ಕರ್ನಾಟಕ

ಕಾಂಗ್ರೆಸ್ ಪಕ್ಷ ಬಿಟ್ಟಿದ್ದಕ್ಕೆ ಎಸ್ ಎಂ ಕೃಷ್ಣ ಏನು ಹೇಳಿದ್ದಾರೆ ನೋಡಿ….

Pinterest LinkedIn Tumblr

ಬೆಂಗಳೂರು: ನಾನು ಸಕ್ರಿಯ ರಾಜಕಾರಣದಿಂದ ನಿವೃತ್ತಿಯಾಗುತ್ತಿಲ್ಲ, ನಿನ್ನೆಯೇ ಕಾಂಗ್ರೆಸ್ ಪಕ್ಷವನ್ನು ತ್ಯಜಿಸಿದ್ದೇನೆ ಎಂದು ಮಾಜಿ ಸಿಎಂ ಎಸ್ ಎಂ ಕೃಷ್ಣ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು 46 ವರ್ಷಗಳಿಂದ ಕಾಂಗ್ರೆಸ್ ನನ್ನ ಸ್ವಂತ ಮನೆಯಂತೆ ಇತ್ತು, ಆದರೆ ಈಗ ಸ್ವಂತ ಮನೆಯನ್ನು ತೊರೆಯುವ ಪರಿಸ್ಥಿತಿ ಎದುರಾಗಿದೆ ಎಂದು ಅವರು ಹೇಳಿದ್ದಾರೆ.

ಪತ್ರಕರ್ತರಿಂದ ಬೆಳೆದಿದ್ದೇನೆ ಮತ್ತು ಅವರು ನನ್ನನ್ನು ಬೆಳೆಸಿದ್ದಾರೆ. ಕೆಲವರು ನಮ್ಮನ್ನಗಲಿದ್ದಾರೆ ಅವರೆಲ್ಲರನ್ನೂ ನಾನು ನೆನಪಿಸಿಕೊಳ್ಳುತ್ತೇನೆ ಎಂದರು. ನಾನು ಅಲೆಯನ್ನು ನೆಚ್ಚಿಕೊಂಡು ಬಂದ ನಾಯಕನಲ್ಲ ಎಂದು ಕಾಂಗ್ರೆಸ್‌ಗೆ ಟಾಂಗ್‌ ನೀಡಿದರು.

ಬಿಜೆಪಿ ಸೇರ್ಪಡೆ ಕುರಿತಂತೆ ಪ್ರತಿಕ್ರಿಯಿಸಿ ಕೃಷ್ಣ ಎಲ್ಲಾ ಪ್ರಶ್ನೆಗೂ ಉತ್ತರಿಸಲು ಇದು ಸದನವಲ್ಲ, ನಾನು ಸಕ್ರಿಯ ರಾಜಕಾರಣದಿಂದ ನಿವೃತ್ತಿಯಾಗುತ್ತಿಲ್ಲ, ಆತ್ಮಗೌರವ, ಸ್ವಾಭಿಮಾನದಿಂದ ನಾನು ರಾಜೀನಾಮೆ ನೀಡಿದ್ದೇನೆ, ನಿವೃತ್ತಿ ಎಂಬ ಪದ ನನ್ನ ಡಿಕ್ಷನರಿಯಲ್ಲಿಲ್ಲ ಎಂದು ಹೇಳಿದ್ದಾರೆ.

ನನ್ನನ್ನು ವಿದೇಶಾಂಗ ಸಚಿವ ಸ್ಥಾನದಿಂದಲೂ ಕೆಳಗಿಳಿಸಲಾಯಿತು, ನಂತರ ನಡೆದ ರಾಜ್ಯಸಭೆ ಚುನಾವಣೆಯಲ್ಲಿ ನನ್ನನ್ನು ಕಡೆಗಣಿಸಲಾಯಿತು, ಇದೆಲ್ಲಾ ನನಗೆ ನೋವುಂಟು ಮಾಡಿತು. ವಿದೇಶಾಂಗ ಇಲಾಖೆಯಲ್ಲಿ ನಾನು ಏನು ಮಾಡಿಲ್ಲ, ಹೊಸದಾಗಿ ನೇಮಕ ಮಾಡಿದವರು ಏನು ಕೆಲಸ ಮಾಡಿದರು ಎಂದು ಭಾವುಕರಾದರು.

ಇದು ರಾಜಕೀಯ ಜೀವನದ ನೋವಿನ ದಿನ ಎಂದು ಹೇಳಿದ ಅವರು, ಪಕ್ಷ ನಿಷ್ಠೆ ಮಾತ್ರ ಎಷ್ಟೇ ಸವಾಲು ಎದುರಾದರೂ ಬದಲಾಗಿಲ್ಲ.ಇಂದು ದೊಡ್ಡ ಸವಾಲು ಎದುರಾಗುತ್ತಿದೆ. ನನಗನ್ನಿಸುತ್ತದೆ ಕಾಂಗ್ರೆಸ್‌ಗೆ ಜನಸಮುದಾಯದ ಲೀಡರ್‌ಗಳು ಬೇಕೊ ಬೇಡವೊ ಎನ್ನುವ ಗೊಂದಲದಲ್ಲಿದೆ. ಅವರಿಗೆ ಪರಿಸ್ಥಿತಿಯನ್ನು ನಿಭಾಯಿಸುವ ಮ್ಯಾನೇಜರ್‌ಗಳು ಇದ್ದರೆ ಸಾಕು ಅನ್ನುವ ತೀರ್ಮಾನಕ್ಕೆ ಬಂದಿದ್ದಾರೆ.

ಎಲ್ಲಾ ಪಕ್ಷಗಳು ಹಿರಿತನಕ್ಕೆ ಬೆಲೆ ನೀಡಬೇಕು. ಕೇವಲ ವಯಸ್ಸನ್ನು ಕಾರಣವಾಗಿಟ್ಟುಕೊಂಡು ನಿಷ್ಠಾವಂತ ಕಾಂಗ್ರೆಸ್ ಕಾರ್ಯಕರ್ತನನ್ನು ಕಡೆಗಣಿಸುವುದು ಎಷ್ಟು ಸೂಕ್ತ ಎಂದು ಪ್ರಶ್ನಿಸಿದ್ದಾರೆ. ಇಂದಿರಾ ಗಾಂಧಿ ಅವರ ಶಕೆ ಮುಗಿದ ಬಳಿಕ ರಾಜೀವ್‌ ಗಾಂಧಿ ಅವರ ಶಕೆ ಪ್ರಾರಂಭವಾಯಿತು. ನನ್ನನ್ನು ಕೇಂದ್ರ ಮಂತ್ರಿಯನ್ನಾಗಿ ಮಾಡಿದ್ದೇ ಅವರು .ರಾಜೀವ್‌ ಗಾಂಧಿ ಅವರ ಕೊಡುಗೆ ಅಪಾರ ,ಅವರು ಹತ್ತಾರು ವರ್ಷ ನಮ್ಮೊಂದಿಗೆ ಇರಬೇಕಾಗಿತ್ತು ಆದರೆ ವಿಧಿಯ ಲಿಖಿತ ಬೇರೆಯೇ ಆಗಿತ್ತು ಎಂದರು.

ನನಗೆ ಸೋನಿಯಾ ಗಾಂಧಿ ಅವರು ಅಪಾರ ಗೌರವ ನೀಡಿದ್ದಾರೆ. ಅವರ ಆರೋಗ್ಯ ಸುಧಾರಿಸಲಿ ಎನ್ನುವುದು ನನ್ನ ಪ್ರತಿನಿತ್ಯದ ಪ್ರಾರ್ಥನೆ. ನನಗೆ ಕಾಂಗ್ರೆಸ್‌ ಪಕ್ಷ ಎಲ್ಲವನ್ನೂ ಕೊಟ್ಟಿದೆ.ಈಗ ನಾನು ಪಕ್ಷವನ್ನು ತೊರೆಯುವ ನಿರ್ಧಾರಕ್ಕೆ ಬದ್ಧನಾಗಿದ್ದೇನೆ ಎಂದರು. ಯಾವುದೇ ಕಾರಣಕ್ಕೂ ನಿರ್ಧಾರದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದಾರೆ.

Comments are closed.