ಕರ್ನಾಟಕ

ಕೃಷ್ಣ ನಿರ್ಗಮನ ಕಾಂಗ್ರೆಸ್ ಗೆ ದೊಡ್ಡ ಹೊಡೆತ ಎಂದ ಪರಮೇಶ್ವರ್

Pinterest LinkedIn Tumblr


ಬೆಂಗಳೂರು, ಜ. ೩೦- ಹಿರಿಯ ನಾಯಕ ಎಸ್.ಎಂ. ಕೃಷ್ಣ ಕಾಂಗ್ರೆಸ್ ಪಕ್ಷ ತ್ಯಜಿಸುವುದರಿಂದ ಪಕ್ಷಕ್ಕೆ ಹಿನ್ನೆಡೆಯಾಗಿದೆ ಎಂದು ಒಪ್ಪಿಕೊಂಡಿರುವ ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್ ಹಿರಿಯ ನಾಯಕರಲ್ಲಿರುವ ಗೊಂದಲಗಳನ್ನು, ವ್ಯತ್ಯಾಸಗಳನ್ನು ಸರಿಪಡಿಸಿ ಪಕ್ಷಸಂಘಟನೆ ಮಾಡುವ ಮೂಲಕ 2018ರಲ್ಲೂ ರಾಜ್ಯದಲ್ಲಿ ಅಧಿಕಾರಕ್ಕೆ ತರಲು ಶ್ರಮಿಸಲಾಗುವುದು ಎಂದು ಹೇಳಿದರು.
ಎಸ್.ಎಂ. ಕೃಷ್ಣ ಪಕ್ಷ ತ್ಯಜಿಸಿರುವುದು ಆಘಾತ, ನೋವು ತಂದಿದೆ. ಪಕ್ಷದಲ್ಲಿ ಅವರನ್ನು ಎತ್ತರದ ಸ್ಥಾನದಲ್ಲಿ ಇಂದಿಗೂ ನೋಡುತ್ತಿದ್ದೇವೆ. ಅವರು ನಿರ್ಧಾರವನ್ನು ಬದಲಾಯಿಸಬೇಕು ಎಂದು ಮನವಿ ಮಾಡಿದ ಪರಮೇಶ್ವರ್ ವರಿಷ್ಠರು ಈ ಸಂಬಂಧ ಕೃಷ್ಣರೊಂದಿಗೆ ಮಾತನಾಡಿರುವ ವಿಶ್ವಾಸ ವ್ಯಕ್ತಪಡಿಸಿದರು.
ಕೆಪಿಸಿಸಿ ಕಛೇರಿಯಲ್ಲಿ ಹಮ್ಮಿಕೊಂಡಿದ್ದ ಸರ್ವೋದಯ ದಿನಾಚರಣೆ ಅಂಗವಾಗಿ ಗಾಂಧೀಜಿ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದ ಬಳಿಕ ಮಾತನಾಡಿದ ಅವರು ಪಕ್ಷದಲ್ಲಿ ಸಣ್ಣಪುಟ್ಟ ವ್ಯತ್ಯಾಸ, ಸಮಸ್ಯೆಗಳು ಸಹಜ. ಎಸ್.ಎಂ. ಕೃಷ್ಣರವರ ಹಿರಿತನದ ಮುಂದೆ ಆವೆಲ್ಲಾ ಗೌಣ ಎಂದು ಹೇಳಿದರು.
ಎಸ್.ಎಂ. ಕೃಷ್ಣರವರೊಂದಿಗೆ ಪಕ್ಷದ ಅಧ್ಯಕ್ಷೆ ಸೋನಿಯಾಗಾಂಧಿ, ರಾಹುಲ್ ಗಾಂಧಿ ಮಾತನಾಡಲಿದ್ದಾರೆ. ಎಲ್ಲವೂ ಸಮಸ್ಯೆಗಳು ಬಗೆಹರಿಯಲಿದೆ ಎನ್ನುವ ವಿಶ್ವಾಸ ಈಗಲೂ ಇದೆ. ಕೃಷ್ಣರವರು ತಮ್ಮ ನಿರ್ಧಾರವನ್ನು ಬದಲಿಸಬೇಕು ಎಂದು ಮನವಿ ಮಾಡಿದರು.
ಪಕ್ಷದ ಹಲವು ಹಿರಿಯ ನಾಯಕರಲ್ಲಿರುವ ಅಸಾಮಾಧಾನ ವೈಮನಸ್ಸುಗಳನ್ನು ಬಗೆಹರಿಸಿಕೊಳ್ಳಲು ಸದ್ಯದಲ್ಲಿ ಹಿರಿಯ ನಾಯಕರ ಸಭೆ ಕರೆಯಲಾಗುವುದು. ಕಾಂಗ್ರೆಸ್‌ನಲ್ಲಿ ಎಲ್ಲಾ ಗೊಂದಲಗಳ ಬಗೆಹರಿಸಿ ಪಕ್ಷ ಸಂಘಟನೆ ಮಾಡುವ ಮೂಲಕ 2018ರ ವಿಧಾನಸಭೆ ಚುನಾವಣೆಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಲು ನಾವೆಲ್ಲಾ ಶ್ರಮಿಸುವುದಾಗಿ ಹೇಳಿದರು.
ಹಿರಿಯರಾದ ಕೃಷ್ಣ ಅವರ ರಾಜೀನಾಮೆಗೆ ವೈಯಕ್ತಿಕ ಕಾರಣಗಳು ಏನೇ ಇರಲಿ ಅವರು ಕಾಂಗ್ರೆಸ್ ಪಕ್ಷದ ಆಸ್ತಿ ಹೀಗಾಗಿ ಅವರು ತಮ್ಮ ನಿರ್ಧಾರವನ್ನು ಬದಲಾಯಿಸಬೇಕು ಎಂದು ಮನವಿ ಮಾಡಿದ ಅವರು ಕುಟುಂಬದಲ್ಲಿ ಸಣ್ಣ ಪುಟ್ಟ ವ್ಯತ್ಯಾಸಗಳು, ಸಮಸ್ಯೆಗಳು ಸಹಜ ಅಂಥವಗಳನ್ನು ನಾವೇ ಬಗೆಹರಿಸಿಕೊಳ್ಳಬೇಕು ಎಂದು ಹೇಳಿದರು.
ನಿರೀಕ್ಷೆ ಹಲವು
ಫೆ. 1ರಂದು ಮಂಡಿಸಲಿರುವ ಕೇಂದ್ರ ಬಜೆಟ್‌ನಿಂದ ರಾಜ್ಯ ಸರ್ಕಾರ ಹಲವು ನಿರೀಕ್ಷೆಗಳನ್ನು ಮಾಡಿದೆ. ಅದರಲ್ಲಿ ಸತತ ಬರಗಾಲಕ್ಕೆ ತುತ್ತಾಗಿರುವ ರಾಜ್ಯಕ್ಕೆ ನೆರವು ಸೇರಿದಂತೆ ನೋಟು ಅಮಾನ್ಯದಿಂದ ಕುಸಿದಿರುವ ಆರ್ಥಿಕ ಬೆಳೆವಣಿಗೆಯ ಉತ್ತೇಜನಕ್ಕೆ ಹಲವಾರು ಕ್ರಮಗಳನ್ನು ಕೈಗೊಳ್ಳುವ ನಿರೀಕ್ಷೆಯಲ್ಲಿದ್ದೇವೆ ಎಂದು ಹೇಳಿದರು.
ಕಪ್ಪುಹಣ ನಕಲಿ ನೋಟು ಹವಾಲಾ ದಂಧೆಗೆ ಕಡಿವಾಣ ಹಾಕಲು ಸರ್ಕಾರ ಕೈಗೊಳ್ಳುವ ಎಲ್ಲಾ ನಿರ್ಧಾರಗಳನ್ನು ಕಾಂಗ್ರೆಸ್ ಪಕ್ಷ ಬೆಂಬಲಿಸಲಿದೆ. ಆದರೆ ಈ ನೋಟು ಅಮಾನ್ಯದಿಂದ ಎದುರಾಗಿರುವ ಸಂಕಷ್ಟಗಳನ್ನು ದೂರ ಮಾಡುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ರೂಪಿಸಬೇಕಾಗಿದೆ ಎಂದು ಹೇಳಿದರು.

Comments are closed.