ರಾಷ್ಟ್ರೀಯ

ಯೋಧ ತೇಜ್ ಕುಟುಂಬಕ್ಕೆ ಕೊಲೆ ಬೆದರಿಕೆ: ಯೋಧ ನಾಪತ್ತೆ

Pinterest LinkedIn Tumblr


ಶ್ರೀನಗರ(ಜ.12): BSF ಯೋಧರಿಗೆ ನೀಡುತ್ತಿರುವ ಕಳಪೆ ಊಟ’ದ ದೃಶ್ಯಾವಳಿಗಳಿದ್ದ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ದೇಶದಾದ್ಯಂತ ಸಂಚಲನ ಮೂಡಿಸಿದ್ದ ಯೋಧ ತೇಜ್ ಬಹದ್ದೂರ್ ಯಾದವ್ ಇದೀಗ ನಿಗೂಢವಾಗಿ ನಾಪತ್ತೆಯಾಗಿದ್ದಾರೆ ಅಲ್ಲದೇ ಅವರ ಕುಟುಂಬದವರಿಗೆ ಕೊಲೆ ಬೆದರಿಕೆ ಕರೆಗಳು ಬರಲಾರಂಭಿಸಿವೆ. ಖುದ್ದು ತೇಜ್ ಯಾದವ್ ಪತ್ನಿ ಇಂತಹುದೊಂದು ಹೇಳಿಕೆಯನ್ನು ಮಾಧ್ಯಮಗಳಿಗೆ ನೀಡಿದ್ದಾರೆ.
ಮಂಗಳವಾರದಂದು ವಿಡಿಯೋ ಮೂಲಕ ಕರಾಳ ಸತ್ಯ ಬಿಚ್ಚಿಟ್ಟು ಹಿರಿಯ ಅಧಿಕಾರಿಗಳ ಭ್ರಷ್ಟಾಚಾರವನ್ನು ಬಯಲಿಗೆಳೆದಿದ್ದ ತೇಜ್ ಯಾದವ್ ಕುಟುಂಬಕ್ಕೀಗ ಬೆದರಿಕೆ ಕರೆಗಳು ಬರಲಾರಂಭಿಸಿದೆ. ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಪತ್ನಿ ಶರ್ಮಿಳಾ ‘ತೇಜ್ ಯಾದವ್ ಫೇಸ್’ಬುಕ್’ನಲ್ಲಿ ವಿಡಿಯೋ ಹಾಕಿದ ಬಳಿಕ ನಮಗೆ ಹಲವಾರು ಕೊಲೆ ಬೆದರಿಕೆ ಬರಲಾರಂಭಿಸಿವೆ. ಬೆದರಿಕೆ ಹಾಕಿದವರು ಇನ್ಮುಂದೆ ನೀವು ಬಹಳ ಕೆಟ್ಟ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಹೆದರಿಸುತ್ತಿದ್ದಾರೆ. ತೇಜ್ ಮಾಡಿರುವುದರಲ್ಲಿ ಯಾವುದೇ ತಪ್ಪಿಲ್ಲ. ಅವರಿಗೆ ಈ ಮೊದಲೂ ಅಧಿಕಾರಿಗಳು ಕಿರುಕುಳ ನೀಡಿದ್ದರು. ಅವರಿಗೆ ಯಾವುದೇ ಹಾನಿಯಾಗದಿರಲಿ ಎಂದು ದೇವರಲ್ಲಿ ಪ್ರಾರ್ಥಿಸಿಕೊಳ್ಳುತ್ತಿದ್ದೇನೆ’ ಎಂದಿದ್ದಾರೆ. ಇವರ ಹೇಳಿಕೆಯನ್ನು ತೇಜ್ ಯಾದವ್ ತಂದೆ ಶೇರ್ ಸಿಂಗ್ ಮತ್ತು ತಾಯಿ ನಿಹಾಲ್ ಕೌರ್ ಬೆಂಬಲಿಸಿದ್ದಾರೆ.
ಮಂಗಳವಾರದಿಂದ ನಾಪತ್ತೆಯಾದ ತೇಜ್ ಯಾದವ್!
ಕಳೆದ ಸೋಮವಾರದಂದು ತೇಜ್ ಯಾದವ್ ವಿಡಿಯೋಗಳನ್ನು ಸಾಮಾಜಿಕ ಜಾಲಾತಾಣಗಳಲ್ಲಿ ಅಪ್ಲೋಡ್ ಮಾಡಿದ್ದು, ಇವು ವೈರಲ್ ಆಗಿದ್ದವು. ಇದಾದ ಮರುದಿನ ಬೆಳಿಗ್ಗೆ ಸುಮಾರು 9 ಗಂಟೆಗೆ ತೇಜ್ ತನ್ನ ಪತ್ನಿಗೆ ಕರೆ ಮಾಡಿ ಮಾತನಾಡಿದ್ದರಂತೆ. ಈ ವೇಳೆ ವಿಡಿಯೋ ಕುರಿತಾಗಿ ಮಾತನಾಡಿದ್ದರಂತೆ. ಆದರೆ ಇದಾದ ಬಳಿಕ ತೇಜ್ ಯಾವುದೇ ಕರೆ ಮಾಡಿಲ್ಲ, ಅವರು ಎಲ್ಲಿದ್ದಾರೆ, ಹೇಗಿದ್ದಾರೆ ಎಂಬ ಕನಿಷ್ಟ ಮಾಹಿತಿಯೂ ನಮಗೆ ತಿಳಿದಿಲ್ಲ ಎಂದು ಪತ್ನಿ ತಿಳಿಸಿದ್ದಾರೆ. ಹೀಗಿರುವಾಗ ತೇಜ್ ಯಾದವ್ ಕೂಡಾ ತನ್ನ ಸೆಲ್ಫೀ ವಿಡಿಯೋದಲ್ಲಿ ‘ಈ ದೃಶ್ಯಗಳು ಶೇರ್ ಮಾಡಿದ ಬಳಿಕ ನಾನು ಬದುಕುತ್ತೀನೋ, ಇಲ್ಲವೋ ತಿಳಿದಿಲ್ಲ’ ಎಂಬ ಮಾತು ನಾವು ನೆನಪಿಸಿಕೊಳ್ಳಲೇಬೇಕು.
ಫೇಸ್’ಬುಕ್ ಏನಾಯ್ತು?
ಯಾವತ್ತೂ ಫೇಸ್’ಬುಕ್’ನಲ್ಲಿ ಆ್ಯಕ್ಟಿವ್ ಆಗಿರುತ್ತಿದ್ದ ತೇಜ್ ಮಂಗಳವಾರದಿಂದ ಯಾವುದೇ ಪೋಸ್ಟ್’ಗಳನ್ನು ಹಾಕಿಲ್ಲ ಹಾಗೂ ಶೇರ್ ಮಾಡಿಕೊಂಡಿಲ್ಲ. ವಿಡಿಯೋ ಹಾಕುವುದಕ್ಕೂ ಮೊದಲ ಏನಿಲ್ಲವೆಂದರೂ ಶುಭ ಮುಂಜಾನೆಯ ಸಂದೇಶ ಹಾಕುತ್ತಿದ್ದ ತೇಜ್ ಮಂಗಳವಾರ ರಾತ್ರಿಯಿಂದ ಯಾವುದೇ ಪೋಸ್ಟ್ ಹಾಕದಿರುವುದು ಅನುಮಾನ ಮೂಡಿಸುತ್ತಿದೆ. ಅವರ ಅಂತಿಮ ಪೋಸ್ಟ್ ಶೇರ್ ಆಗಿರುವುದು ಮಂಗಳವಾರದಂದು ರಾತ್ರಿ 08 ಗಂಟೆಗೆ.
ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಕೇಂದ್ರ ಗೃಹ ಸಚಿವರು ಈ ಕುರಿತಾಗಿ ತನಿಖೆ ನಡೆಸಿ ವರದಿ ನೀಡುವಂತೆ ಆದೇಶಿಸಿದ್ದರು. ಇದರ ಬೆನ್ನಲ್ಲೇ ಪತ್ರಿಕಾ ಹೇಳಿಕೆ ನೀಡಿದ್ದ BSF ಅಧಿಕಾರಿ ‘ತೇಜ್ ಯಾದವ್ ನಡವಳಿಕೆ ಸರಿ ಇರಲಿಲ್ಲ, ಅವರಿಗೆ ಕೌನ್ಸೆಲಿಂಗ್ ನೀಡಲಾಗುತ್ತಿತ್ತು. ಅವರಿಗೆ ಕುಟುಂಬವಿದೆ ಎಂಬ ಒಂದೇ ಕಾರಣದಿಂದ ಕೆಲಸದಿಂದ ತೆಗೆದು ಹಾಕಿರಲಿಲ್ಲ. BSF ಯೋಧರಿಗೆ ನಾವು ಸರಿಯಾದ ಆಹಾರ ಪೂರೈಸುತ್ತಿದ್ದೇವೆ ಎಂದಿದ್ದರು.
ಆದರೆ ಪರಿಶೀಲನೆ ವೇಳೆ ಇಲ್ಲಿನ ಜನರು ತೇಜ್ ಯಾದವ್ ಹೇಳಿರುವುದರಲ್ಲಿ ಯಾವುದೇ ತಪ್ಪಿಲ್ಲ. ಇಲ್ಲಿನ ಅಧಿಕಾರಿಗಳು ಯೋಧರಿಗೆ ಬಂದ ದವಸ ಧಾನ್ಯಗಳನ್ನು ಅರ್ಧ ಬೆಲೆಗೆ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿದ್ದಾರೆ ಎಂದು ಒಪ್ಪಿಕೊಂಡಿದ್ದರು. ಇದೇ ವಿಚಾರಕ್ಕೆ ಸಂಬಂಧಪಟ್ಟಂತೆ ‘ಈ ಮೊದಲೇ ತೇಜ್ ಅಧಿಕಾರಿಗಳ ವಿರುದ್ಧ ದೂರು ನೀಡಿದ್ದರು. ಇದೇ ಕಾರಣದಿಂದ ಅವರ ವಿರುದ್ಧ ಶಿಸ್ತು ಕ್ರಮ ಕೈಗೊಂಡಿದ್ದರು’ ಎಂದು ಪತ್ನಿ ತಿಳಿಸಿದ್ದಾರೆ.

Comments are closed.