ಕರ್ನಾಟಕ

ದೇಶದಲ್ಲಿ ಡಿಜಿಟಲ್ ಕ್ರಾಂತಿ ಮಾಡ ಗ್ರಾಮ ಪಂಚಾಯಿತಿಗೆ ಇಂಟರ್‌ನೆಟ್ ಸೌಲಭ್ಯ

Pinterest LinkedIn Tumblr


ಬೆಂಗಳೂರು, ಜ. ೧೨- ದೇಶದ ಮಾಹಿತಿ ತಂತ್ರಜ್ಞಾನ ಸೇವೆಗಳು ಮತ್ತು ಪರಿಹಾರ ಒದಗಿಸುವ ಸಂಸ್ಥೆ ಎಂಫಸಿಸ್ ರಜತ ಮಹೋತ್ಸವ ಆಚರಿಸುವ ಹಿನ್ನೆಲೆಯಲ್ಲಿ ನಗರದ ಪ್ರಧಾನ ಕಚೇರಿಯಲ್ಲಿಂದು ಕೇಂದ್ರ ಮಾಹಿತಿ ತಂತ್ರಜ್ಞಾನ ಇಲಾಖೆ ಸಚಿವ ಸಿ.ಪಿ. ಚೌಧರಿ ಅವರು ಮೈಸ್ಟಾಂಪ್‌ನ್ನು ಅನಾವರಣಗೊಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ದೇಶದಲ್ಲಿ ಡಿಜಿಟಲ್ ಕ್ರಾಂತಿ ಮಾಡುವ ಪ್ರಧಾನಿ ನರೇಂದ್ರ ಮೋದಿಯವರ ಆಶಯದ ಹಿನ್ನೆಲೆಯಲ್ಲಿ ಇಲಾಖೆಯು ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ತಿಳಿಸಿದರು.
ದೇಶದ ಪ್ರತಿ ಗ್ರಾಮ ಪಂಚಾಯ್ತಿಗಳಲ್ಲಿ ಸಾಮಾನ್ಯ ಸೇವಾ ಕೇಂದ್ರಗಳನ್ನು ಆರಂಭಿಸುವ ಮೂಲಕ ಅವುಗಳನ್ನು ಮೇಲ್ದರ್ಜೆಗೇರಿಸಲಾಗುವುದು. ಉತ್ತಮ ಇಂಟರ್‌ನೆಟ್ ಸೌಲಭ್ಯವನ್ನು ಕಲ್ಪಿಸಲಾಗುವುದು ಎಂದು ತಿಳಿಸಿದರು.
ದೇಶವನ್ನು ತಂತ್ರಜ್ಞಾನ ಕ್ಷೇತ್ರದಲ್ಲಿ ಪ್ರಗತಿಪರ ದೇಶವನ್ನಾಗಿಸುವ ಕಾಲ ಸನ್ನಿಹಿತವಾಗಿದ್ದು, ತಂತ್ರಜ್ಞಾನದಲ್ಲಿ ಹೊಸ ಅನ್ವೇಷಣೆಗಳನ್ನು ಕೈಗೊಳ್ಳುವ ಅವಶ್ಯಕತೆ ಇದೆ ಎಂದು ಅವರು ಹೇಳಿದರು.
ಎಂಫಸಿಸ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಣೇಶ್ ಅಯ್ಯರ್ ಮಾತನಾಡಿ, ಎಂಫಸಿಸ್ ಕಂಪೆನಿಯು 25 ವರ್ಷಗಳನ್ನು ಪೂರೈಸಿದ್ದು, ಮೈಸ್ಟಾಂಪ್ ಪಡೆದ ದೇಶದ ಮೊಟ್ಟ ಮೊದಲ ಕಾರ್ಪೊರೇಟ್ ಸಂಸ್ಥೆಯಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಮುಂದಿನ 25 ವರ್ಷಗಳು ಇನ್ನಷ್ಟು ಯಶಸ್ವಿಯಾಗಲಿದೆ. ಭವಿಷ್ಯದ ದಿನದಲ್ಲಿ ಆತ್ಮವಿಶ್ವಾಸದಿಂದ ಹೆಜ್ಜೆ ಇಡಲಿದ್ದೇವೆ ಎಂದು ಹೇಳಿದರು.
ಅಂಚೆ ಇಲಾಖೆ ದಕ್ಷಿಣ ಕರ್ನಾಟಕ ವಲಯದ ಪೋಸ್ಟ್‌ ಮಾಸ್ಟರ್ ಜನರಲ್ ಎಸ್. ರಾಜೇಂದ್ರಕುಮಾರ್ ಮಾತನಾಡಿ, ಕಾರ್ಪೊರೇಟ್ ವಲಯದಲ್ಲಿ ಎಸ್‌ಬಿಎಂ, ಎಚ್ಎಎಲ್, ಅಮೆಜಾನ್ ಸಂಸ್ಥೆಗಳು ಮೈಸ್ಟಾಂಪ್ ಪಡೆದಿದ್ದರೆ, ಮೊಟ್ಟ ಮೊದಲ ಬಾರಿಗೆ ತಂತ್ರಜ್ಞಾನ ವಲಯದಲ್ಲಿ ಮೈಸ್ಟಾಂಪ್ ಪಡೆದ ಮೊದಲ ಕಂಪೆನಿ ಎಂಫಸಿಸ್ ಎಂದು ಹೇಳಿದರು.

Comments are closed.