ಕರ್ನಾಟಕ

ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌ಗೆ ಆರೆಸ್ಸೆಸ್ ಮುಖಂಡರ ಮನ್ನಣೆ: ಕೆ.ಎಸ್.ಈಶ್ವರಪ್ಪ

Pinterest LinkedIn Tumblr


ವಿಜಯಪುರ: ಎಲ್ಲ ಜಾತಿಯ ಬಡವರನ್ನು ಸಂಘಟಿಸುತ್ತಿರುವ ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌ಗೆ ಸಂಘ ಪರಿವಾರದ ನಾಯಕರು, ಬಿಜೆಪಿ ರಾಷ್ಟ್ರೀಯ ಮುಖಂಡರ ಮನ್ನಣೆಯಿದೆ ಎಂದು ವಿಧಾನ ಪರಿಷತ್‌ನ ವಿರೋಧ ಪಕ್ಷದ ನಾಯಕ ಕೆ.ಎಸ್‌.ಈಶ್ವರಪ್ಪ ತಿಳಿಸಿದರು.

ಬ್ರಿಗೇಡ್‌ ವಿಷಯದಲ್ಲಿ ಪ್ರಮುಖರು ಇದುವರೆಗೂ ಒಂದೇ ಒಂದು ಸೂಚನೆ ನೀಡಿಲ್ಲ. ಮೌನಕ್ಕೆ ಶರಣಾಗಿದ್ದಾರೆ. ಮೌನಂ ಸಮ್ಮತಿ ಲಕ್ಷಣ ಎಂಬುದನ್ನರಿತು ನಾನು ಸಂಘಟನೆಯಲ್ಲಿ ಸಕ್ರಿಯನಾಗಿರುವೆ ಎಂದು ಗುರುವಾರ ಜಿಲ್ಲೆಯ ವಿವಿಧೆಡೆ ಪ್ರವಾಸ ನಡೆಸುವ ಸಂದರ್ಭ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಇಬ್ಬರ ಕರ್ತವ್ಯ: ಯಡಿಯೂರಪ್ಪ ಮಾತುಕತೆಗೆ ಕರೆದರೆ ಹೋಗುವೆ. ನಾವಿಬ್ಬರೂ ಒಂದೇ ಸಂಘಟನೆಯಲ್ಲಿ ಬೆಳೆದವರು. ಬಿಜೆಪಿ ನಮ್ಮಿಬ್ಬರಿಗೂ ಅಪಾರ ಅವಕಾಶ ನೀಡಿದೆ. ಬಿಎಸ್‌ವೈ ಮುಖ್ಯಮಂತ್ರಿಯಾದರೆ, ನಾನು ಉಪ ಮುಖ್ಯಮಂತ್ರಿಯಾದವನು. ಪಕ್ಷವನ್ನು ಉಳಿಸಿ, ಬೆಳೆಸಿ, ಮರಳಿ ಅಧಿಕಾರಕ್ಕೆ ತರುವ ಕರ್ತವ್ಯ ನಮ್ಮಿಬ್ಬರದ್ದು ಎಂದು ಈಶ್ವರಪ್ಪ ಹೇಳಿದರು.

ಸಂಘ ಪರಿವಾರ, ಬಿಜೆಪಿಯ ರಾಷ್ಟ್ರೀಯ ವರಿಷ್ಠರ ಮಧ್ಯಸ್ಥಿಕೆಯಲ್ಲಿ ಯಡಿಯೂರಪ್ಪ, ನನ್ನ ನಡುವಿನ ಮಾತುಕತೆ ನಡೆದರೆ ಮಾತ್ರ ಎಲ್ಲ ಸಮಸ್ಯೆ ಪರಿಹಾರವಾಗಬಲ್ಲವು. ಶೀಘ್ರದಲ್ಲೇ ಈ ಮಾತುಕತೆ ನಡೆಯಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ತಪ್ಪು: ಶಿವಮೊಗ್ಗದಲ್ಲಿ ಪಕ್ಷದ ಕಾರ್ಯಕರ್ತರ ನಡುವೆ ಬೀದಿ ಜಗಳ ನಡೆದಿದ್ದು ತಪ್ಪು. ಸಂಘಟನೆಗೆ ಹೆಸರಾದ ಜಿಲ್ಲೆಯದು. ಶೀಘ್ರದಲ್ಲೇ ಅಲ್ಲಿನ ಸಮಸ್ಯೆ ಪರಿಹರಿಸಲಾಗುವುದು ಎಂದು ಇದೇ ಸಂದರ್ಭ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಈ ನಡುವೆ ತಮ್ಮ ಮೊಬೈಲ್‌ಗೆ ಬಂದ ಕರೆ ಸ್ವೀಕರಿಸಿದ ಈಶ್ವರಪ್ಪ ಶಿವಮೊಗ್ಗ ಜಿಲ್ಲೆಯ ಬೆಳವಣಿಗೆಗಳನ್ನು ತಮ್ಮ ಆಪ್ತ ವಲಯದಿಂದ ಸವಿವರವಾಗಿ ಪಡೆದರು.

ಜನಾಂದೋಲನ: ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌ ಜನಾಂದೋಲನವಾಗಿ ಮಾರ್ಪಟ್ಟಿದೆ. ಇದೇ 26ರ ಸಮಾವೇಶಕ್ಕೆ 2 ಲಕ್ಷ ಜನ ಸೇರುವ ನಿರೀಕ್ಷೆಯಿತ್ತು. ಈಗಿನ ಸ್ಪಂದನೆ ನೋಡಿದರೆ ಸಂಖ್ಯೆ ಸಾಕಷ್ಟು ಹೆಚ್ಚಲಿದೆ. ಜತೆಗೆ ವಿವಿಧ ಮಠಾಧೀಶರ ಸಂಖ್ಯೆಯೂ 25ರಿಂದ 30 ದಾಟಲಿದೆ ಎಂದು ಈಶ್ವರಪ್ಪ ಹೇಳಿದರು.

ಕರೆದಿಲ್ಲ: ರಾಜ್ಯ ಘಟಕದ ಅಧ್ಯಕ್ಷರ ಕಾರ್ಯ ವೈಖರಿಗೆ ಆಕ್ಷೇಪ ವ್ಯಕ್ತಪಡಿಸಿ ಪತ್ರ ಬರೆದಿದ್ದ 24 ಪ್ರಮುಖರಲ್ಲಿ ಕೆಲ ಮಂದಿ ಜತೆ ಚರ್ಚಿಸಲು ಯಡಿಯೂರಪ್ಪ ಗುರುವಾರ ಸಭೆ ಕರೆದಿದ್ದಾರೆ. ನನ್ನನ್ನು ಕರೆದಿಲ್ಲ. ಆದ್ದರಿಂದ ನಾ ಹೋಗಿಲ್ಲ. ಕಲಬುರ್ಗಿಯಲ್ಲಿ ಇದೇ 21, 22ರಂದು ನಡೆಯಲಿರುವ ರಾಜ್ಯ ಕಾರ್ಯಕಾರಿಣಿಯಲ್ಲಿ ಪಾಲ್ಗೊಳ್ಳುವೆ. ಇಲ್ಲಿ ಬ್ರಿಗೇಡ್‌ ಚಟುವಟಿಕೆ ಕುರಿತಂತೆ ಯಾವುದೇ ಚರ್ಚೆ ನಡೆಯುವುದು ಅನುಮಾನ ಎಂದು ಪ್ರಶ್ನೆಯೊಂದಕ್ಕೆ ಈಶ್ವರಪ್ಪ ಉತ್ತರಿಸಿದರು.

Comments are closed.