮನ ಸೆಳೆದಾಗ, ಈ ಕುರಿತು ತಾವು ಯಾರೊಂದಿಗೂ ಚರ್ಚಿಸಿಲ್ಲ ಎಂದು ಚುಟುಕಾಗಿ ಉತ್ತರಿಸಿದರು.

ಪಕ್ಷ ಸಂಘಟನೆಗೆ ರಾಜ್ಯಾದ್ಯಂತ ಪ್ರವಾಸ ಮಾಡುತ್ತಿರುವುದಾಗಿ ಅವರು ಹೇಳಿದರು.

ಅಭಿನಂದನೆ

ಬಿಗ್‌ಬಾಸ್ ಕಾರ್ಯಕ್ರಮದಲ್ಲಿ ಪ್ರಥಮ ಸ್ಥಾನಗಳಿಸಿರುವ ಪ್ರಥಮ್ ಅವರನ್ನು ಅಭಿನಂದಿಸಿದ ಕುಮಾರಸ್ವಾಮಿ, ಪ್ರಥಮ್ ಅವರಿಗೆ ಬಂದಿರುವ ಬಹುಮಾನದ ಹಣವನ್ನು ಸಾಮಾಜಿಕ ಕಾರ್ಯಕ್ರಮಗಳಿಗೆ ಉಪಯೋಗಿಸಲು ಮುಂದಾಗಿರುವುದು ಅವರ ಹೃದಯ ವೈಶಾಲತೆಯನ್ನು ತೋರಿಸುತ್ತದೆ ಎಂದರು.

ಇದಕ್ಕೂ ಮುನ್ನ ಮಾತನಾಡಿದ ಪ್ರಥಮ್, ಬಿಗ್‌ಬಾಸ್ ಕಾರ್ಯಕ್ರಮ ಆರಂಭಕ್ಕೂ ಮುನ್ನ ಕುಮಾರಸ್ವಾಮಿ ಅವರು ತಮಗೆ ಫೋನ್ ಮಾಡಿ ಶುಭಾಷಯ ಕೋರಿದ್ದರು. ಪ್ರಥಮ ಸ್ಥಾನಗಳಿಸಿದ ನಂತರ ಅವರಿಗೆ ಗೌರವ ಸೂಚಿಸಲು ಬಂದಿದ್ದೇನೆ ಎಂದರು.

ರಾಜಕೀಯ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡುವ ಆಸೆ ತಮಗಿಲ್ಲ. ನಾನು ಸಿನಿಮಾ ಕ್ಷೇತ್ರದಲ್ಲಿ ಮುಂದುವರೆಯುತ್ತೇನೆ. ನನ್ನದೇ ಆದ ಒಂದು ಟ್ರಸ್ಟ್ ಸ್ಥಾಪಿಸಿ ಅದರ ಆ ಡಿಯೋ ಲಾಂಚ್ ಸಧ್ಯದಲ್ಲೇ ಮಾಡಲಿದ್ದೇನೆ. ತಮಗೆ ಬಂದಿರುವ ಬಹುಮಾನದ ಹಣವನ್ನು ಸಾಮಾಜಿಕ ಸೇವೆಗೆ ಅರ್ಪಿಸುತ್ತೇನೆ ಎಂದರು.

Comments are closed.