ಕರಾವಳಿ

ಉಜ್ಜೋಡಿಯ ಮನೆಯೊಂದರಲ್ಲಿ ವಿದ್ಯುತ್ ಅವಘಡ : ಪತಿ,ಪತ್ನಿ ಸಹಿತಾ ಮೂವರು ಮೃತ್ಯು

Pinterest LinkedIn Tumblr

ಮಂಗಳೂರು, ಜನವರಿ.29: ಆಕಸ್ಮಿಕವಾಗಿ ನಡೆದ ಘಟನೆಯೊಂದರಲ್ಲಿ ವಿದ್ಯುತ್ ತಗುಲಿ ಪತಿ, ಪತ್ನಿ ಹಾಗೂ ಓರ್ವ ಯುವಕ ದಾರುಣವಾಗಿ ಸಾವನ್ನಪ್ಪಿದ ಘಟನೆ ರವಿವಾರ ಮಧ್ಯಾಹ್ನ ಮಂಗಳೂರಿನ ಪಂಪ್‌ವೆಲ್ ಸಮೀಪದ ಉಜ್ಜೋಡಿಯ ಮನೆಯೊಂದರಲ್ಲಿ ಸಂಭವಿಸಿದೆ.

ಮೃತ ದುರ್ದೈವಿಗಳನ್ನು ಉಜ್ಜೋಡಿಯ ವಲೇರಿಯನ್ ಲೋಬೊ (55) ಹಾಗೂ ಅವರ ಪತ್ನಿ ಹೆಸ್ಮಿ ಲೋಬೊ (51) ಮತ್ತು ಮೂಡುಬಿದಿರೆಯ ಸಂದೀಪ್(28) ಎಂದು ಗುರುತಿಸಲಾಗಿದೆ.

ವಲೇರಿಯನ್ ಲೋಬೊ ಅವರ ಮನೆ ಅಂಗಳದ ತೆಂಗಿನ ಮರಕ್ಕೆ ಕಬ್ಬಿಣದ ಏಣಿ ಇಟ್ಟು ಕಾಳು ಮೆಣಸು ತೆಗೆಯಲು ಸಂದೀಪ್ ಹತ್ತಿದ ವೇಳೆ ಆಯತಪ್ಪಿ ಏಣಿ ಸಮೇತ ವಿದ್ಯುತ್ ಹರಿಯುತ್ತಿದ್ದ ಹೈ ವೋಲ್ಟೇಜ್ ವಿದ್ಯುತ್ ತಂತಿಯ ಮೇಲೆ ಬಿದ್ದು ಈ ಅವಘಡ ಸಂಭವಿಸಿದೆ ಎನ್ನಲಾಗಿದೆ.

ವಿದ್ಯುತ್ ತಂತಿಯ ಮೇಲೆ ಬಿದ್ದು ವಿದ್ಯುತ್ ಆಘಾತಕ್ಕೊಳಗಾದ ಸಂದೀಪ್‌ರನ್ನು ರಕ್ಷಿಸಲು ಧಾವಿಸಿದ ಪತಿ ಮತ್ತು ಪತ್ನಿ ಕೂಡ ವಿದ್ಯುತ್ ಅವಘಡಕ್ಕೊಳಗಾಗಿ ಸ್ಥಳದಲ್ಲೆ ಮರಣ ಹೊಂದಿದ್ದಾರೆ.

ವಲೇರಿಯನ್ ಲೋಬೊ ಪಣಂಬೂರಿನ ನವಮಂಗಳೂರು ಬಂದರು ಮಂಡಳಿ (NMPT) ಯಲ್ಲಿ ಎಸಿ ಮ್ಯಾಕಾನಿಕ್ ಆಗಿ ಕೆಲಸ ಮಾಡುತ್ತಿದ್ದರು. ಹಾಗೂ ಅವರ ಪತ್ನಿ ಹೆಸ್ಮಿ ಲೋಬೊ ನಗರದ ರೋಷನಿ ನಿಲಯ ಕಾಲೇಜಿನಲ್ಲಿ ಉದ್ಯೋಗಿಯಾಗಿದ್ದರು. ಸಂದೀಪ್ ನಗರದ ಹೊಟೇಲೊಂದರಲ್ಲಿ ವೈಟರ್ ಆಗಿದ್ದರು. ವಲೇರಿಯನ್ ಲೋಬೊ ಹಾಗೂ ಹೆಸ್ಮಿ ಲೋಬೊ ದಂಪತಿಗಳು ತಮ್ಮ ಇಬ್ಬರು ಮಕ್ಕಳನ್ನು ಆಗಲಿದ್ದಾರೆ.

ಪೊಲೀಸರು ಸ್ಥಳಕ್ಕೆ ಆಗಮಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

Comments are closed.