ಕರ್ನಾಟಕ

ಧ್ಚಜಾರೋಹಣ ಕಾರ್ಯಕ್ರಮದಲ್ಲಿ ಅರ್ಧಕ್ಕೇ ಹೊರ ನಡೆದ ಮುಖ್ಯ ನ್ಯಾಯಮೂರ್ತಿ

Pinterest LinkedIn Tumblr


ಬೆಂಗಳೂರು: ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ಎಚ್.ಸಿ.ಶಿವರಾಮು ಅವರು ತಮ್ಮ ಧ್ವಜಾರೋಹಣ ಭಾಷಣದಲ್ಲಿ ನೋಟು ಅಮಾನ್ಯೀಕರಣದ ಪ್ರಸ್ತಾಪ ಮಾಡಿದ್ದನ್ನು ವಿರೋಧಿಸಿ ಮುಖ್ಯ ನ್ಯಾಯಮೂರ್ತಿ ಎಸ್.ಕೆ.ಮುಖರ್ಜಿ ಸೇರಿದಂತೆ ನಾಲ್ವರು ನ್ಯಾಯಮೂರ್ತಿಗಳು ಕಾರ್ಯಕ್ರಮ ಬಹಿಷ್ಕರಿಸಿ ಹೊರನಡೆದ ಘಟನೆ ಹೈಕೋರ್ಟ್‌ನಲ್ಲಿ ನಡೆಯಿತು.

ಹೈಕೋರ್ಟ್ ಆವರಣದಲ್ಲಿ ಬೆಂಗಳೂರು ವಕೀಲರ ಸಂಘದ ವತಿಯಿಂದ ಬೆಳಿಗ್ಗೆ 10.15ಕ್ಕೆ ಗಣರಾಜ್ಯೋತ್ಸವ ಕಾರ್ಯಕ್ರಮ ಆಯೋಜಿಸಲಾಗಿತ್ತು. ಮುಖ್ಯ ಅತಿಥಿಗಳಾಗಿ ನ್ಯಾಯಮೂರ್ತಿ ಆನಂದ ಬೈರಾರೆಡ್ಡಿ ಹಾಗೂ ನ್ಯಾ.ಬಿ.ಮನೋಹರ ಭಾಗವಹಿಸಿದ್ದರು.

ಪ್ರೇಕ್ಷಕರ ಗ್ಯಾಲರಿಯ ಗಣ್ಯರ ಸಾಲಿನಲ್ಲಿ ಮುಖ್ಯ ನ್ಯಾ.ಮುಖರ್ಜಿ, ನ್ಯಾ.ಎಸ್.ಅಬ್ದುಲ್ ನಜೀರ್, ನ್ಯಾ.ಬಿ.ಎಸ್.ಪಾಟೀಲ್, ನ್ಯಾ.ಶ್ರೀನಿವಾಸೇಗೌಡ, ಭಾರತೀಯ ವಕೀಲರ ಪರಿಷತ್ತಿನ ಸದಸ್ಯ ವೈ.ಆರ್.ಸದಾಶಿವರೆಡ್ಡಿ, ರಾಜ್ಯ ವಕೀಲರ ಪರಿಷತ್ ಸದಸ್ಯ ಜಯಕುಮಾರ ಎಸ್.ಪಾಟೀಲ ಇತರರು ಆಸೀನರಾಗಿದ್ದರು.

ಧ್ವಜಾರೋಹಣ ನೆರವೇರಿಸಿದ ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ಎಚ್.ಸಿ.ಶಿವರಾಮು, ‘ಪ್ರಧಾನಿ ಮೋದಿಯವರ ನೋಟು ಅಮಾನ್ಯೀಕರಣದಿಂದ ಜನ ಸಾಮಾನ್ಯರು ಬೀದಿಗೆ ಬಂದು ನಿಲ್ಲುವಂತಾಗಿದೆ. ಶ್ರೀಸಾಮಾನ್ಯರ ತೊಂದರೆಗೆ ಈಡಾಗಿದ್ದಾರೆ. ಅರ್ಥಶಾಸ್ತ್ರಜ್ಞರೂ ಆದ ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಈ ಕುರಿತಂತೆ ವ್ಯಾಖ್ಯಾನಿಸಿದ್ದಾರೆ’ ಎಂಬ ಅಂಶವನ್ನು ತಮ್ಮ ಲಿಖಿತ ಭಾಷಣದಲ್ಲಿ ಪ್ರಸ್ತಾಪಿಸಿದರು.

ಕೂಡಲೇ ಇದಕ್ಕೆ ಪ್ರೇಕ್ಷಕರ ಸಾಲಿನಲ್ಲಿ ಕುಳಿತಿದ್ದ ವಕೀಲ ವೃಂದದ ಮಾದೇಶ ಅವರು ತೀವ್ರ ವಿರೋಧ ವ್ಯಕ್ತಪಡಿಸಿದರು.
‘ಇದು ರಾಜಕೀಯ ವೇದಿಕೆ ಅಲ್ಲ. ನಿಮ್ಮ ಭಾಷಣ ನಿಲ್ಲಿಸಿ’ ಎಂದು ಆಕ್ಷೇಪಿಸಿದರು.

ಮಾದೇಶ ಅವರ ವಿರೋಧಕ್ಕೆ ಮತ್ತೊಬ್ಬ ವಕೀಲ ಬಿಜೆಪಿ ಕಾನೂನು ಘಟಕದ ಅಧ್ಯಕ್ಷ ರಾಜಣ್ಣ ಅವರೂ ದನಿಗೂಡಿಸಿದರು. ’ಇದು ಪ್ರಧಾನಿ ಅವರನ್ನು ಟೀಕೆ ಮಾಡುವ ವೇದಿಕೆ ಅಲ್ಲ. ನಿಮ್ಮ ಭಾಷಣ ನಿಲ್ಲಿಸಿ’ ಎಂದು ಕೂಗಿದರು.

ಈ ವೇಳೆ ಪ್ರೇಕ್ಷಕರ ಸಾಲಿನಿಂದ ಡೌನ್, ಡೌನ್ ಎಂಬ ಕೂಗು ಕೇಳಿ ಬಂದವು.

ಈ ಅನಿರೀಕ್ಷಿತ ಬೆಳವಣಿಗೆಗೆ ಗಣ್ಯರು ತಬ್ಬಿಬ್ಬಾದರು. ಮೊದಲಿಗೆ ಜಯಕುಮಾರ್ ಪಾಟೀಲ ಹಾಗೂ ಸದಾಶಿವ ರೆಡ್ಡಿ ಕುರ್ಚಿಯಿಂದ ಎದ್ದು ಕಾರ್ಯಕ್ರಮದಿಂದ ಹೊರಗೆ ನಡೆದರು. ತಕ್ಷಣವೇ ಮುಖರ್ಜಿ ಮತ್ತು ಇತರ ನ್ಯಾಯಮೂರ್ತಿಗಳೂ ಕಾರ್ಯಕ್ರಮ ಬಹಿಷ್ಕರಿಸಿ ಹೊರಗೆ ಹೋದರು.

ಸುಮಾರು 20 ನಿಮಿಷದಲ್ಲಿ ಕಾರ್ಯಕ್ರಮ ಮುಕ್ತಾಯವಾಯಿತು.

ನಾನು ಯಾವ ಪಕ್ಷದ ಗುಲಾಮನಲ್ಲ:
ಕಾರ್ಯಕ್ರಮದಲ್ಲಿ ನಡೆದ ಬೆಳವಣಿಗೆಗೆ ಸಂಬಂಧಿಸಿದಂತೆ ‘ಪ್ರಜಾವಾಣಿ’ ಜೊತೆ ಮಾತನಾಡಿದ ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ಎಚ್.ಸಿ.ಶಿವರಾಮು ಅವರು, ‘ನಾನು ನನ್ನ ಮೂರು ಪುಟಗಳ ಭಾಷಣದಲ್ಲಿ ಅಸಂಬದ್ಧ ಎನ್ನುವಂತಹ ಯಾವುದೇ ಮಾತುಗಳನ್ನು ಆಡಿಲ್ಲ. ಬಹಳ ಮುಖ್ಯವಾಗಿ ಮೋದಿಯವರ ಕ್ರಮವನ್ನು ಶ್ಲಾಘಿಸಿದ್ದೇನೆ. ಆದರೆ ಇಂತಹ ಗುರುತರ ಕ್ರಮಕ್ಕೆ ಮುಂದಾಗುವ ಮುನ್ನ ತಜ್ಞರ ಜೊತೆ ಚರ್ಚಿಸಬೇಕಿತ್ತು ಎಂಬ ಮನಮೋಹನ ಸಿಂಗ್ ಅವರ ಮಾತುಗಳನ್ನು ಉಲ್ಲೇಖಿಸಿದೆ. ಇದು ತಪ್ಪೇ’ ಎಂದು ಪ್ರಶ್ನಿಸಿದರು.

‘ಸೈನಿಕರ ಪೌಷ್ಟಿಕಾಂಶ ಕೊರತೆ ಅಂಶವನ್ನೂ ಪ್ರಸ್ತಾಪಿಸಿದೆ. ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬರಿಗೂ ತಮ್ಮ ಅನಿಸಿಕೆ ವ್ಯಕ್ತ ಪಡಿಸುವ ಸ್ವಾತಂತ್ರ್ಯ ಇದೆ. ಅಷ್ಟಕ್ಕೂ ನಾನು ಯಾವ ಪಕ್ಷ ವಿರುದ್ಧವೂ ಮಾತನಾಡಿಲ್ಲ. ಅಂತೆಯೇ ನಾನು ಯಾವ ಪಕ್ಷದ ಗುಲಾಮನೂ ಅಲ್ಲ’ ಎಂದು ಸ್ಪಷ್ಟಪಡಿಸಿದರು.

‘ಸಂಘದ ಮೇಲೆ ಗೂಬೆ ಕೂರಿಸುವ ಪ್ರಯತ್ನ ನಡೆದಿದೆ. ಇವೆಲ್ಲಾ ವಕೀಲರ ಸಂಘದ ಚುನಾವಣಾ ಪ್ರಚಾರದ ಗಿಮಿಕ್ ಗಳು. ನನ್ನ ಮತ್ತು ಸಂಘದ ಗೌರವಕ್ಕೆ ಚ್ಯುತಿ ಉಂಟು ಮಾಡಲು ನಡೆಸಿದ ಪ್ರಯತ್ನವಿದು. ಕೆಲ ವಕೀಲರನ್ನು ಅಮಾನತು ಮಾಡಿರುವ ಕ್ರಮಕ್ಕೆ ಪ್ರತಿಯಾಗಿ ಕೆಲವರು ಇಂತಹ ವಿರೋಧ ವ್ಯಕ್ತಪಡಿಸಿದ್ದಾರೆ’ ಎಂದು ಶಿವರಾಮು ಹೇಳಿದರು.

Comments are closed.