ರಾಷ್ಟ್ರೀಯ

ನೋಟು ನಿಷೇಧ: ಉದ್ಯೋಗ, ಗ್ರಾಮೀಣ ಬೇಡಿಕೆಗೆ ಪೆಟ್ಟು: ಅಸೋಚಾಮ್ ವರದಿ

Pinterest LinkedIn Tumblr


ನವದೆಹಲಿ: 500, 1000 ರೂ ಮುಖಬೆಲೆಯ ನೋಟು ಅಮಾನ್ಯದ ಬಗ್ಗೆ ಅಸೋಚಾಮ್ ಸಮೀಕ್ಷೆ ನಡೆಸಿದ್ದು, ನೋಟು ಅಮಾನ್ಯದ ನಿರ್ಧಾರದಿಂದ ಉದ್ಯೋಗ, ಸಣ್ಣ ಹಾಗೂ ಮಧ್ಯಮ ಉದ್ಯಮ(ಎಸ್ಎಂಇ)ಗಳು ಹಾಗೂ ಗ್ರಾಮೀಣ ಬೇಡಿಕೆಗಳ ಮೇಲೆ ತಾತ್ಕಾಲಿಕವಾಗಿ ಋಣಾತ್ಮಕ ಪರಿಣಾಮ ಬೀರಲಿದೆ ಎಂದು ಹೇಳಿದೆ.
ಉದ್ಯೋಗ, ಸಣ್ಣ ಹಾಗೂ ಮಧ್ಯಮ ಉದ್ಯಮ(ಎಸ್ಎಂಇ)ಗಳು ಹಾಗೂ ಗ್ರಾಮೀಣ ಬೇಡಿಕೆಗಳ ಮೇಲೆ ನೋಟು ಅಮಾನ್ಯ ನಿರ್ಧಾರ ಋಣಾತ್ಮಕ ಪರಿಣಾಮ ಬೀರಿದರೆ, ಆದರೆ ಸಂಘಟಿತ ಹಾಗು ಬೃಹತ್ ಉದ್ಯಮಗಳ ಮೇಲೆ ಸಕಾರಾತ್ಮಕ ಪರಿಣಾಮವಿರಲಿದೆ ಎಂದು ಸಮೀಕ್ಷೆ ಮೂಲಕ ತಿಳಿದುಬಂದಿದೆ.
ಸಮೀಕ್ಷೆಗೊಳಪಟ್ಟವರ ಪೈಕಿ ಶೇ.81.5 ರಷ್ಟು ಜನರು ನೋಟು ನಿಷೇಧ ನಿರ್ಧಾರದಿಂದ ಉದ್ಯೋಗ, ಸಣ್ಣ ಹಾಗೂ ಮಧ್ಯಮ ಉದ್ಯಮ(ಎಸ್ಎಂಇ)ಗಳು ಹಾಗೂ ಗ್ರಾಮೀಣ ಬೇಡಿಕೆಗಳು ಇನ್ನೂ ಒಂದು ತ್ರೈಮಾಸಿಕದ ವರೆಗೆ ಋಣಾತ್ಮಕ ಪರಿಣಾಮ ಎದುರಿಸಲಿದೆ ಎಂದಿದ್ದರೆ ಅಷ್ಟೇ ಜನರು ಬೃಹತ್ ಉದ್ಯಮಗಳು ಸಕಾರಾತ್ಮಕ ಪರಿಣಾಮಗಳಿಗೆ ಸಾಕ್ಷಿಯಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ನೋಟು ನಿಷೇಧ ದೀರ್ಘಾವಧಿಯಲ್ಲಿ ಅತ್ಯುತ್ತಮ ಫಲಿತಾಂಶವನ್ನು ನೀಡಲಿದೆ ಎಂದಿರುವ ಅಸೋಚಾಮ್ ಸಮೀಕ್ಷೆಯ ವರದಿ ಶೇ.66 ರಷ್ಟು ಜನರು ಹೂಡಿಕೆ ಮೇಲೆ ಪ್ರಮುಖವಾಗಿ ಗ್ರಾಮೀಣ ಬೇಡಿಕೆ ಮೇಲೆ ಋಣಾತ್ಮಕ ಪರಿಣಾಮ ಇರಲಿದ್ದು ಮಾರಾಟದ ಪ್ರಮಾಣ ಪ್ರಸಕ್ತ ಆರ್ಥಿಕ ವರ್ಷದ ಕೊನೆಯ ತ್ರೈಮಾಸಿಕದ ವರೆಗೂ ಕುಸಿಯಲಿದೆ ಎಂದು ಹೇಳಿದೆ.
ಕೃಷಿ, ಸಿಮೆಂಟ್, ಗೊಬ್ಬರ, ಆಟೋಮೊಬೈಲ್, ಜವಳಿ, ರಿಯಲ್ ಎಸ್ಟೇಟ್ ಹಾಗೂ ಚಿಲ್ಲರೆ ಮಾರಾಟ ಕ್ಷೇತ್ರದ ಮೇಲೆ ಋಣಾತ್ಮಕ ಪರಿಣಾಮ ಇರಲಿದ್ದರೆ, ಇದಕ್ಕೆ ತದ್ವಿರುದ್ಧ ಎಂಬಂತೆ ಐಟಿ ಕ್ಷೇತ್ರ, ಎಲೆಕ್ಟ್ರಾನಿಕ್ಸ್, ಮೂಲಸೌಕರ್ಯ, ಇಂಧನ (ತೈಲ) ಔಷಧ, ಕ್ಷೇತ್ರಗಳ ಮೇಲೆ ಸಕಾರಾತ್ಮಕ ಪರಿಣಾಮ ಇರಲಿದೆ ಎಂದು ಅಸೋಚಾಮ್ ವರದಿ ಹೇಳಿದ್ದು, ನೋಟು ಅಮಾನ್ಯ ಹಣದುಬ್ಬರ ಕಡಿಮೆಯಾಗುವುದಕ್ಕೆ ಸಹಕಾರಿಯಾಗಲಿದೆ ಎಂದಿದೆ.

Comments are closed.