ಕರ್ನಾಟಕ

ಚಾಮರಾಜನಗರ: 18 ಅಡಿ ಎತ್ತರದ ಬಾಹುಬಲಿ ಮೂರ್ತಿ ಪ್ರತಿಷ್ಠಾಪನೆ

Pinterest LinkedIn Tumblr


ಚಾಮರಾಜನಗರ: ತಾಲ್ಲೂಕಿನ ಮಲೆಯೂರು ಗ್ರಾಮದ ಕನಕಗಿರಿಯಲ್ಲಿ ಫೆ. 2ರಂದು 18 ಅಡಿ ಎತ್ತರದ ಭಗವಾನ್‌ ಬಾಹುಬಲಿ ಸ್ವಾಮಿಯ ಮೂರ್ತಿ ಪ್ರತಿಷ್ಠಾಪಿಸಲಾಗುತ್ತಿದೆ. ಜ.16ರಿಂದ ಫೆ.5ರವರೆಗೆ ಕನಕಗಿರಿ ಅತಿಶಯ ಮಹೋತ್ಸವ ನಡೆಯಲಿದೆ.

ಕನಕಗಿರಿಯು ಜಿನಸಿದ್ಧರು ನೆಲೆಸಿದ್ದ ತಪೋಭೂಮಿ. ಕರ್ನಾಟಕದ ಪ್ರಾಚೀನ ಸಿದ್ಧ ಕ್ಷೇತ್ರವೂ ಹೌದು. ವೈಭವಯುತವಾಗಿ ಮಹೋತ್ಸವದ ಆಚರಣೆಗೆ ಕನಕಗಿರಿ ಅತಿಶಯ ಮಹೋತ್ಸವ ಸಮಿತಿಯಿಂದ ಭರದ ಸಿದ್ಧತೆ ನಡೆದಿದೆ.

ಮಹೋತ್ಸವದ ಅಂಗವಾಗಿ ಅಂತರ್ಮನಾ ಮುನಿಶ್ರೀ ಪ್ರಸನ್ನ ಸಾಗರ ಮಹಾರಾಜರು ಗುರುವಾರ ಕನಕಗಿರಿಯ ಪುರಪ್ರವೇಶ ಮಾಡಿದರು. ಪ್ರಸನ್ನ ಸಾಗರ ಮಹಾರಾಜರು ಶ್ರಮಣ ಪರಂಪರೆಯ ಪ್ರಸಿದ್ಧ ಧರ್ಮಾಚಾರ್ಯರಾದ ಪುಷ್ಪದಂತ ಸಾಗರ ಮುನಿಮಹಾರಾಜರ ಶಿಷ್ಯರು. ರಾಜಸ್ತಾನದಿಂದ ಕಾಲ್ನಡಿಗೆಯಲ್ಲಿ ಶ್ರೀಕ್ಷೇತ್ರಕ್ಕೆ ಆಗಮಿಸಿದ ಅವರಿಗೆ ಭವ್ಯ ಸ್ವಾಗತ ಕೋರಲಾಯಿತು. ಪಿಯುಷ್‌ ಸಾಗರ ಮಹಾರಾಜರು ಹಾಜರಿದ್ದರು.

ಬಾಹುಬಲಿ ಪ್ರತಿಮೆ ಪ್ರತಿಷ್ಠಾಪನೆ: ‘ಶ್ರೀಕ್ಷೇತ್ರದಲ್ಲಿ ಜ. 16ರಿಂದ ಜ. 31ರವರೆಗೆ ವಿವಿಧ ಆರಾಧನೆ ನಡೆಯಲಿವೆ. ಜ. 26ರಿಂದ ಫೆ. 5ರವರೆಗೆ ಪ್ರತಿದಿನ ಜಿನಸಹಸ್ರನಾಮ ವಿಧಾನ ನಡೆಯಲಿದೆ. ಫೆ. 2ರಂದು 18 ಅಡಿ ಎತ್ತರದ ಭಗವಾನ್‌ ಬಾಹುಬಲಿ ಸ್ವಾಮಿಯ ಪ್ರತಿಮೆ ಪ್ರತಿಷ್ಠಾಪಿಸಲಾಗುತ್ತಿದೆ. ಪ್ರಥಮ ಮಹಾಮಸ್ತಕಾಭಿಷೇಕವೂ ನೆರವೇರಲಿದೆ. ಬಾಹುಬಲಿಗೆ ಹೆಲಿಕಾಪ್ಟರ್‌ನಲ್ಲಿ ಪುಷ್ಪನಮನ ಸಲ್ಲಿಸಲಾಗುವುದು’ ಎಂದು ಕನಕಗಿರಿಯ ಪೀಠಾಧ್ಯಕ್ಷ ಭುವನಕೀರ್ತಿ ಭಟ್ಟಾರಕ ಸ್ವಾಮೀಜಿ ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.

ಫೆ. 2 ಮತ್ತು 3ರಂದು ಸರ್ವಧರ್ಮ ಸಮಾವೇಶ ನಡೆಯಲಿದೆ. ಜತೆಗೆ, ಪ್ರವಾಸೋದ್ಯಮ ಇಲಾಖೆಯಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರದ ಅನುದಾನದಡಿ ನಿರ್ಮಿಸಿರುವ ಧಾನ್ಯಮಂದಿರ, ಪ್ರವಾಸಿಗರ ನಿರೀಕ್ಷಣಾ ಮಂದಿರ, ಬಸ್‌ನಿಲ್ದಾಣ, ಸಂತ ಭವನದ ಉದ್ಘಾಟನೆ ನಡೆಯಲಿದೆ ಎಂದರು. ಪ್ರತಿದಿನ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿವೆ. ಕರ್ನಾಟಕ ಸೇರಿದಂತೆ ದೇಶದ ವಿವಿಧೆಡೆಯಿಂದ ಸಾವಿರಾರು ಭಕ್ತರು ಮಹೋತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ.

ಸುವ್ಯವಸ್ಥಿತವಾಗಿ ಕಾರ್ಯಕ್ರಮ ಆಯೋಜಿಸಲು ನಿರ್ಧರಿಸಲಾಗಿದೆ. ಸಮಾರೋಪದಂದು ಗಜರಥ ಮಹೋತ್ಸವ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು. ಮಹೋತ್ಸವದ ಅಂಗವಾಗಿ ಜ. 18ರಿಂದ 22ರವರೆಗೆ ಜನಕಲ್ಯಾಣ ಯೋಜನೆಯಡಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿದೆ. ಮಲೆಯೂರು ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರಿಗೆ ಅನುಕೂಲ ಕಲ್ಪಿಸಲು ಈ ಶಿಬಿರ ಆಯೋಜಿಸಲಾಗಿದೆ ಎಂದು ತಿಳಿಸಿದರು.

Comments are closed.