ಕರ್ನಾಟಕ

ಈಶ್ವರಪ್ಪ ವಿರುದ್ಧ ಸಹಿ ಸಂಗ್ರಹಿಸಿ ಶಾಗೆ ಪತ್ರ ಬರೆದ ಯಡಿಯೂರಪ್ಪ

Pinterest LinkedIn Tumblr


ಬೆಂಗಳೂರು(ಜ.25): ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌ ಚಟುವಟಿಕೆ​ಗಳಿಂದ ಮಾಜಿ ಉಪ​ಮುಖ್ಯಮಂತ್ರಿ ಕೆ.ಎಸ್‌.ಈಶ್ವರಪ್ಪ ಅವರನ್ನು ದೂರ ಇರುವಂತೆ ಸೂಚಿಸಿ ಇಲ್ಲವೇ ಶಿಸ್ತು ಕ್ರಮ ಕೈಗೊಳ್ಳಿ ಎಂದು ಒತ್ತಾಯಿಸಿ ಬಿಜೆಪಿಯ ಹಲವು ಸಂಸದರು ಮತ್ತು ಶಾಸಕರು​-​ಮಾಜಿ ಶಾಸಕರು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರಿಗೆ ಎರಡು ಪ್ರತ್ಯೇಕ ಪತ್ರಗಳನ್ನು ಬರೆದಿದ್ದಾರೆ.
ಬಿಜೆಪಿಗೆ ಮಾರಕವಾಗಿರುವ ಬ್ರಿಗೇಡ್‌ ಸಂಘಟನೆಯಿಂದ ಈಶ್ವರಪ್ಪ ಅವರನ್ನು ತಕ್ಷಣ​ದಿಂದಲೇ ದೂರ ಇರುವಂತೆ ಸೂಚಿಸ​ಬೇಕು. ಅಲ್ಲದೆ, ಇದೇ ತಿಂಗಳ 26ರಂದು ಬಾಗಲಕೋಟೆ ಜಿಲ್ಲೆಯ ಕೂಡಲ​ಸಂಗಮ​ದಲ್ಲಿ ನಡೆಯಲಿರುವ ಬ್ರಿಗೇಡ್‌ ಸಮಾವೇಶದಲ್ಲಿ ಪಾಲ್ಗೊಳ್ಳದಂತೆ ಕಟ್ಟುನಿಟ್ಟಿನ ನಿರ್ದೇಶನ ರವಾನಿಸಬೇಕು ಎಂದು ಪತ್ರದಲ್ಲಿ ಆಗ್ರಹಿಸಿದ್ದಾರೆ.
ಜತೆಗೆ ತೀರಾ ಅನಿವಾರ್ಯವಾದಲ್ಲಿ ಈಶ್ವರಪ್ಪ ಅವರನ್ನು ಈಗಲೇ ಪಕ್ಷದಿಂದ ಹೊರ ಹಾಕಿ​ದರೆ, ಅನ್ಯ ಪಕ್ಷಗಳ ಹಿಂದುಳಿದ ವರ್ಗ​ಗಳ ಮುಖಂಡರನ್ನು ಕರೆತರುವ ಮೂಲಕ ಅದ​ರಿಂದ ಆಗುವ ನಷ್ಟಭರಿಸು​ವತ್ತ ಆಲೋಚನೆ ನಡೆಸ​ಬಹುದು. ಈ ವಿಷಯ​ದಲ್ಲಿ ವಿಳಂಬ ಮಾಡಿದಷ್ಟೂಪಕ್ಷಕ್ಕೆ ಹಾನಿ ಆಗಲಿದೆ. ಹೀಗಾಗಿ ಯಾವುದೇ ಕಾರಣಕ್ಕೂ ನಿರ್ಲಕ್ಷಿಸದೆ ತಕ್ಷಣ ಕಾರ್ಯಪ್ರವೃತ್ತರಾಗಬೇಕು ಎಂಬ ಮನವಿಯನ್ನು ಮಾಡಲಾಗಿದೆ.
11 ಮಂದಿ ಸಂಸದರು ಬರೆದಿರುವ ಪತ್ರ​ವನ್ನು ಈಗಾಗಲೇ ಅಮಿತ್‌ ಶಾ ಅವರಿಗೆ ತಲು​ಪಿಸ​ಲಾಗಿದ್ದು, ಖುದ್ದಾಗಿ ಭೇಟಿ ಮಾಡಿ ಸಮಾಲೋಚನೆ ನಡೆಸಲು ಅವಕಾಶ ನೀಡುವಂತೆಯೂ ಪತ್ರದಲ್ಲಿ ಕೋರಲಾಗಿದೆ. ಶಾಸಕರು ಹಾಗೂ ಮಾಜಿ ಶಾಸಕರು ಬರೆದಿರುವ ಪತ್ರ ಬುಧವಾರ ಶಾ ಅವರ ಕೈಸೇರಲಿದೆ ಎಂದು ತಿಳಿದು ಬಂದಿದೆ.
ಪಕ್ಷದ 11 ಸಂಸದರು, 31 ವಿಧಾನಸಭಾ ಸದಸ್ಯರು, 11 ವಿಧಾನಪರಿಷತ್‌ ಸದಸ್ಯರು ಹಾ​ಗೂ 94 ಮಾಜಿ ಶಾಸಕರು ಈ ಪತ್ರಕ್ಕೆ ಸಹಿ ಹಾಕಿ​​ದ್ದಾರೆ. ಸಂಸದರಾದ ಸುರೇಶ್‌ ಅಂಗಡಿ, ಜಿ.ಎಂ.​ಸಿದ್ದೇ​ಶ್ವರ್‌, ಶಾಸಕರಾದ ಎಸ್‌.ಆರ್‌.ವಿಶ್ವನಾ​ಥ್‌, ಮಾಜಿ ಸಚಿವ ಎಂ.ಪಿ.​ರೇಣು​ಕಾ​​​ಚಾರ್ಯ ಮೊದಲಾ​ದವರು ಈ ಸಹಿ ಸಂಗ್ರಹಕ್ಕೆ ನೇತೃತ್ವ ವಹಿಸಿದ್ದರು ಎಂದು ಮೂಲಗಳು ತಿಳಿಸಿವೆ.
ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌ ಸ್ಥಾಪನೆ​ಯಾಗಿದ್ದೇ ಬಿಜೆಪಿಯನ್ನು ಮುಗಿಸಬೇಕು ಎಂಬ ಕಾರಣಕ್ಕಾಗಿ. ಇದು ಮುಂಬರುವ ವಿಧಾನಸಭಾ ಚುನಾವಣೆ ವೇಳೆ ಪಕ್ಷದ ಸಂಘಟನೆಗೆ ದೊಡ್ಡ ಮಟ್ಟದ ಹೊಡೆತ ಕೊಡಲಿದೆ. ಕೂಡಲಸಂಗಮ ರಾಜ್ಯದ ಪ್ರಭಾವಿ ಹಾಗೂ ಪಕ್ಷದ ಬೆಂಬಲಕ್ಕೆ ನಿಂತಿರುವ ಸಮುದಾಯವಾಗಿರುವ ವೀರ ಶೈವ ಲಿಂಗಾಯತರ ಪ್ರಮುಖ ಧಾರ್ಮಿಕ ಸ್ಥಳ. ಆ ಕ್ಷೇತ್ರವನ್ನೇ ಬ್ರಿಗೇಡ್‌ ಸಮಾವೇಶಕ್ಕಾಗಿ ಆಯ್ಕೆ ಮಾಡಿಕೊಳ್ಳುವ ಮೂಲಕ ಆ ಸಮುದಾಯ ಕೆರಳಲಿ ಎಂಬ ಉದ್ದೇಶ ಈಶ್ವರಪ್ಪ ಅವರಿಗೆ ಇದ್ದಂತಿದೆ. ಒಟ್ಟಾರೆ ಬ್ರಿಗೇಡ್‌ ಚಟುವಟಿಕೆಗಳ ಹಿಂದೆ ಬಿಜೆಪಿಯನ್ನು ದುರ್ಬಲಗೊಳಿಸುವ ಉದ್ದೇಶವಿದೆ. ಹೀಗಾಗಿ ಈಗಲೇ ಎಚ್ಚೆತ್ತು ಕೊಂಡು ಕ್ರಮ ಕೈಗೊಳ್ಳಿ ಎಂದು ಪತ್ರದಲ್ಲಿ ಆಗ್ರಹಿಸಲಾಗಿದೆ ಎಂದು ತಿಳಿದು ಬಂದಿದೆ.
ಪತ್ರದಲ್ಲೇನಿದೆ?
1 ಬಿಜೆಪಿ ಮುಗಿಸಲೆಂದೇ ಈಶ್ವರಪ್ಪ ರಾಯಣ್ಣ ಬ್ರಿಗೇಡ್‌ ಆರಂಭಿಸಿದ್ದಾರೆ
2 ರಾಯಣ್ಣ ಬ್ರಿಗೇಡ್‌ನಿಂದ ಈಶ್ವರಪ್ಪ ದೂರವಿಡಿ ಅಥವಾ ಶಿಸ್ತು ಕ್ರಮ ಕೈಗೊಳ್ಳಿ
3 26ರ ಕೂಡಲಸಂಗಮ ರಾರ‍ಯಲಿಗೆ ಹೋಗದಂತೆ ಕಟ್ಟುನಿಟ್ಟಾಗಿ ಸೂಚಿಸಿ
4 ತೀರಾ ಅನಿವಾರ್ಯವಾದಲ್ಲಿ ಈಶ್ವರಪ್ಪ ಅವರನ್ನು ಈಗಲೇ ಪಕ್ಷದಿಂದ ಹೊರಹಾಕಿ
5 ಅಂತಹ ಸಂದರ್ಭದಲ್ಲಿ ಅನ್ಯ ಪಕ್ಷಗಳ ಹಿಂದುಳಿದ ವರ್ಗಗಳ ನಾಯಕರ ಕರೆತನ್ನಿ
6 ಈ ಮೂಲಕ ರಾಜ್ಯದಲ್ಲಿ ಪಕ್ಷಕ್ಕೆ ಆಗುವ ನಷ್ಟಭರಿಸು​ವತ್ತ ಗಮನಹರಿಸಬಹುದು
7 11 ಸಂಸದರು, 42 ಶಾಸಕರು, 94 ಮಾಜಿ ಶಾಸಕರಿಂದ ಅಮಿತ್‌ ಶಾಗೆ ಪತ್ರ

Comments are closed.