ಅಂತರಾಷ್ಟ್ರೀಯ

ಪಾಕ್ ಪ್ರಜೆಗಳ ಪ್ರವೇಶಕ್ಕೆ ನಿರ್ಬಂಧದ ಸುಳಿವು ನೀಡಿದ ಅಮೆರಿಕ

Pinterest LinkedIn Tumblr


ವಾಷಿಂಗ್ಟನ್,ಜ.೩೦- ಇಸಿಸ್ ಉಗ್ರರನ್ನು ರಾಷ್ಟ್ರದಿಂದ ಹೊರಗಿಡುವ ಉದ್ದೇಶದಿಂದ ಮುಸ್ಲಿಮರ ವಿರುದ್ಧ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಕಠಿಣ ನಿರ್ಧಾರವನ್ನು ಕೈಗೊಂಡಿರುವ ಹಿನ್ನಲೆಯಲ್ಲೇ, ಭಯೋತ್ಪಾದನೆಗೆ ಪ್ರಚೋದನೆ ನೀಡುತ್ತಿರುವ ಪಾಕಿಸ್ತಾನ ರಾಷ್ಟ್ರವನ್ನೂ ದೂರವಿಡುವ ಸುಳಿವನ್ನು ಶ್ವೇತಭವನ ನೀಡಿದೆ.
ಇಸ್ಲಾಮಿಕ್ ಉಗ್ರರನ್ನು ನಿಯಂತ್ರಿಸುವ ಉದ್ದೇಶದಿಂದ ಟ್ರಂಪ್ ಅವರು ಕೆಲ ದಿನಗಳ ಹಿಂದೆ ವಿವಾದಾತ್ಮಕ ಆದೇಶಕ್ಕೆ ಸಹಿ ಹಾಕಿದ್ದರು. ಆದೇಶದಂತೆ ಅಮೆರಿಕ ರಾಷ್ಟ್ರಕ್ಕೆ ಹೋಗಲು ಬಯಸುವ ಇರಾನ್, ಇರಾಕ್, ಸುಡಾನ್, ಲಿಬಿಯಾ, ಯೆಮೆನ್ ಮತ್ತು ಸೊಮಾಲಿಯಾ ನಾಗರಿಕರು ಹಲವು ಸುತ್ತಿನ ತಪಾಸಣೆ ಮತ್ತು ಕಠಿಣ ಷರತ್ತುಗಳಿಗೆ ಒಳಪಡಬೇಕಾಗಿದೆ. ಸಿರಿಯಾದ ನಾಗರೀಕರಿಗೆ ಮುಂದಿನ ಆದೇಶದ ವರೆಗೆ ಪೂರ್ಣ ನಿಷೇಧವನ್ನು ವಿಧಿಸಲಾಗಿದೆ.
ಟ್ರಂಪ್ ಅವರ ಈ ಕಠಿಣ ನಿರ್ಧಾರ ಸಾಕಷ್ಟು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿತ್ತು, ಪಾಕಿಸ್ತಾನ ಹಾಗೂ ಸೌದಿ ಕೂಡ ಮುಸ್ಲಿಮೇತರ ರಾಷ್ಟ್ರಗಳಾಗಿದ್ದು, ಈ ರಾಷ್ಟ್ರಗಳ ಜನರಿಗೂ ಅಮೆರಿಕ ನಿರ್ಬಂಧ ಹೇರಲಿದೆಯೇ ಎಂಬ ಪ್ರಶ್ನೆಗಳು ಹುಟ್ಟಿಕೊಂಡಿತ್ತು.
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಶ್ವೇತಭವನದ ಅಧಿಕಾರಿಗಳು, ಕೆಲ ಬೆಳವಣಿಗೆಗಳನ್ನು ಗಮನದಲ್ಲಿಟ್ಟುಕೊಂಡು ಹಾಗೂ ಚಿಂತನೆ ನಡೆಸಿ ಪಾಕಿಸ್ತಾನ ರಾಷ್ಟ್ರವನ್ನೂ ಇರಾನ್, ಇರಾಕ್, ಸುಡಾನ್, ಲಿಬಿಯಾ, ಯೆಮೆನ್ ಮತ್ತು ಸೊಮಾಲಿಯಾ ಪಟ್ಟಿಯಲ್ಲಿ ಸೇರಿಸಲಾಗಿದೆ.
ಭವಿಷ್ಯದಲ್ಲಿ ಪಾಕಿಸ್ತಾನ ಪ್ರಜೆಗಳ ಮೇಲೂ ನಿರ್ಬಂಧ ಹೇರುವ ಸಾಧ್ಯತೆಗಳಿವೆ ಎಂದು ಹೇಳಿದ್ದಾರೆ.
ನಿರ್ಬಂಧ ಹೇರಲಾಗಿರುವ ೭ ರಾಷ್ಟ್ರಗಳನ್ನು ಒಬಾಮಾ ಅವರ ಆಡಳಿತದ ಅವಧಿಯಲ್ಲಿಯೇ ಭಯೋತ್ಪಾದಕ ಬೆದರಿಕೆಯುಳ್ಳ ರಾಷ್ಟ್ರಗಳೆಂದು ಪರಿಗಣಿಸಲಾಗಿತ್ತು. ಇದರಂತೆ ಟ್ರಂಪ್ ಅವರೂ ಕೂಡ ಕಠಿಣ ನಿರ್ಧಾರವೊಂದನ್ನು ತೆಗೆದುಕೊಂಡು ಇರಾನ್, ಇರಾಕ್, ಲಿಬಿಯಾ, ಸುಡಾನ್, ಯೆಮೆನ್, ಸಿರಿಯಾ ಹಾಗೂ ಸೋಮಾಲಿಯಾ ರಾಷ್ಟ್ರ ಪ್ರಜೆಗಳ ಮೇಲೆ ನಿರ್ಬಂಧವನ್ನು ಹೇರಿದ್ದಾರೆಂದು ಶ್ವೇತಭವನದ ಸಿಬ್ಬಂದಿಗಳ ಮುಖ್ಯಸ್ಥ ರೀನ್ಸ್ ಪ್ರೀಬಲ್ ಹೇಳಿದ್ದಾರೆ.
೭ ರಾಷ್ಟ್ರಗಳಂತೆಯೇ ಇತರೆ ರಾಷ್ಟ್ರಗಳಲ್ಲೂ ಕೂಡ ಭಯೋತ್ಪಾದನಾ ಕೃತ್ಯಗಳು ನಡೆಯುತ್ತಿದ್ದು, ಇದಕ್ಕೆ ಉದಾಹರಣೆಯಾಗಿ ಪಾಕಿಸ್ತಾನ ಹಾಗೂ ಇತರೆ ರಾಷ್ಟ್ರಗಳನ್ನು ತೆಗೆದುಕೊಳ್ಳಬಹುದು. ಈ ರಾಷ್ಟ್ರಗಳ ಕುರಿತ ನಿರ್ಧಾರಗಳನ್ನು ಮುಂದಿನ ದಿನಗಳಲ್ಲಿ ತೆಗೆದುಕೊಳ್ಳಬಹುದೆಂದು ಚಿಂತನೆ ನಡೆಸಿ, ಅತ್ಯಂತ ಹೆಚ್ಚಿನ ಬೆದರಿಕೆಯುಳ್ಳ ರಾಷ್ಟ್ರಗಳ ಮೇಲೆ ಇದೀಗ ಕ್ರಮ ಕೈಗೊಳ್ಳಲಾಗಿದೆ. ಇದೇ ಮೊದಲ ಬಾರಿಗೆ ಟ್ರಂಪ್ ಅವರ ಆಡಳಿತಾವಧಿಯಲ್ಲಿ ಪಾಕಿಸ್ತಾನ ರಾಷ್ಟ್ರವನ್ನು ಭಯೋತ್ಪಾದಕ ಬೆದರಿಕೆಯುಳ್ಳ ರಾಷ್ಟ್ರವೆಂದು ಬಹಿರಂಗವಾಗಿ ಹೇಳಲಾಗಿದೆ.
ನಿರ್ಬಂಧ ಹೇರುವುದಕ್ಕೂ ಮುನ್ನ ಕಾಲಾವಕಾಶ ನೀಡಬೇಕೆಂದು ಕೆಲವರು ಸಲಹೆಗಳನ್ನು ನೀಡುತ್ತಿದ್ದಾರೆ. ಆದರೆ, ನಾವು ಸಮಯ ನೀಡಿದ್ದೇ ಆಗಿದ್ದರೆ, ಇದರಿಂದ ಅಮೆರಿಕಾಗೆ ಸಮಸ್ಯೆ ಎದುರಾಗುತ್ತಿತ್ತು. ಮೂರು ದಿನಗಳ ಕಾಲಾವಕಾಶದಲ್ಲಿ ಭಯೋತ್ಪಾದಕರು ಪಿತೂರಿ ನಡೆಸುತ್ತಿದ್ದರು. ಸೌದಿ ಅರೇಬಿಯಾ ಮತ್ತು ಯುಎಇ ರಾಷ್ಟ್ರಗಳ ಅಧ್ಯಕ್ಷರೊಂದಿಗೆ ಟ್ರಂಪ್ ಅವರು ಮಾತುಕತೆ ನಡೆಸಿದಾಗ ನಿರ್ಧಾರದ ಬಗ್ಗೆ ಮಾತುಕತೆ ಬರಬಹುದು. ಆದರೆ, ಅಮೆರಿಕ ರಾಷ್ಟ್ರದ ಪ್ರಜೆಗಳ ಸುರಕ್ಷತೆ ನಮಗೆ ಬಹುಮುಖ್ಯವಾಗಿದೆ.
ಕೆಲ ರಾಷ್ಟ್ರಗಳಿಂದ ನಮಗೆ ತೊಂದರೆಯಿದೆ ಎಂದು ತಿಳಿದಿದ್ದರೂ, ಅವುಗಳೊಂದಿಗೆ ಸಂಬಂಧ ಬೆಳೆಸುವುದು, ಅವಕಾಶಗಳನ್ನು ತೆಗೆದುಕೊಳ್ಳುವುದು ನಮಗಿಷ್ಟವಿಲ್ಲ. ಅಮೆರಿಕದ ಪ್ರಜೆಗಳು ಸಾಕಷ್ಟು ನಿರೀಕ್ಷೆಗಳೊಂದಿಗೆ ಟ್ರಂಪ್ ಅವರನ್ನು ಆಯ್ಕೆ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.

Comments are closed.