ಕರ್ನಾಟಕ

ಎಸ್.ಸಿ., ಎಸ್.ಟಿ. ಪದವಿ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್

Pinterest LinkedIn Tumblr


ಬೆಂಗಳೂರು, ಜ. ೧೨- ಕಲಿಕೆಗೆ ಸಹಕಾರಿಯಾಗಲಿ ಎಂಬ ಉದ್ದೇಶದಿಂದ ಪ್ರಥಮ ವರ್ಷದ ಪದವಿ ತರಗತಿಯಲ್ಲಿ ಕಲಿಯುತ್ತಿರುವ ಎಸ್ಸಿ, ಎಸ್ಟಿ ವಿದ್ಯಾರ್ಥಿಗಳಿಗೆ ಈ ವರ್ಷದಿಂದಲೇ ಉಚಿತ ಲ್ಯಾಪ್‌ಟಾಪ್ ನೀಡಲಾಗುವುದು. ಅದೇ ರೀತಿ ಇತರ ವಿದ್ಯಾರ್ಥಿಗಳಿಗೂ ಮೂರು ಲಕ್ಷ ರೂ. ಆದಾಯ ಮಿತಿಯನ್ನು ನಿಗದಿಪಡಿಸಿ ಮುಂದಿನ ವರ್ಷದಿಂದ ಅವರಿಗೂ ಲ್ಯಾಪ್‌ಟಾಪ್ ನೀಡುವ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ತಿಳಿಸಿದ್ದಾರೆ.
ನಗರದಲ್ಲಿಂದು ಏರ್ಪಡಿಸಿದ್ದ ಸ್ವಾಮಿ ವಿವೇಕಾನಂದ ಅವರ 154ನೇ ಜನ್ಮ ದಿನಾಚರಣೆ ಹಾಗೂ ರಾಷ್ಟ್ರೀಯ ಯುವ ಸಪ್ತಾಹ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಒಟ್ಟು 412 ಸರ್ಕಾರಿ ಕಾಲೇಜುಗಳಿದ್ದು, ಅವುಗಳಲ್ಲಿ 90 ಕಾಲೇಜುಗಳಿಗೆ ಈಗಾಗಲೇ ಉಚಿತ ವೈಫೈ ಸೌಲಭ್ಯ ಕಲ್ಪಿಸಲಾಗಿದೆ. ಮುಂದಿನ ವರ್ಷದಿಂದ ಎಲ್ಲ 412 ಕಾಲೇಜುಗಳಿಗೂ ಉಚಿತ ವೈಫೈ ಸೌಲಭ್ಯ ಕಲ್ಪಿಸಲಾಗುವುದು. ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ದೊರೆಯಬೇಕೆಂಬುದೇ ಇಲಾಖೆಯ ಮುಖ್ಯ ಗುರಿಯಾಗಿದೆ ಎಂದು ಹೇಳಿದರು.
ರಾಜ್ಯ ಸರ್ಕಾರ ಉನ್ನತ ಶಿಕ್ಷಣ ಇಲಾಖೆಗೆ 25 ಸಾವಿರ ಕೋಟಿ ರೂ.ಬಜೆಟ್‌ನಲ್ಲಿ ಅನುದಾನ ನೀಡಿದ್ದು, ಉನ್ನತ ಶಿಕ್ಷಣದೊಂದಿಗೆ ಪ್ರಾಥಮಿಕ ಶಿಕ್ಷಣಕ್ಕೂ ಹೆಚ್ಚಿನ ಒತ್ತು ನೀಡಲಾಗಿದೆ.
ಜಗತ್ತಿನಲ್ಲಿ ಸ್ಪರ್ಧೆಯಿರುವುದರಿಂದ ಗುಣಮಟ್ಟದ ಶಿಕ್ಷಣ ಇಂದಿನ ಅಗತ್ಯವಾಗಿದೆ ಎಂದು ಹೇಳಿದರು.
ಏಪ್ರಿಲ್‌ನಲ್ಲಿ ಸ್ಕೂಲ್ ಆಫ್ ಎಕಾನಾಮಿಕ್ಸ್ ಸ್ಥಾಪನೆ
ಡಾ. ಬಿ.ಆರ್. ಅಂಬೇಡ್ಕರ್ ಅವರ 120ನೇ ಜಯಂತಿ ಅಂಗವಾಗಿ ಇದೇ ಏಪ್ರಿಲ್ ತಿಂಗಳಲ್ಲಿ ಸ್ಕೂಲ್ ಆಫ್ ಎಕಾನಾಮಿಕ್ಸ್ ಸಂಸ್ಥೆಯನ್ನು ಬೆಂಗಳೂರಿನಲ್ಲಿ ಸ್ಥಾಪಿಸಲಾಗುವುದು. ಇದಕ್ಕಾಗಿ ಈಗಾಗಲೇ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ 44 ಎಕರೆ ಜಮೀನನ್ನು ಗುರುತಿಸಿದ್ದು, 107 ಕೋಟಿ ರೂ. ಅನುದಾನ ಬಿಡುಗ‌ಡೆ ಮಾಡಲಾಗಿದೆ ಎಂದು ತಿಳಿಸಿದರು.
ಅಂಬೇಡ್ಕರ್ ಅವರ ಅರ್ಥಶಾಸ್ತ್ರದಲ್ಲಿ ಉನ್ನತ ಶಿಕ್ಷಣ ಪಡೆದ ಪ್ರಮುಖರು. ಆದ್ದರಿಂದ ಅವರ ಜಯಂತಿಯ ಅಂಗವಾಗಿ ಈ ಶಾಲೆಯನ್ನು ಸ್ಥಾಪಿಸಲಾಗುತ್ತಿದೆ. ವಾಣಿಜ್ಯ ನಗರಿಯಾಗಿರುವ ಬೆಂಗಳೂರಿಗೆ ಇದು ಇನ್ನಷ್ಟು ಶಕ್ತಿಯನ್ನು ನೀಡಲಿದೆ ಎಂದು ಹೇಳಿದರು.
ಮಹಾರಾಣಿ ಕಾಲೇಜಿಗೆ ಸ್ವಾಯತ್ತತೆ
ನಗರದ ಮಹಾರಾಣಿ ಕಾಲೇಜಿಗೆ ಹೆಚ್ಚಿನ ಸ್ವಾಯತ್ತತೆ ನೀಡಿ ಕ್ಲಸ್ಟರ್ ವಿಶ್ವವಿದ್ಯಾಲಯ ಸ್ಥಾನಮಾನ ನೀಡಲಾಗಿದೆ. ಇದಕ್ಕಾಗಿ ಮುಂದಿನ ವರ್ಷ 55 ಕೋಟಿ ರೂ. ಮಂಜೂರು ಮಾಡಲಾಗುವುದು. ಮೂಲಸೌಕರ್ಯ ಹೆಚ್ಚಳ, ವಿದ್ಯಾರ್ಥಿನಿಯರಿಗೆ ವಸತಿ ಸೌಲಭ್ಯವನ್ನು ಕಲ್ಪಿಸಿಕೊಡಲು ಉದ್ದೇಶಿಸಲಾಗಿದೆ ಎಂದು ಹೇಳಿದರು.
ರಾಜ್ಯದಲ್ಲಿ ಪದವಿ ಪಡೆಯುವವರ ಸರಾಸರಿ ಸಂಖ್ಯೆ ಇಳಿಕೆಯಾಗಿದ್ದು, ಪ್ರಾಥಮಿಕ ಶಿಕ್ಷಣವನ್ನು ಶೇ.94 ಮಂದಿ ಪೂರೈಸಿದರೆ ಪಿಯುಸಿ ಶಿಕ್ಷಣಕ್ಕೆ ಶೇ.57 ಮಂದಿ ಮಾತ್ರ ಬರುತ್ತಾರೆ. ಉನ್ನತ ಶಿಕ್ಷಣಕ್ಕೆ ಶೇ.27ರಷ್ಟು ಮಂದಿ ಮಾತ್ರ ಬರುತ್ತಿದ್ದಾರೆ. ಕರ್ನಾಟಕದ ಬೇರೆ ಬೇರೆ ಜಿಲ್ಲೆಗಳಲ್ಲಿ ಈ ಪ್ರಮಾಣ ವ್ಯತ್ಯಸ್ಥವಾಗಿದ್ದು, ಇದಕ್ಕಾಗಿ ವಿಶೇಷ ಪ್ಯಾಕೇಜ್‌ಯೊಂದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ರಾಷ್ಟ್ರೀಯ ಯುವ ಸಪ್ತಾಹ ಸಮಾರೋಪದಲ್ಲಿ ಪ್ರಕಟಿಸಲಿದ್ದಾರೆ ಎಂದು ಹೇಳಿದರು.
ದೇಶದಲ್ಲಿ 1 ಲಕ್ಷ ವಿದೇಶಿ ವಿದ್ಯಾರ್ಥಿಗಳು ಕಲಿಯುತ್ತಿದ್ದು, ಅದರಲ್ಲಿ 36 ಸಾವಿರ ವಿದ್ಯಾರ್ಥಿಗಳು ಕರ್ನಾಟಕದಲ್ಲೇ ಕಲಿಯುತ್ತಿದ್ದಾರೆ ಎಂದು ಹೇಳಿದ ಅವರು, ಗ್ರಂಥಾಲಯಗಳಿಗೆ ಅಂತರ್ಜಾಲ ಸಂಪರ್ಕ ಕಲ್ಪಿಸಲಾಗಿದೆ. ಇದನ್ನು ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಳ್ಳಬೇಕು ಎಂದು ಹೇಳಿದರು.
ಏಕರೂಪ ಕಾಯ್ದೆ
ವಿಶ್ವವಿದ್ಯಾಲಯಗಳಲ್ಲಿ ಗುಣಮಟ್ಟದ ಶಿಕ್ಷಣ ಹಾಗೂ ಜಾತೀಯತೆ, ಭ್ರಷ್ಟಾಚಾರ, ರಾಜಕೀಯ ಕೊನೆಗಾಣಿಸಲು ಎಲ್ಲಾ ವಿಶ್ವವಿದ್ಯಾಲಯಗಳಿಗೂ ಏಕರೂಪದ ಕಾಯ್ದೆ ಜಾರಿಗೊಳಿಸಲು ನಿರ್ಧರಿಸಲಾಗಿದೆ. ಮುಂದಿನ ಬಜೆಟ್‌ನಲ್ಲಿ ಈ ಬಗ್ಗೆ ಘೋಷಣೆ ಆಗಲಿದೆ. ಕೌಶಲ್ಯ ವಿಶ್ವವಿದ್ಯಾನಿಲಯ ಸ್ಥಾಪನೆಯ ಬಗ್ಗೆಯೂ ಚಿಂತನೆ ನಡೆಯುತ್ತಿದೆ ಎಂದು ಹೇಳಿದರು.
ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಮಾತನಾಡಿ, ಸ್ವಾಮಿ ವಿವೇಕಾನಂದರವರು ಯುವಜನಾಂಗಕ್ಕೆ ಸ್ಫೂರ್ತಿಯಾಗಿದ್ದಾರೆ. ನಿರ್ಮಲ ಜೀವನ, ಶಾಂತಿ ಸೌಹಾರ್ದತೆ, ಸ್ವಾಭೀಮಾನ, ಧ್ಯಾನ ಸ್ವಾಮಿ ವಿವೇಕಾನಂದರವರ ಧ್ಯೇಯವಾಗಿತ್ತು.
ಸಮಾಜದಲ್ಲಿ ಹೆಚ್ಚುತ್ತಿರುವ ಅಸಹಿಷ್ಣುತೆಯ ಹೆಚ್ಚುತ್ತಿರುವ ಈ ಸಂದರ್ಭದಲ್ಲಿ ಅವರ ಆದರ್ಶಗಳು ಇಂದೂ ಹೆಚ್ಚು ಪ್ರಸ್ತುತವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವೀರೇಶಾನಂದ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಉನ್ನತ ಶಿಕ್ಷಣ ಇಲಾಖೆಯ ಆಯುಕ್ತ ಅಜಯ್ ನಾಗಭೂಷಣ್, ಇಲಾಖೆಯ ನಿರ್ದೇಶಕಿ ಪ್ರೊ. ಕುಸುಮಾ ಮತ್ತಿತರರು ಭಾಗವಹಿಸಿದ್ದರು.

Comments are closed.