ಕರ್ನಾಟಕ

ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಸಮಾವೇಶ ಹುಸಿಯಾದ ನಿರೀಕ್ಷೆ, ಈಶ್ವರಪ್ಪಗೆ ನಿರಾಸೆ

Pinterest LinkedIn Tumblr


ಕೂಡಲಸಂಗಮ(ಬಾಗಲಕೋಟೆ), ಜ. ೨೬- 12ನೇ ಶತಮಾನದ ಸಮಾಜ ಸುಧಾರಕ ಬಸವಣ್ಣನವರ ಐಕ್ಯಸ್ಥಳ ಕೂಡಲಸಂಗಮದಲ್ಲಿ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಆಯೋಜಿಸಿದ್ದ ರಾಯಣ್ಣ ಬಲಿದಾನ ದಿವಸದ ಸಮಾವೇಶಕ್ಕೆ ನಿರೀಕ್ಷಿಸಿದಷ್ಟು ಯಶಸ್ಸು ಸಿಕ್ಕಿಲ್ಲ. ಭಾರಿ ಸಂಖ್ಯೆಯಲ್ಲಿ ಈ ಸಮಾವೇಶಕ್ಕೆ ಜನ ಹರಿದು ಬರುತ್ತಾರೆ ಎಂಬ ನಿರೀಕ್ಷೆ ಹುಸಿಯಾಗುವ ಜೊತೆಗೆ ಪ್ರಮುಖ ಮಠಾಧೀಶರುಗಳು ಸಹ ಸಮಾವೇಶಕ್ಕೆ ಗೈರುಹಾಜರಾಗಿದ್ದರು.
ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷ ಯಡಿಯೂರಪ್ಪನವರಿಗೆ ಸಡ್ಡು ಹೊಡೆದು ಬೃಹತ್ ಪ್ರಮಾಣದಲ್ಲಿ ಸಮಾವೇಶವನ್ನು ನಡೆಸುವ ಮೂಲಕ ತಮ್ಮ ಶಕ್ತಿ ಪ್ರದರ್ಶನ ಮಾಡಲು ಮುಂದಾಗಿದ್ದ ವಿಧಾನ ಪರಿಷತ್ ವಿಪಕ್ಷ ನಾಯಕ ಈಶ್ವರಪ್ಪನವರಿಗೆ ನಿರೀಕ್ಷಿಸಿದಷ್ಟು ಜನ ಸೇರದಿರುವುದು ಒಂದು ರೀತಿ ಹಿನ್ನಡೆಯಾದಂತಾಗಿದೆ.
ಈ ಸಮಾವೇಶದಲ್ಲಿ ಪ್ರಮುಖ ಮಠಾಧೀಶರನ್ನು ಅದರಲ್ಲೂ ಹಿಂದುಳಿದ ವರ್ಗಗಳ 25ಕ್ಕೂ ಹೆಚ್ಚು ಸ್ವಾಮೀಜಿಗಳು ಪಾಲ್ಗೊಳ್ಳುತ್ತಾರೆ ಎಂದು ಹೇಳಲಾಗಿತ್ತಾದರೂ, ಈ ಸಮಾವೇಶದಲ್ಲಿ ಪ್ರಮುಖ ಮಠಗಳ ಸ್ವಾಮೀಜಿಗಳು ಪಾಲ್ಗೊಳ್ಳದೆ ಇರುವುದು ಈಶ್ವರಪ್ಪನವರಿಗೆ ಒಂದು ರೀತಿ ಇರಿಸು- ಮುರುಸು ಸರಿ. ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌ಗೆ ಹಿಂದುಳಿದ ವರ್ಗಗಳ, ಮಠಾಧೀಶರುಗಳ ಬೆಂಬಲ ಇದೆ ಎಂದೇ ಬಿಂಬಿಸಿಕೊಂ‌ಡಿದ್ದ ಈಶ್ವರಪ್ಪನವರಿಗೆ ಮಠಾಧೀಶರುಗಳು ಸಮಾವೇಶದಿಂದ ದೂರ ಉಳಿದಿರುವುದು ಮುಜುಗರ ತಂದಿದೆ.
ಕಾಗಿನೆಲೆಯ ನಿರಂಜನಾನಂದಪುರಿ ಸ್ವಾಮೀಜಿ, ಪಂಜಮಸಾಲಿ ಮಠದ ಜಯ ಮೃತ್ಯುಂಜಯ ಸ್ವಾಮೀಜಿ, ಮಾದಾರ ಚೆನ್ನಯ್ಯ ಸ್ವಾಮೀಜಿ, ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ, ಉಪ್ಪಾರಪೀಠದ ಪುರುಷೋತ್ತಮಾನಂದ ಸ್ವಾಮೀಜಿ, ಅಂಬಿಗರ ಚೌಡ‌ಯ್ಯ ಸ್ವಾಮೀಜಿ, ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ, ಕೃಷ್ಣ ಯಾದವಾನಂದ ಸ್ವಾಮೀಜಿ ಸೇರಿದಂತೆ ಹಲವು ಸ್ವಾಮೀಜಿಗಳು ಈ ಸಮಾವೇಶದಲ್ಲಿ ಪಾಲ್ಗೊಳ್ಳಲಿಲ್ಲ.
ರಾಜ್ಯ ಬಿಜೆಪಿ ಅಧ್ಯಕ್ಷ ಯಡಿಯೂರಪ್ಪ ಹಾಗೂ ಈಶ್ವರಪ್ಪ ನಡುವಿನ ಮುಸುಕಿನ ಗುದ್ದಾಟ ಹಾಗೂ ಬಿಜೆಪಿಯಲ್ಲಿ ಅಂತಃಕಲಹಕ್ಕೆ ಕಾರಣವಾಗಿರುವ ಈ ಬ್ರಿಗೇಡ್ ಚಟುವಟಿಕೆಗಳಿಂದ ದೂರ ಉಳಿಯುವ ಮೂಲಕ ಸ್ವಾಮೀಜಿಗಳು ರಾಜಕೀಯ ಮಹತ್ವಾಕಾಂಕ್ಷೆಯ ಸಮಾವೇಶಗಳಿಗೆ ತಮ್ಮ ಬೆಂಬಲ ಇಲ್ಲ ಎಂಬ ಪರೋಕ್ಷ ಸಂದೇಶವನ್ನು ಈ ಸಮಾವೇಶಕ್ಕೆ ಗೈರುಹಾಜರಾಗುವ ಮೂಲಕ ನೀಡಿದ್ದಾರೆ ಎನ್ನಲಾಗಿದೆ.
ಬಾರದ ಜನ
ಈ ಸಮಾವೇಶಕ್ಕೆ ಸುಮಾರು 50 ಸಾವಿರಕ್ಕೂ ಹೆಚ್ಚು ಜನ ಪಾಲ್ಗೊಳ್ಳುತ್ತಾರೆ ಎಂಬ ನಿರೀಕ್ಷೆ ಇತ್ತು. ಅದಕ್ಕಾಗಿ ಬೃಹತ್ ಪೆಂಡಾಲ್ ಹಾಕಿ ಆಸನಗಳನ್ನು ಸಿದ್ಧಪಡಿಸಲಾಗಿತ್ತು. ಆದರೆ ಜನ ದೊಡ್ಡ ಸಂಖ್ಯೆಯಲ್ಲಿ ಸೇರಲಿಲ್ಲ. ಮಧ್ಯಾಹ್ನ 1 ಗಂಟೆಯಾದರೂ ಹಾಕಿದ್ದ ಕುರ್ಚಿಗಳು ಭರ್ತಿಯಾಗಿರಲಿಲ್ಲ.
ಬಿಜೆಪಿ ನಾಯಕರು ಗೈರು
ಈ ಸಮಾವೇಶದಲ್ಲಿ ಪಾಲ್ಗೊಳ್ಳದಂತೆ ಬಿಜೆಪಿ ನಾಯಕರಿಗೆ ಪಕ್ಷದ ಅಧ್ಯಕ್ಷ ಯಡಿಯೂರಪ್ಪ ಸೂಚನೆ ನೀ‌ಡಿದ್ದರು. ಇವರ ಸೂಚನೆಯನ್ನು ಉಲ್ಲಂಘಿಸಿ ಬಿಜೆಪಿಯ ಪ್ರಮುಖ ನಾಯಕರು ಸಮಾವೇಶದಲ್ಲಿ ಪಾಲ್ಗೊಳ್ಳುತ್ತಾರೆ ಎಂದು ಈಶ್ವರಪ್ಪ ಸಮಾವೇಶಕ್ಕೂ ಮೊದಲು ಹೇಳಿದ್ದರಾದರೂ ಈ ಮುಂಚಿನ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಬಿಜೆಪಿ ನಾಯಕರಷ್ಟೇ ಈ ಸಮಾವೇಶದಲ್ಲಿ ಪಾಲ್ಗೊಂಡಿದ್ದರು. ಅದು ಬಿಟ್ಟರೆ ಹೊಸದಾಗಿ ಯಾವುದೇ ಬಿಜೆಪಿ ನಾಯಕರು ಇಂದಿನ ಸಮಾವೇಶದಲ್ಲಿ ಹಾಜರಿರಲಿಲ್ಲ.
ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌ನ ಮುಂಚೂಣಿ ನಾಯಕ ಕೆ.ಎಸ್. ಈಶ್ವರಪ್ಪ, ಮಾಜಿ ಸಚಿವರುಗಳಾದ ಸೊಗಡು ಶಿವಣ್ಣ, ರವೀಂದ್ರನಾಥ್, ಬ್ರಿಗೇಡ್ ಅಧ್ಯಕ್ಷ ಹಾಗೂ ಮಾಜಿ ಸಂಸದ ಕೆ. ವಿರೂಪಾಕ್ಷಪ್ಪ, ಕಾರ್ಯಾಧ್ಯಕ್ಷ ಕೆ. ಮುಕುಡಪ್ಪ, ವಿಧಾನ ಪರಿಷತ್ ಸದಸ್ಯ ಸೋಮಣ್ಣ ಬೇವಿನಮರದ, ನಿವೃತ್ತ ಐಎ‌ಎಸ್ ಅಧಿಕಾರಿ ಪುಟ್ಟಸ್ವಾಮಿ, ಬೆಂಗಳೂರು ಮಾಜಿ ಮೇಯರ್ ವೆಂಕಟೇಶ್ ಮೂರ್ತಿ ಇವರುಗಳು ಸಮಾವೇಶದ ವೇದಿಕೆಯಲ್ಲಿದ್ದರು.
ಊಟ, ನೀರಿನ ವ್ಯವಸ್ಥೆ
ಸಮಾವೇಶದಲ್ಲಿ ಪಾಲ್ಗೊಂಡಿದ್ದ ಜನರಿಗೆ ಕುಡಿಯುವ ನೀರು ಹಾಗೂ ಊಟದ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು. ಉತ್ತರ ಕರ್ನಾಟಕ ಶೈಲಿಯ ಭೋಜನಾ ವ್ಯವಸ್ಥೆ ಮಾಡಿದ್ದು ವಿಶೇಷವಾಗಿತ್ತು.

Comments are closed.