ಕರ್ನಾಟಕ

ತೇಲಾಡುವ ದೂಳಿನ ಕಣ ಹೆಚ್ಚಳ: ಅಪಾಯದಲ್ಲಿ ಬೆಂಗಳೂರು, ತುಮಕೂರು, ದಾವಣಗೆರೆ

Pinterest LinkedIn Tumblr


ಬೆಂಗಳೂರು: ರಾಜ್ಯದ ಬೆಂಗಳೂರು, ತುಮಕೂರು ನಗರಗಳಲ್ಲಿನ ವಾಯು ಮಾಲಿನ್ಯ ಆತಂಕಕಾರಿ ಸ್ಥಿತಿ ತಲುಪಿದೆ ಎಂದು ಗ್ರೀನ್‌ಪೀಸ್‌ ಇಂಡಿಯಾ ಸಂಸ್ಥೆ ವರದಿ ಬಹಿರಂಗಗೊಳಿಸಿದೆ.

ಅದೇ ಸಾಲಿಗೆ ದಾವಣಗೆರೆ, ರಾಯಚೂರು, ಹುಬ್ಬಳ್ಳಿ ಸಹ ಸೇರುತ್ತಿದ್ದು, ಅಲ್ಲಿನ ಮಾಲಿನ್ಯ ಪ್ರಮಾಣ ರಾಷ್ಟ್ರೀಯ ಮಿತಿಗಿಂತ ಹೆಚ್ಚಿದೆ ಎಂದು ವರದಿಯಲ್ಲಿ ಹೇಳಿದೆ. ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಆನ್‌ಲೈನ್‌ ವರದಿ ಹಾಗೂ ಎಲ್ಲಾ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗಳಿಂದ ಮಾಹಿತಿ ಹಕ್ಕು ಕಾಯ್ದೆ ಅಡಿ ಪಡೆದ ಮಾಹಿತಿ ಆಧಾರದ ಮೇಲೆ ಸಂಸ್ಥೆ ಈ ವರದಿ ನೀಡಿದೆ. ಈ ಅಧ್ಯಯನ ಅಡಿಯಲ್ಲಿ ದೇಶದ 168 ನಗರಗಳಲ್ಲಿ ಮಾಲಿನ್ಯ ಪರೀಶಿಲನೆಗೆ ಒಳಪಡಿಸಲಾಗಿದ್ದು, ಮಾಲಿನ್ಯಕ್ಕೆ ವಾಹನಗಳ ಕೊಡುಗೆಯೇ ಶೇ 42ರಷ್ಟು ಇದೆ. ರಸ್ತೆ ದೂಳಿನಿಂದ ಶೇ20 ಎಂದು ವರದಿ ಹೇಳಿದೆ.

ವಾಯು ಗುಣಮಟ್ಟ ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಒಂದು ಸಾವಿರ ಲೀಟರ್ ಗಾಳಿಯಲ್ಲಿ ತೇಲಾಡುವ ದೂಳಿನ ಪ್ರಮಾಣ 20 ಮೈಕ್ರೋ ಗ್ರಾಂ ಕ್ಯೂಬಿಕ್‌ ಮೀಟರ್‌ ಹಾಗೂ ರಾಷ್ಟ್ರೀಯ ಮಿತಿ ಪ್ರಕಾರ 60 ಮೈಕ್ರೋ ಗ್ರಾಂ ನಷ್ಟಿರಬಹುದು.

ಆದರೆ, ರಾಜ್ಯದ ನಾಲ್ಕೂ ನಗರಗಳಲ್ಲಿ ವಾರ್ಷಿಕ ಪಿಎಂ–10 ಪ್ರಮಾಣ ಸುಮಾರು 120 ಮೈಕ್ರೋ ಗ್ರಾಂ ಕ್ಯೂಬಿಕ್‌ ಮೀಟರ್‌ನಷ್ಟಿದೆ.
ಬೆಂಗಳೂರಿನ ವೈಟ್‌ಫೀಲ್ಡ್‌ ನಂತಹ ಕೈಗಾರಿಕಾ ಪ್ರದೇಶದಲ್ಲಿ ಈ ವರ್ಷ ಆರ್‌ಎಸ್‌ಪಿಎಂ ಪ್ರಮಾಣ 189 ಮೈಕ್ರೋ ಗ್ರಾಂ ಇದೆ. ರಾಷ್ಟ್ರೀಯ ಮಟ್ಟಕ್ಕಿಂತ ಇದು ಮೂರು ಪಟ್ಟು ಅಧಿಕ.

ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ವಾಹನಗಳ ಸಂಖ್ಯೆ, ನಗರೀಕರಣ, ಕೈಗಾರಿಕೆಗಳಿಂದ ನಗರದ ಕೆಲವು ಭಾಗಗಳಲ್ಲಿ ಗಾಳಿಯಲ್ಲಿರುವ ತೇಲಾಡುವ ದೂಳಿನ ಕಣದ (ಆರ್‌ಎಸ್‌ಪಿಎಂ) ಪ್ರಮಾಣ ಹೆಚ್ಚಾಗಿದೆ ಮತ್ತು ಇನ್ನೂ ಕೆಲವು ಪ್ರದೇಶದಲ್ಲಿ ಅಪಾಯಕಾರಿ ಮಟ್ಟದಲ್ಲಿದೆ ಎಂದು ವರದಿಯಲ್ಲಿದೆ.

‘ವಾಯು ಮಾಲಿನ್ಯ ಕೇವಲ ಉತ್ತರ ಭಾರತದಲ್ಲಿ ಅಷ್ಟೇ ಸಮಸ್ಯೆಯಾಗಿ ಉಳಿ­ದಿಲ್ಲ. ದಕ್ಷಿಣ ಭಾರತದ ಬೆಂಗಳೂರು ಸೇರಿದಂತೆ ಅನೇಕ ಪ್ರಮುಖ ನಗರಗಳಲ್ಲಿಯೂ ಜನರು ವಿಷಯುಕ್ತ ಗಾಳಿ ಸೇವನೆ ಮಾಡುತ್ತಿದ್ದಾರೆ’ ಎಂದು ಗ್ರೀನ್‌ಪೀಸ್‌ ವಕ್ತಾರ ಸುನೀಲ್‌ ದಾಹಿಯ ತಿಳಿಸಿದ್ದಾರೆ.

ಸೂಕ್ಷ್ಮಾತಿ ಸೂಕ್ಷ್ಮ ಕಣ

ಗಾಳಿಯಲ್ಲಿ ತೇಲಾಡುವ ಸೂಕ್ಷ್ಮಾತಿ ಸೂಕ್ಷ್ಮ ಕಣಗಳನ್ನು ಪಾರ್ಟಿಕ್ಯುಲೇಟ್‌ ಮ್ಯಾಟರ್‌ (ಪಿಎಂ) ಎಂದು ಕರೆಯಲಾಗುತ್ತದೆ. ಮನುಷ್ಯರಿಗೆ ಮತ್ತು ಪರಿಸರಕ್ಕೆ ಹಾನಿ ಮಾಡಬಲ್ಲ ಗಾಳಿಯಲ್ಲಿನ ಘನರೂಪದ ಕಣಗಳು ಮತ್ತು ದ್ರವರೂಪದ ಸಣ್ಣ ಹನಿಗಳಿವು. 2.5 ಮೈಕ್ರೋಮೀಟರ್‌ಗಿಂತಲೂ ಚಿಕ್ಕದಾದ ಕಣಗಳನ್ನು ಪಿಎಂ 2.5 ಎಂದೂ, 10 ಮೈಕ್ರೋಮೀಟರ್‌ ಅಥವಾ ಅದಕ್ಕಿಂತ ಕಡಿಮೆ ಗಾತ್ರದ ಕಣಗಳನ್ನು ಪಿಎಂ 10 ಎಂದು ವಿಭಾಗಿಸಲಾಗಿದೆ. ಭಾರತದಲ್ಲಿ ಪಿಎಂ 2.5 ಅಪಾಯಕಾರಿ ಹಾಗೂ ಪಿಎಂ 10 ಸಾಮಾನ್ಯ ಮಾಲಿನ್ಯ ಕಾರಕ ಎಂದು ಪರಿಗಣಿಸಲಾಗಿದೆ.

……………………

ಮಾಲಿನ್ಯ ನಿಯಂತ್ರಿಸಲು ಪ್ರಾಯೋಗಿಕವಾಗಿ ಸಾಧ್ಯವಿರುವ ಎಲ್ಲ ಕ್ರಮಗಳನ್ನೂ ಕೈಗೊಂಡಿದ್ದೇವೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಮಾಲಿನ್ಯ ಪ್ರಮಾಣ ಸ್ವಲ್ಪ ತಗ್ಗಿದೆ.
-ಲಕ್ಷ್ಮಣ್‌, ಅಧ್ಯಕ್ಷ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ

Comments are closed.