ಕರ್ನಾಟಕ

ಕನ್ನಡಕ್ಕೆ ಕ್ರೈಸ್ತ ಧರ್ಮೀಯರಿಂದ ಅಪಾರ ಕೊಡುಗೆ

Pinterest LinkedIn Tumblr


ಬೆಂಗಳೂರು, ಜ. ೨೨- ಧರ್ಮ ಪ್ರಚಾರಕ್ಕಾಗಿ ಬಂದ ಕ್ರೈಸ್ತರು ಕನ್ನಡ ಧರ್ಮ ಪ್ರಸಾರಕರಾಗಿ ಪರಿವರ್ತನೆಯಾಗುವ ಮೂಲಕ ಕನ್ನಡಕ್ಕೆ ಅಪಾರ ಕೊಡುಗೆ ನೀಡಿದ್ದಾರೆ ಎಂದು ಹಿರಿಯ ಸಾಹಿತಿ ಪ್ರೊ. ಬರಗೂರು ರಾಮಚಂದ್ರಪ್ಪ ಇಂದಿಲ್ಲಿ ಹೇಳಿದರು.
ರಾಜ್ಯ ಸೇರಿದಂತೆ ವಿವಿಧೆಡೆ ಕ್ರೈಸ್ತ ಧರ್ಮವನ್ನು ಪ್ರಚಾರ ಮಾಡಲು ಬಂದ ಕ್ರೈಸ್ತ ಪಾದ್ರಿಗಳು ಕನ್ನಡವನ್ನು ಕಟ್ಟಿ ಬೆಳೆಸುವ ಕೆಲಸ ಮಾಡಿದ್ದಾರೆ. ಜತೆಗೆ ಕನ್ನಡಕ್ಕೆ ಅತ್ಯುತ್ತಮ ನಿಂಘಟನ್ನು ಕೊಟ್ಟಿದ್ದಾರೆ. ಅಂತಹವರ ಸ್ಮರಣೆ ಶ್ಲಾಘನೀಯ ಎಂದರು.
1885 ರಲ್ಲಿ ವಿದೇಶಿ ಧರ್ಮಗುರು ಪಾದರ್ ಯೇರ್ ಅಗಸ್ಥೆ ಬುತಲೋ ರಚಿಸಿದ್ದ ಕನ್ನಡ-ಲತಿನು ಪರಿಷ್ಕೃತ ನಿಘಂಟು ಬಿಡುಗಡೆ ಮಾಡಿ ಮಾತನಾಡಿದ ಅವರು, ಕನ್ನಡ ಭಾಷೆ ಜಾತ್ಯಾತೀತವಾದದ್ದು. ಇದಕ್ಕೆ ಕ್ರೈಸ್ತ ವಿದ್ವಾಂಸರು ನೀಡಿದ ಕೊಡುಗೆ ಅಪಾರ. ಕನ್ನಡವನ್ನು ಕಟ್ಟಿ ಬೆಳೆಸುವಲ್ಲಿ ತಮ್ಮದೇ ಆದ ವಿಶಿಷ್ಟ ಕೊಡುಗೆ ನೀಡಿದ್ದಾರೆ ಎಂದು ಹೇಳಿದರು.
ಬದುಕು ಮತ್ತು ಭಾಷೆಯನ್ನು ಬೇರ್ಪಡಿಸಿ ನೋಡುವಂತ ಪರಿಪಾಠ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದೆ. ಬದುಕು ಮತ್ತು ಭಾಷೆಯನ್ನು ಒಟ್ಟಿಗೆ ನೋಡುವ ಅನಿವಾರ್ಯತೆ ಎದುರಾಗಬೇಕಾಗಿದೆ ಎಂದರು.
ಕ್ರೈಸ್ತ ಮೂಲದ ವಿದ್ವಾಂಸರು ಧರ್ಮಾತೀತವಾಗಿ, ಜಾತ್ಯಾತೀವಾಗಿ ಗ್ರಂಥಗಳನ್ನು ಸಂಸ್ಕರಿಸಿ, ಸಂರಕ್ಷಿಸಿ ಮುಂದಿನ ತಲೆಮಾರಿಗೆ ನೀಡಿದ್ದಾರೆ. ಜಾತಿ ಮತವನ್ನು ಲೆಕ್ಕಿಸದೆ ಮುಂದಿನ ಪೀಳಿಗೆಗಾಗಿ ನೀಡುವ ಇಂತಹ ಪ್ರಯತ್ನಗಳು ಸಾಂಸ್ಕೃತಿಕ ಹಾಗೂ ಸಂಶೋಧನಾ ವಲಯದಲ್ಲಿ ಆಕರ ಗ್ರಂಥಗಳು ಕ್ರೈಸ್ತ ವಿದ್ವಾಂಸರ ಕನ್ನಡ ಸೇವೆ ಅವೀಸ್ಮರಣೀಯ ಎಂದರು.
ನಮ್ಮಿಂದ ನಾವೇ ಕೆಲವು ವಿಷಯಗಳಲ್ಲಿ ಬಿಡುಗಡೆ ಹೊಂದಬೇಕಾಗಿದೆ. ಅಂತಹ ಕಾಲಘಟ್ಟದಲ್ಲಿ ಕನ್ನಡ ಮತ್ತು ಲ್ಯಾಟಿನ್ ನಿಘಂಟನ್ನು ಮರು ಮುದ್ರಿಸಿ ಸಾಹಿತ್ಯ ಲೋಕಕ್ಕೆ ನೀಡುತ್ತಿರುವುದು ಉತ್ತಮ ಬೆಳವಣಿಗೆ ಎಂದು ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮನು ಬಳಿಗಾರ್ ಮಾತನಾಡಿ, ಇಂಗ್ಲಿಷ್ ಭಾಷೆಗಿಂತ ಪುರಾತನವಾದ ಭಾಷೆ ಲ್ಯಾಟಿನ್ ಭಾಷೆ. ಇಂಗ್ಲಿಷ್‌ ಪ್ರಭಾವಕ್ಕೊಳಗಾಗಿರುವ 3-4 ಸಾವಿರ ಲ್ಯಾಟಿನ್ ಭಾಷೆಗಳು ಇಂಗ್ಲಿಷ್‌ನಲ್ಲಿ ಸೇರಿಕೊಂಡಿವೆ. ಇಂಗ್ಲೀಷ್ ಭಾಷೆ ಎಲ್ಲ ಭಾಷೆಗಳ ತತ್ವವನ್ನು ಹೀರಿಕೊಂಡು ದೊಡ್ಡದಾಗಿ ಬೆಳೆದಿದೆ ಎಂದರು.
ಜಗತ್ತಿನ ಎಲ್ಲ ಧರ್ಮಗಳ ಸಾಂಸ್ಕೃತಿಕ ಬೇರು ಲ್ಯಾಟಿನ್ ಭಾಷೆಯಲ್ಲಿದೆ. ಇಂತಹ ಭಾಷೆಗೆ ಇಂಗ್ಲಿಷ್ ಋಣಿಯಾಗಬೇಕಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಖ್ಯಾತ ಸಂಶೋದಕ ಡಾ. ಐ.ಅಂತಪ್ಪ, ಕನ್ನಡ ಕ್ರೈಸ್ತ ಧರ್ಮಗುರುಗಳ ಬಳಗದ ಅಧ್ಯಕ್ಷ ಫಾದರ್ ಆರ್. ಥೋಮಸ್, ವಿಶ್ರಾಂತ ಪ್ರಾಧ್ಯಾಪಕ ಪ್ರೊ. ಎ.ವಿ. ನಾವಡ, ಸಾಹಿತಿ ಪಿ. ಮರಿಜೋಸೆಫ್ ಮತ್ತಿತರರು ಉಪಸ್ಥಿತರಿದ್ದರು.

Comments are closed.