ಕರ್ನಾಟಕ

ಯಡಿಯೂರಪ್ಪ- ಈಶ್ವರಪ್ಪ ನಡುವಿನ ಬಿಕ್ಕಟ್ಟು ಶಮನಕ್ಕೆ ಆರ್‌ಎಸ್ಎಸ್ ನಿಂದ ಸಂಧಾನ

Pinterest LinkedIn Tumblr


ಬೆಂಗಳೂರು, ಜ. ೧೪- ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಹಾಗೂ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೆ.ಎಸ್. ಈಶ್ವರಪ್ಪ ನಡುವಿನ `ವಿರಸ’ ದಿನೇ ದಿನೇ ಉಲ್ಬಣಗೊಳ್ಳುತ್ತಿರುವುದರಿಂದ ಆತಂಕಗೊಂಡಿರುವ ಆರ್‌ಎಸ್ಎಸ್ ನಾಯಕರು ಪರಿಸ್ಥಿತಿಯನ್ನು ತಿಳಿಗೊಳಿಸಲು ಮುಂದಾಗಿದ್ದಾರೆ.
ಉತ್ತರ- ದಕ್ಷಿಣದತ್ತ ಮುಖ ಮಾಡಿರುವ ಇಬ್ಬರು ನಾಯಕರನ್ನು ಒಂದೆಡೆ ಸೇರಿಸಿ ಸಮಸ್ಯೆ ಪರಿಹರಿಸುವಂತೆ ಪಕ್ಷದ ಕೆಲ ನಾಯಕರು ಮಾಡಿರುವ ಮನವಿಗೆ ಸ್ಪಂದಿಸಿ ಆರ್.ಎಸ್.ಎಸ್. ನಾಯಕರು ರಂಗಪ್ರವೇಶ ಮಾಡಲಿದ್ದಾರೆ.
ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವಾಗ ಇಂತಹ ಬೆಳವಣಿಗೆಗಳು ಪಕ್ಷದ ವರ್ಚಸ್ಸಿಗೆ ಧಕ್ಕೆ ಉಂಟುಮಾಡಲಿವೆ. ಇವುಗಳನ್ನು ಬೆಳೆಯದಂತೆ ಕಡಿವಾಣ ಹಾಕಬೇಕು ಎಂಬ ತೀರ್ಮಾನಕ್ಕೆ ಬಂದಿರುವ ಆರ್‌ಎಸ್ಎಸ್ ನಾಯಕರು, ಈ ತಿಂಗಳ 16 ಅಥವಾ 17 ರಂದು ಇಬ್ಬರನ್ನು ಒಂದು ವೇದಿಕೆಯಲ್ಲಿ ಕೂರಿಸಿ ಮುಕ್ತ ಚರ್ಚೆಗೆ ಅವಕಾಶ ಕಲ್ಪಿಸಲು ತೀರ್ಮಾನಿಸಿದ್ದಾರೆ.
ಯಡಿಯೂರಪ್ಪ ಅವರು ಸದ್ಯ ಪ್ರವಾಸದಲ್ಲಿದ್ದು, ನಗರಕ್ಕೆ ವಾಪಸ್ಸಾದ ಕೂಡಲೇ ಸಂದಾನ ಸಭೆ ನಡೆಯಲಿದೆ.
ರಾಯಣ್ಣ ಬ್ರಿಗೇಡ್ ಹೆಸರಿನಲ್ಲಿ ಈಶ್ವರಪ್ಪ ಅವರು ಅಹಿಂದ ವರ್ಗಗಳನ್ನು ಸಂಘಟಿಸಬೇಕೆಂಬ ಉದ್ದೇಶ ಪಕ್ಷದ ಸಂಘಟನೆ ಬಲಪಡಿಸಲು ಪೂರಕ ಎಂದು ಹೇಳಲಾಗುತ್ತಿದ್ದರೂ, ಈ ವಿಚಾರದಲ್ಲಿ ಯಡಿಯೂರಪ್ಪ ಮತ್ತು ಈಶ್ವರಪ್ಪ ಬೆಂಬಲಿಗರ ನಡುವೆ ಹಲವು ಅನುಮಾನಗಳಿಗೆ ಕಾರಣವಾಗಿದೆ. ಇದರಿಂದಾಗಿ ಇಬ್ಬರು ನಾಯಕರ ನಡುವೆ ಕಂದಕ ಏರ್ಪಟ್ಟಿದೆ. ಹಲವು ದಿನಗಳ ಹಿಂದೆ ಇದೇ ರೀತಿಯ ಸಂಶಯಗಳು ಎದುರಾದಾಗ ಇಬ್ಬರು ನಾಯಕರನ್ನು ಹಿರಿಯ ನಾಯಕರ ಸಮ್ಮುಖದಲ್ಲಿ ಒಟ್ಟಿಗೆ ಸೇರಿಸಿ ಬುದ್ಧಿವಾದ ಹೇಳಲಾಗಿದೆ. ಆದರೂ ಕಾರಣಾಂತರಗಳಿಂದ ಇಬ್ಬರ ನಡುವಿನ ವಿರಸ ದಿನೇ ದಿನೇ ಹೆಚ್ಚಾಗುತ್ತಿದೆ.
ಈಶ್ವರಪ್ಪ ಅವರು ಬ್ರಿಗೇಡ್ ಕುರಿತಂತೆ ಗೊಂದಲದ ಹೇಳಿಕೆ ನೀಡಿರುವುದು ಯಡಿಯೂರಪ್ಪ ಅವರ ಬಣವನ್ನು ಕೆರಳಿಸಿದೆ. ತಾವು ಮುಖ್ಯಮಂತ್ರಿಯಾಗಲು ಬ್ರಿಗೇಡ್ ಬೆಂಬಲ ಅನಗತ್ಯ ಎಂಬ ಯಡಿಯೂರಪ್ಪ ಅವರ ಹೇಳಿಕೆ ಬ್ರಿಗೇಡ್ ನಾಯಕರಲ್ಲಿ ಅಸಮಾಧಾನ ಉಂಟು ಮಾಡಿದೆ. ಹೀಗಾಗಿ ಇಬ್ಬರನ್ನೂ ಒಂದೇ ವೇದಿಕೆಯಲ್ಲಿ ಕೂರಿಸಿ ಪರಸ್ಪರರ ಮನಸ್ಸಿನಲ್ಲಿರುವ ಅನುಮಾನಗಳನ್ನು ದೂರಮಾಡಲು ಆರ್‌ಎಸ್ಎಸ್ ನಾಯಕರು ರಂಗಪ್ರವೇಶ ಮಾಡುವುದು ಅನಿವಾರ್ಯವಾಗಿದೆ.
ಅಹಿಂದ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ಮುಖ್ಯಮಂತ್ರಿಯಾದ ನಂತರ ಈ ಸಮುದಾಯಗಳ ನಾಯಕರನ್ನು ಕಡೆಗಣಿಸಲಾರಂಭಿಸಿದ್ದಾರೆ. ಸಮುದಾಯಗಳ ಅಭಿವೃದ್ಧಿಗೆ ನಿರೀಕ್ಷಿತ ಮಟ್ಟದಲ್ಲಿ ಆಸಕ್ತಿ ತೋರುತ್ತಿಲ್ಲ. ಇಂತಹ ಪರಿಸ್ಥಿತಿಯನ್ನು ಜನರಿಗೆ ಮನವರಿಕೆ ಮಾಡಿ ಅಹಿಂದ ಸಮುದಾಯಗಳ ಬೆಂಬಲ ಪಡೆಯುವ ಮೂಲಕ ಬಿಜೆಪಿಯನ್ನು ಅಧಿಕಾರಕ್ಕೆ ತರುವುದು ಬ್ರಿಗೇಡ್ ಉದ್ದೇಶವಾಗಿದೆ ಎಂದು ಸಂಘಟನೆಯ ರೂವಾರಿಗಳು ಪ್ರತಿಪಾದಿಸುತ್ತಿದ್ದು, ಇದೇ ವಿಚಾರವನ್ನು ಸದ್ಯದಲ್ಲೇ ಯಡಿಯೂರಪ್ಪ ಅವರಿಗೆ ಮನವರಿಕೆ ಮಾಡಿಕೊಡಲು ತೀರ್ಮಾನಿಸಲಾಗಿದೆ.
ಹಿಂದೊಮ್ಮೆ ಯಡಿಯೂರಪ್ಪ ಅವರ ಆಶೀರ್ವಾದದೊಂದಿಗೆ ಸಂಘಟನೆ ಮಾಡಲು ಮುಂದಾಗಿದ್ದೆವು. ಅದೇಕೊ ಏನೋ ಈಗ ಅವರಿಗೆ ಮುಜುಗರ ಉಂಟಾಗುವ ಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆ ಕಾರಣಗಳೇನು ಎಂಬುದನ್ನು ತಿಳಿಯುವ ಪ್ರಯತ್ನ ಮಾಡಲಾಗಿದ್ದು, ಅವರೊಂದಿಗೆ ಸಮಗ್ರವಾಗಿ ಚರ್ಚಿಸಲು ತೀರ್ಮಾನಿಸಿದ್ದೇವೆ. ಯಾವುದೇ ಕಾರಣಕ್ಕೂ ಅಹಿಂದ ವರ್ಗಗಳ ಮತಗಳು ಒಡೆಯದಂತೆ ಕಾಪಿಟ್ಟುಕೊಳ್ಳುವುದು ಬ್ರಿಗೇಡ್ ಉದ್ದೇಶವಾಗಿದೆ ಎಂಬುದನ್ನು ಅವರಿಗೆ ಮನವರಿಕೆ ಮಾಡಿಕೊಡುತ್ತೇವೆ ಎಂದು ಸಂಘಟಕರು ತಿಳಿಸಿದ್ದಾರೆ.
ಈಶ್ವರಪ್ಪ ನಡವಳಿಕೆ ಕುರಿತು ಸಂಶಯ
ಏತನ್ಮಧ್ಯೆ ಈಶ್ವರಪ್ಪ ಅವರು ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಅವರೊಂದಿಗೆ ರಹಸ್ಯ ಸ್ಥಳದಲ್ಲಿ ಮಾತುಕತೆ ನಡೆಸಿದ್ದಾರೆ ಎಂಬ ಗುಮಾನಿ ಯಡಿಯೂರಪ್ಪ ಬಣವನ್ನು ಕೆರಳಿಸಿದೆ ಎಂದು ಹೇಳಲಾಗುತ್ತಿದೆ.
ಜೆಡಿಎಸ್‌ನಲ್ಲೇ ಗುರುತಿಸಿಕೊಂಡಿದ್ದ ಬ್ರಿಗೇಡ್ ನಾಯಕರಲ್ಲಿ ಒಬ್ಬರಾದ ಮುಕುಡಪ್ಪ ಅವರೂ ಹಲವು ಬಾರಿ ದೇವೇಗೌಡರೊಂದಿಗೆ ಚರ್ಚೆ ಮಾಡಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ. ಬಿಜೆಪಿಯಲ್ಲಿನ ಬಿಕ್ಕಟ್ಟಿಗೆ ಇದೇ ಕಾರಣ ಎಂಬ ವಿಚಾರ ಯಡಿಯೂರಪ್ಪ ಬಣದಲ್ಲಿ ವ್ಯಾಪಕವಾಗಿ ಚರ್ಚೆಗೆ ಗ್ರಾಸವಾಗಿದೆ.
ಇಂತಹ ಅನುಮಾನಗಳನ್ನು ದೂರಮಾ‌ಡಬೇಕೆಂಬುದು ಈಶ್ವರಪ್ಪ ಅವರ ಒತ್ತಾಸೆಯೂ ಆಗಿದೆ. ಈ ಕಾರಣಕ್ಕಾಗಿ ಅವರೂ ಸಹ ಯಡಿಯೂರಪ್ಪನವರನ್ನು ಭೇಟಿ ಮಾಡಿ ಮುಕ್ತವಾಗಿ ಚರ್ಚಿಸಲು ಆಸಕ್ತಿ ತೋರಿದ್ದಾರೆ ಎಂದು ಇದೇ ಮೂಲಗಳು ತಿಳಿಸಿವೆ.
ಯಡಿಯೂರಪ್ಪ ಹಾಗೂ ಈಶ್ವರಪ್ಪ ನಡುವಿನ ಮನಸ್ತಾಪ ವಿಚಾರ ರಾಷ್ಟ್ರೀಯ ನಾಯಕರ ಗಮನಕ್ಕೂ ಬಂದಿದ್ದು, ಅವರೆಲ್ಲಾ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯತ್ತ ತಮ್ಮ ಚಿತ್ತವನ್ನು ಕೇಂದ್ರೀಕರಿಸಿರುವುದರಿಂದ ರಾಜ್ಯದ ಬೆಳವಣಿಗೆಗಳ ಬಗ್ಗೆ ತಲೆ ಕೆಡಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.
ಆರ್‌ಎಸ್ಎಸ್ ನಾಯಕರ ಉದ್ದೇಶಿತ ಸಭೆಯಲ್ಲಿ ಬಿಕ್ಕಟ್ಟಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗದಿದ್ದಲ್ಲಿ ಈ ವಿಚಾರ ಹೈಕಮಾಂಡ್ ಅಂಗಳಕ್ಕೆ ರವಾನೆಯಾಗುವ ಸಾಧ್ಯತೆಗಳಿವೆ.

Comments are closed.