ಕರ್ನಾಟಕ

ಯಡಿಯೂರಪ್ಪ ಮತ್ತು ಈಶ್ವರಪ್ಪ ನಡುವಿನ ಸಮರಕ್ಕೆ ಇಂದಿನ ಕಾರ್ಯಕಾರಿಣಿಯಲ್ಲಿ ಮದ್ದು

Pinterest LinkedIn Tumblr


ಕಲಬುರ್ಗಿ, ಜ. ೨೦- ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ವಿಚಾರದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಹಾಗೂ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೆ.ಎಸ್. ಈಶ್ವರಪ್ಪ ಅವರ ನಡುವಿನ ಬಹಿರಂಗ ಸಮರ ತಾರಕಕ್ಕೇರಿರುವ ಹಿನ್ನೆಲೆಯಲ್ಲಿ ನಾಳೆಯಿಂದ ಇಲ್ಲಿ ಆರಂಭವಾಗಲಿರುವ ಬಿಜೆಪಿ ಕಾರ್ಯಕಾರಿಣಿ ಕುರಿತು ರಾಜ್ಯ ರಾಜಕಾರಣದಲ್ಲಿ ತೀವ್ರ ಕುತೂಹಲ ಕೆರಳಿಸಿದೆ.

ದಿನೇ ದಿನೇ ಯಡಿಯೂರಪ್ಪ ಹಾಗೂ ಈಶ್ವರಪ್ಪ ನಡುವೆ ಪರಸ್ಪರ ಟೀಕೆ ಟಿಪ್ಪಣಿಗಳು ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಕಾರ್ಯಕಾರಿಣಿಯಲ್ಲಿ ಯಾವ ನಿರ್ಧಾರ ಕೈಗೊಳ್ಳಲಿದೆ ಎಂಬುದು ಪಕ್ಷದ ವಲಯದಲ್ಲೂ ಕುತೂಹಲಕ್ಕೆ ಕಾರಣವಾಗಿದೆ.

ಅತೃಪ್ತ ಶಾಸಕರು ಮತ್ತು ಮುಖಂಡರೊಂದಿಗೆ ಸಂದಾನ ಮಾತುಕತೆ ನಡೆಸಲು ಯಡಿಯೂರಪ್ಪ ನಿನ್ನೆ ಮಾಡಿದ ಪ್ರಯತ್ನ ವಿಫಲವಾಗಿದ್ದು, ಒಡೆದ ಮನೆಯಂತೆ ಆಗಿರುವ ಬಿಜೆಪಿಯನ್ನು ಒಂದುಗೂಡಿಸಲು ಯಾವ ರೀತಿಯ ಕಾರ್ಯತಂತ್ರ ಅನುಸರಿಸಲಾಗುವುದು ಎಂಬುದು ಕಾರ್ಯಕಾರಿಣಿಯಲ್ಲಿ ತೀರ್ಮಾನವಾಗಲಿದೆ. ಕಲಬುರ್ಗಿಯ ಸೇಡಂ ರಸ್ತೆಯಲ್ಲಿರುವ ಹಾರಕೂಡ ಕಲ್ಯಾಣ ಮಂಟಪದಲ್ಲಿ ನಾಳೆಯಿಂದ ಎರಡು ದಿನಗಳ ಕಾಲ ಕಾರ್ಯಕಾರಿಣಿ ನಡೆಯಲಿದ್ದು, ಈಗಾಗಲೇ ಯಡಿಯೂರಪ್ಪ ನಗರದಲ್ಲಿ ಬೀಡುಬಿಟ್ಟಿದ್ದಾರೆ.

ಯಡಿಯೂರಪ್ಪ ಅವರ ಮುಖ ನೋಡಿ ಯಾರು ಮತ ಹಾಕಲ್ಲ. ಪಕ್ಷವನ್ನು ನೋಡಿ ಮತ ಹಾಕುತ್ತಾರೆ ಎಂಬ ಈಶ್ವರಪ್ಪ ಅವರ ಹೇಳಿಕೆಗೆ ಯಡಿಯೂರಪ್ಪ ಬಣದಿಂದ ತೀವ್ರ ಆಕ್ಷೇಪಗಳು ವ್ಯಕ್ತವಾಗಿದೆ. ಶಿವಮೊಗ್ಗದವರೇ ಆದ ಆಯನೂರು ಮಂಜುನಾಥ್ ಈಶ್ವರಪ್ಪನವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ರಾಯಣ್ಣ ಬ್ರಿಗೇಡ್‌ನ ಅಧ್ಯಕ್ಷ, ಮಾಜಿ ಸಂಸದ ವಿರುಪಾಕ್ಷಪ್ಪ ಬಿಜೆಪಿ ಪರ ಬ್ರಿಗೇಡ್ ಕೆಲಸ ಮಾಡುವುದಿಲ್ಲ ಎಂದು ಖಡಾಖಂಡಿತವಾಗಿ ಹೇಳಿರುವುದು ಇಬ್ಬರು ನಾಯಕರ ಗುದ್ದಾಟ ಯಾವ ಹಂತ ತಲುಪಲಿದೆ ಎಂಬುದನ್ನು ಕಾಲವೇ ನಿರ್ಣಯಿಸಲಿದೆ.

ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವುದರಿಂದ ಪಕ್ಷದಲ್ಲಿನ ಭಿನ್ನಾಭಿಪ್ರಾಯಗಳನ್ನು ಹೋಗಲಾ‌ಡಿಸಲು ಕಾರ್ಯಕಾರಿಣಿಯಲ್ಲಿ ವ್ಯಾಪಕವಾಗಿ ಚರ್ಚೆ ನಡೆಯುವ ಸಾಧ್ಯತೆಗಳಿವೆ.

ಈ ನಡುವೆ ಯಡಿಯೂರಪ್ಪ ಅವರ ಕಾರ್ಯವೈಖರಿ ವಿರುದ್ಧ ಪತ್ರ ಬರೆದಿದ್ದ 24 ಮಂದಿ ಶಾಸಕರು ಹಾಗೂ ಮುಖಂಡರು ಕಾರ್ಯಕಾರಿಣಿಯಲ್ಲಿ ಭಾಗವಹಿಸಲಿದ್ದಾರೆಯೇ, ಇಲ್ಲವೇ ಎಂಬುದು ಯಕ್ಷಪ್ರಶ್ನೆಯಾಗಿದೆ.

ಈಶ್ವರಪ್ಪ ಮತ್ತು ಯಡಿಯೂರಪ್ಪ ನಡುವಿನ ಕಿತ್ತಾಟ ಕುರಿತು ಹೈಕಮಾಂಡ್ ಅಂಗಳಕ್ಕೂ ವಿಷಯ ತಲುಪಿದ್ದು, ಅಲ್ಲಿಂದ ಯಾವ ರೀತಿಯ ಫರ್ಮಾನು ಹೊರಬೀಳಲಿದೆ ಎಂಬುದು ಕುತೂಹಲ ಕೆರಳಿಸಿದೆ.

ಯಡಿಯೂರಪ್ಪ ಏಕಪಕ್ಷೀಯವಾಗಿ ನಿರ್ಧಾರ ಕೈಗೊಳ್ಳುತ್ತಿದ್ದಾರೆ ಎಂಬುದು ಅವರ ವಿರುದ್ಧ ಕೇಳಿ ಬಂದಿರುವ ಪ್ರಮುಖ ಆರೋಪವಾಗಿದೆ. ಈಗಾಗಲೇ ಪಕ್ಷದಿಂದ ಅಮಾನತ್ತು ಮಾ‌ಡಿರುವ ಮಾಜಿ ಮೇಯರ್ ವೆಂಕಟೇಶ್ ಮೂರ್ತಿ ಸೇರಿದಂತೆ ಕೆಲವರನ್ನು ಪಕ್ಷದಿಂದ ಅಮಾನತ್ತುಗೊಳಿಸಿರುವುದನ್ನು ಹಿಂತೆಗೆದುಕೊಳ್ಳಬೇಕೆಂಬ ಒತ್ತಾಯ ಕೂಡ ಕೇಳಿ ಬಂದಿದೆ.

ಈ ಎಲ್ಲಾ ವಿಚಾರಗಳ ಬಗ್ಗೆ ಕಾರ್ಯಕಾರಿಣಿಯಲ್ಲಿ ಚರ್ಚೆಗೆ ಬರುವ ಸಾಧ್ಯತೆಗಳಿವೆ.

ಬಿಜೆಪಿ ಕಾರ್ಯಕಾರಿಣಿಗೆ ಕಲಬುರ್ಗಿ ನಗರ ಸಜ್ಜಾಗಿದ್ದು, ಎಲ್ಲೆಡೆ ಕಮಲದ ಬಾವುಟಗಳು, ನಾಯಕರ ಕಟೌಟ್‌ಗಳು, ಭಿತ್ತಿಪತ್ರಗಳು ರಾರಾಜಿಸುತ್ತಿವೆ. ನಾಳಿನ ಕಾರ್ಯಕಾರಿಣಿಯಲ್ಲಿ 654 ಮುಖಂಡರು ಭಾಗವಹಿಸಲಿದ್ದಾರೆ.

ಇಂದು ಬೆಳಿಗ್ಗೆ ನಗರಕ್ಕಾಗಮಿಸಿದ ಯಡಿಯೂರಪ್ಪ ಅವರನ್ನು ಇಲ್ಲಿನ ರೈಲ್ವೆ ನಿಲ್ದಾಣದಲ್ಲಿ ಜಿಲ್ಲೆಯ ಮುಖಂಡರು ಆತ್ಮೀಯವಾಗಿ ಬರಮಾಡಿಕೊಂಡರು

Comments are closed.