ಕರ್ನಾಟಕ

ಶ್ರುತಿ–ಅಮಿತ್ ಸಾವಿನ ಪ್ರಕರಣ; ಪ್ರಾಣಕ್ಕೇ ಎರವಾಯ್ತು ಫೇಸ್‌ಬುಕ್‌ ಗೆಳೆತನ

Pinterest LinkedIn Tumblr


ಬೆಂಗಳೂರು: ಹೆಸರಘಟ್ಟ ಮುಖ್ಯರಸ್ತೆಯಲ್ಲಿ ಗುಂಡೇಟಿನಿಂದ ಮೃತಪಟ್ಟ ಅಮಿತ್‌ ಕೇಶವಮೂರ್ತಿ (31) ಹಾಗೂ ವಸತಿಗೃಹದಲ್ಲಿ ಆತ್ಮಹತ್ಯೆ ಮಾಡಿಕೊಂಡ ಶ್ರುತಿ ಗೌಡ (33) ಏಳು ತಿಂಗಳ ಹಿಂದಷ್ಟೇ ಫೇಸ್‌ಬುಕ್‌ ಮೂಲಕ ಪರಿಚಯವಾಗಿದ್ದರು.

‘ಅಮಿತ್‌ ಅವರು ಕಳೆದ ಜೂನ್‌ನಲ್ಲಿ ಫ್ರೆಂಡ್‌ ರಿಕ್ವೆಸ್ಟ್‌ ಕಳುಹಿಸಿದ್ದರು. ಶ್ರುತಿ ಅದನ್ನು ಒಪ್ಪಿಕೊಂಡಿದ್ದರು. ಬಳಿಕ ಫೇಸ್‌ಬುಕ್‌ನಲ್ಲಿ ಪರಸ್ಪರ ಚಾಟಿಂಗ್‌ ಮಾಡಲು ಆರಂಭಿಸಿದ್ದರು. ಕ್ರಮೇಣ ಅವರ ಮಧ್ಯೆ ಸಲುಗೆ ಹೆಚ್ಚಾಗಿತ್ತು’ ಎಂದು ಅಧಿಕಾರಿಯೊಬ್ಬರು ಪತ್ರಿಕೆಗೆ ತಿಳಿಸಿದರು.

ಸಭೆ ಎಂದು ಸುಳ್ಳು ಹೇಳಿದ್ದ ಶ್ರುತಿ: ನೆಲಮಂಗಲ ತಾಲ್ಲೂಕಿನ ಗೊಲ್ಲಹಳ್ಳಿಯ ಪಿಡಿಒ ಆಗಿದ್ದ ಶ್ರುತಿ, ಎಂದಿನಂತೆ ಶುಕ್ರವಾರ (ಜ.13) ಬೆಳಿಗ್ಗೆ ಕೆಲಸಕ್ಕೆ ಹೋಗಿದ್ದರು. ಅಲ್ಲಿಂದ ಮಧ್ಯಾಹ್ನ 11ಕ್ಕೆ ತಮ್ಮ ಸ್ವಿಫ್ಟ್‌ ಕಾರಿನಲ್ಲಿ ವಾಪಸ್‌ ಬೆಂಗಳೂರಿಗೆ ಬಂದಿದ್ದರು.

12 ಗಂಟೆಗೆ ಪತಿ ರಾಜೇಶ್‌ ಕರೆ ಮಾಡಿದಾಗ, ತಾವು ಸಭೆಯಲ್ಲಿ ಇರುವುದಾಗಿ ಸುಳ್ಳು ಹೇಳಿದ್ದರು. ಕಾರಿಗೆ ಜಿಪಿಎಸ್ ಅಳವಡಿಸಿದ್ದ ರಾಜೇಶ್, ಅದನ್ನು ಪರಿಶೀಲಿಸಿದಾಗ ಪತ್ನಿ ಹೆಸರುಘಟ್ಟ ರಸ್ತೆಯಲ್ಲಿರುವುದು ಗೊತ್ತಾಗಿತ್ತು.

ಕಾರಿನಲ್ಲಿ ಬಂದು ಹತ್ಯೆ: ಪತ್ನಿ ಸುಳ್ಳು ಹೇಳುತ್ತಿರುವುದು ಗೊತ್ತಾಗುತ್ತಿದ್ದಂತೆಯೇ ರಾಜೇಶ್ ಅವರು ತಂದೆ ಗೋಪಾಲಕೃಷ್ಣ ಅವರನ್ನು ಕರೆದುಕೊಂಡು ಹೆಸರುಘಟ್ಟ ರಸ್ತೆಗೆ ಬಂದಿದ್ದರು.

‘ಶ್ರುತಿ ಜತೆ ಅಮಿತ್‌ ಇರುವುದನ್ನು ಕಂಡ ರಾಜೇಶ್‌, ಮೊದಲು ಅವರಿಬ್ಬರ ಜತೆ ವಾಗ್ವಾದ ನಡೆಸಿದ್ದಾರೆ. ಈ ಹಂತದಲ್ಲಿ ರಾಜೇಶ್–ಅಮಿತ್ ಪರಸ್ಪರ ಕೈ ಕೈ ಮಿಲಾಯಿಸಿದ್ದಾರೆ. ಪರಿಸ್ಥಿತಿ ವಿಕೋಪಕ್ಕೆ ಹೋದಾಗ ರಾಜೇಶ್ ಅವರು ರಿವಾಲ್ವರ್ ತೆಗೆದು ಅಂಗೈಗೆ ಗುಂಡು ಹೊಡೆದಿದ್ದಾರೆ’ ಎಂದು ತನಿಖಾಧಿಕಾರಿಗಳು ಹೇಳಿದರು.

‘ಕೈ ಸೀಳಿಕೊಂಡು ಹೊರ ಬಂದ ಗುಂಡು, ಎದೆಗೂ ಬಿದ್ದು ಬೆನ್ನಿನ ಮೂಲಕ ಹೊರ ಹೋಗಿತ್ತು. ಬಳಿಕ ರಾಜೇಶ್ ಹಾಗೂ ಗೋಪಾಲಕೃಷ್ಣ ಪೊಲೀಸರಿಗೆ ಶರಣಾಗುವ ಉದ್ದೇಶದಿಂದ ಠಾಣೆಯತ್ತ ನಡೆದರು. ಆಗ ಶ್ರುತಿ, ಅಮಿತ್ ಅವರನ್ನು ಆಸ್ಪತ್ರೆಗೆ ದಾಖಲಿಸಿ ಹೋಗಿದ್ದರು’ ಎಂದು ವಿವರಿಸಿದರು.

ಆತ್ಮಹತ್ಯೆಗೂ ಮುನ್ನ ಸಂದೇಶ: ಆಸ್ಪತ್ರೆಯಿಂದ ಹೊರಬಂದ ಶ್ರುತಿ, ಅಲ್ಲಿಂದ ಎರಡು ಕಿ.ಮೀ ದೂರದಲ್ಲಿರುವ ಲಾಡ್ಜ್‌ಗೆ ತೆರಳಿ ಕೊಠಡಿ ಬಾಡಿಗೆ ಪಡೆದಿದ್ದರು.

ಮಧ್ಯಾಹ್ನ 3.30ರ ಸುಮಾರಿಗೆ ತಮ್ಮ ಚಿಕ್ಕಪ್ಪನ ಮಗಳಿಗೆ ಸಂದೇಶ ಕಳುಹಿಸಿದ ಶ್ರುತಿ, ‘ಯಾವುದೇ ತಪ್ಪು ಮಾಡದ ಅಮಿತ್‌ ಅವರನ್ನು ಪತಿ ಕೊಂದಿದ್ದಾರೆ. ಅವರು ಸಹ ಪ್ರಭಾವಿಗಳು. ನಮ್ಮ ಕುಟುಂಬವನ್ನು ಸುಮ್ಮನೇ ಬಿಡುವುದಿಲ್ಲ. ನನ್ನಿಂದ ಒಂದು ಜೀವ ಹೋಯಿತು ಎಂಬುದನ್ನು ಸಹಿಸಿಕೊಳ್ಳಲು ಆಗುತ್ತಿಲ್ಲ. ಹೀಗಾಗಿ, ನಾನೂ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ’ ಎಂದಿದ್ದರು.

‘ಸರ್ಕಾರಿ ಅಧಿಕಾರಿ ಎಂದು ನೋಂದಣಿ ಪುಸ್ತಕದಲ್ಲಿ ಬರೆದ ಶ್ರುತಿ, ಕೊಠಡಿ ಬಾಡಿಗೆ ಕೇಳಿದ್ದರು. ಅವರ ಪ್ಯಾನ್‌ ಕಾರ್ಡ್‌ ಪಡೆದು ಕೊಠಡಿ (ಸಂಖ್ಯೆ 301) ನೀಡಿದ್ದೆವು. ಕೆಲ ಹೊತ್ತಿನ ಬಳಿಕ ಅವರ ಸಂಬಂಧಿಕರು ಬಂದು ತಮಗೆ ಸಂದೇಶ ಬಂದಿದ್ದ ವಿಷಯ ತಿಳಿಸಿದರು. ಕೂಡಲೇ ಇನ್ನೊಂದು ಕೀ ಬಳಸಿ ಕೊಠಡಿ ತೆರೆದಾಗ ಅವರು ಬೆಡ್‌ಶಿಟ್‌ನಿಂದ ನೇಣು ಹಾಕಿಕೊಂಡಿದ್ದರು’ ಎಂದು ಲಾಡ್ಜ್ ಮಾಲೀಕರು ಪತ್ರಿಕೆಗೆ ತಿಳಿಸಿದರು.

ಎಚ್ಚರಿಕೆ ನೀಡಿದ್ದ ಪತಿ: ‘ಅಮಿತ್‌ ಪರಿಚಯವಾದಾಗಿನಿಂದ ಶ್ರುತಿ ಫೇಸ್‌ಬುಕ್‌ನಲ್ಲೇ ಹೆಚ್ಚು ಸಮಯ ಕಳೆಯುತ್ತಿದ್ದರು. ಈ ಬಗ್ಗೆ ರಾಜೇಶ್ ಎಚ್ಚರಿಕೆ ಸಹ ನೀಡಿದ್ದರು. ಆದರೂ, ಅದು ಮುಂದುವರಿದಿದ್ದರಿಂದ ಪತ್ನಿಯ ಪೋಷಕರನ್ನು ಕರೆಸಿ ಪಂಚಾಯ್ತಿ ಕೂಡ ಮಾಡಿದ್ದರು’ ಎಂದು ತನಿಖಾಧಿಕಾರಿ ಹೇಳಿದರು.

ಶ್ರುತಿ ಮೇಲೆ ಅನುಮಾನವಿತ್ತು
ಅಮಿತ್‌ ಅವರೊಂದಿಗೆ ಕಾರಿನಲ್ಲಿ  ಶ್ರುತಿ ಸಹ ಇದ್ದರು. ಆದರೆ, ಅವರಿಗೆ ಏನೂ ಆಗಿರಲಿಲ್ಲ. ಹೀಗಾಗಿ, ಶ್ರುತಿ ಅವರ ಕೈವಾಡವೂ ಇರಬಹುದೆಂದು ಆರಂಭದಲ್ಲಿ ಅನುಮಾನ ವ್ಯಕ್ತವಾಗಿತ್ತು. ಆದರೆ, ಸ್ವಲ್ಪ ಸಮಯದಲ್ಲೇ ಅವರೂ ಆತ್ಮಹತ್ಯೆ ಮಾಡಿಕೊಂಡ ಸುದ್ದಿ ತಿಳಿಯಿತು ಎಂದು ಪೊಲೀಸರು ಹೇಳಿದರು.

‘ನಾನು ಪತ್ನಿಯನ್ನು ಹೆಚ್ಚು ಪ್ರೀತಿಸುತ್ತಿದ್ದೆ. ಆಕೆಯನ್ನು ಕಳೆದುಕೊಳ್ಳಲು ಇಷ್ಟವಿರಲಿಲ್ಲ. ಹೀಗಾಗಿ ಅಮಿತ್‌ಗೆ ಮಾತ್ರ ಗುಂಡು ಹೊಡೆದೆ. ಆತ ಮೃತಪಟ್ಟರೆ ಈಕೆ ಸರಿಯಾಗುತ್ತಾಳೆ ಎಂದುಕೊಂಡಿದ್ದೆ.  ಆಕೆಯೂ ಆತ್ಮಹತ್ಯೆ ಮಾಡಿಕೊಂಡಳು’ ಎಂದು ರಾಜೇಶ್ ಹೇಳಿಕೆ ನೀಡಿದ್ದಾಗಿ ಮೂಲಗಳು ತಿಳಿಸಿವೆ.

ಎಂಜಿನ್‌ ಭಾಗದಲ್ಲಿ ಜಿಪಿಎಸ್‌!
ಪತ್ನಿ ನಡತೆ ಮೇಲೆ ಅನುಮಾನ ಹೊಂದಿದ್ದ ರಾಜೇಶ್, ಸರ್ವಿಸ್‌ಗೆ ಬಿಡುವ ನೆಪದಲ್ಲಿ ವಾರದ ಹಿಂದೆ ಪತ್ನಿಯ ಕಾರನ್ನು ತೆಗೆದುಕೊಂಡು ಹೋಗಿದ್ದರು. ಬಳಿಕ ಮೆಕ್ಯಾನಿಕ್‌ಗೆ ಹೇಳಿ, ಎಂಜಿನ್ ಭಾಗದಲ್ಲಿ ವೈರಿಂಗ್ ಮಾಡಿಸಿ ಜಿಪಿಎಸ್ ಉಪಕರಣ ಅಳವಡಿಸಿದ್ದರು. ಆ ವಿಷಯ ಶ್ರುತಿ ಅವರಿಗೆ ಗೊತ್ತಿರಲಿಲ್ಲ. ಬಳಿಕ ಪತ್ನಿ ಎಲ್ಲೆಲ್ಲಿಗೆ ಹೋಗುತ್ತಿದ್ದಾಳೆ ಎಂಬುದನ್ನು ಮನೆಯಲ್ಲೇ ಕುಳಿತು ಗಮನಿಸುತ್ತಿದ್ದರು ಎಂದು ಅಧಿಕಾರಿಗಳು ಹೇಳಿದರು.

ಮುಖ್ಯಾಂಶಗಳು
* ವಕೀಲ ಅಮಿತ್ ಹತ್ಯೆ ಪ್ರಕರಣ

* ಗುಂಡು ಹೊಡೆದದ್ದು ರಾಜೇಶ್
* ಆತ್ಮಹತ್ಯೆಗೆ ಮುನ್ನ ಸಂದೇಶ ಕಳುಹಿಸಿದ್ದ ಶ್ರುತಿ

Comments are closed.