ಕರ್ನಾಟಕ

ಮುರುಘಾ ಶ್ರೀಗಳ ವಿರುದ್ದ ಎಫ್ಐಆರ್

Pinterest LinkedIn Tumblr


ಬೆಂಗಳೂರು(ಜ.19): ಖಾವಿಗಳ ನಡುವಿನ ಕಿತ್ತಾಟ ಇಂದು ನಿನ್ನೆಯದಲ್ಲ…! ಮಠದ ಪೀಠಾಧಿಪತಿ ಸ್ಥಾನಕ್ಕಾಗಿ ಇಬ್ಬರ ನಡುವೆ ಮಾತಿನ ವಾಗ್ಯುದ್ದ ಆರಂಭವಾಗಿದೆ. ಆದರೆ, ಮಠದ ಕಬಳಿಕೆಗೆ ರಾಜ್ಯದ ಪ್ರಭಾವಿ ಸ್ವಾಮೀಜಿಗಳ ಹಸ್ತಕ್ಷೇಪ ಇದೆಯಾ ಎನ್ನುವ ಸಂದೇಹ ಕಾಡತೊಡಗಿದೆ. ಯಾವ ಮಠ? ಯಾವ ಸ್ವಾಮೀಜಿ ಇಲ್ಲಿದೆ ನೋಡಿ ಸಂಪೂರ್ಣ ವಿವರ.
ವನಕಲ್​ ಮಠ ಬೆಂಗಳೂರಿನಿಂದ 52 ಕಿಲೋ ಮೀಟರ್​ ದೂರದಲ್ಲಿರುವ ಶ್ರೀ ವನಕಲ್ ಕ್ಷೇತ್ರಕ್ಕೆ ತನ್ನದೇ ಆದ ಮಹತ್ವವಿದೆ. ನೂರೈವತ್ತು ಅನಾಥ ಮಕ್ಕಳ ಆಶ್ರಯ ತಾಣವಾಗಿರುವ ವನಕಲ್​ ಮಠದಲ್ಲೀಗ ಮಠದ ಪೀಠಾಧಿಪತಿ ಸ್ಥಾನಕ್ಕಾಗಿ ನಡೆಯುತ್ತಿರುವ ಕಿತ್ತಾಟ ತಾರಕಕ್ಕೇರಿದೆ.
2010 ರಲ್ಲಿ ಪೀಠಾಧಿಪತಿಗಳಾಗಿದ್ದ ಸಿದ್ದಯೋಗನಂದ ಸ್ವಾಮೀಜಿಗಳ ಅನುಮಾನಾಸ್ಪದ ಸಾವಿನಿಂದ ಆರಂಭವಾದ, ಮಠದಲ್ಲಿನ ಕಿತ್ತಾಟಗಳು ಮುಂದುವರೆದಿವೆ. ಹಾಲಿ ವನಕಲ್ ಮಠದ ಪೀಠಾಧಿಪತಿಯಾಗಿರುವ ಬಸವ ರಮಾನಂದರ ವಿರುದ್ದ, ದಾಬಸ್​ಪೇಟೆ ಪೊಲೀಸ್ ಠಾಣೆಯಲ್ಲಿ ದಾಖಲಾದ ದೂರು, ವನಕಲ್ ಮಠದ ಮತ್ತೊಂದು ಮಹಾ ಕಿತ್ತಾಟಕ್ಕೆ ಸಾಕ್ಷಿಯಾಗಿದೆ.
ವನಕಲ್ ಮಠದ ಪೀಠಾಧಿಪತಿ ಸ್ಥಾನಕ್ಕಾಗಿ ಇಬ್ಬರ ನಡುವೆ ಕಿತ್ತಾಟ ಆರಂಭವಾಗಿದ್ದರೂ, ಮಠದ ಆಸ್ತಿ ಕಬಳಿಕೆಯ ಆರೋಪದಡಿ ದಾಬಸ್ ಪೊಲೀಸ್ ಠಾಣೆಯಲ್ಲಿ ಚಿತ್ರದುರ್ಗದ ಮುರುಘಾ ಶರಣರ ವಿರುದ್ಧ ಎಫ್ಐಆರ್ ದಾಖಲಾಗಿದೆ.
9 ತಿಂಗಳಾದ್ರೂ ಮುಗಿದಿಲ್ಲ ತನಿಖೆ: ಪೊಲೀಸರ ದಿವ್ಯ ಮೌನ ಏಕೆ?
ಕಾನೂನಿನ ಪ್ರಕಾರ ಎಫ್ಐಆರ್ ದಾಖಲಾ 90 ದಿನಗಳ ಅವಧಿಯೊಳಗೆ ಕೋರ್ಟ್‌ಗೆ ಜಾರ್ಜ್ ಶೀಟ್ ಅಥವಾ ಬಿ ರಿಪೋರ್ಟ್ ಸಲ್ಲಿಸಬೇಕು. ಆದರೆ 2016 ಮಾರ್ಚ್’ನಲ್ಲಿ ಮುರುಘಾ ಶ್ರೀ, ಬಸವ ರಮಾನಂದ ಸ್ವಾಮೀಜಿ ಸೇರಿದಂತೆ 10 ಜನರ ವಿರುದ್ಧ ದೂರು ದಾಖಲಾಗಿದ್ದರೂ, ಯಾವುದೇ ಕ್ರಮ ಕೈಗೊಂಡಿಲ್ಲ. ಆದರೆ ಹಾಲಿ ಪೀಠಾಧಿಪತಿ ಬಸವ ರಮಾನಂದ, ಶ್ರೀಗಳ ಮೇಲಿನ ಆರೋಪವನ್ನು ಅಲ್ಲೆಗಳೆಯುತ್ತಾರೆ.
ಆರೋಪ, ಪ್ರತ್ಯಾರೋಪಗಳೇನೆ ಇರಲಿ, ಶ್ರೀಗಳ ವಿರುದ್ದ ಆಸ್ತಿ ಕಬಳಿಕೆಯ ಆರೋಪದಡಿ ದೂರು ದಾಖಲಾಗಿದೆ. ಎಫ್​ಐಆರ್ ದಾಖಲಾಗಿ, ಹತ್ತು ತಿಂಗಳಾದರೂ, ಪೊಲೀಸರು ಯಾವುದೇ ಕ್ರಮ ಕೈಗೊಳ್ಳದೇ ಇರುವುದೇ ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ.

Comments are closed.