ರಾಷ್ಟ್ರೀಯ

ಜೈಲು ವಾಸ ಅನುಭವಿಸಿದ ಲಾಲುಗೆ 10 ಸಾವಿರ ಪಿಂಚಣಿ

Pinterest LinkedIn Tumblr


ಪಟನಾ(ಜ.12): ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್ ₹10 ಸಾವಿರ ಪಿಂಚಣಿಗಾಗಿ ಅರ್ಜಿ ಸಲ್ಲಿಸಿದ್ದು, ಅದಕ್ಕೆ ಬಿಹಾರ ಸರ್ಕಾರ ಒಪ್ಪಿಗೆ ನೀಡಿದೆ.
1975ರ ತುರ್ತು ಪರಿಸ್ಥಿತಿ ವೇಳೆ ಜೈಲು ಶಿಕ್ಷೆ ಅನುಭವಿಸಿದ್ದಕ್ಕಾಗಿ ‘ಜೆ.ಪಿ.ಸೇನಾನಿ ಸಮ್ಮಾನ್ ಪಿಂಚಣಿ’ ಯೋಜನೆಯನ್ವಯ ಲಾಲು ಅವರಿಗೆ ಈ ಸೌಲಭ್ಯ ಸಿಗಲಿದೆ.
ಹಾಲಿ ಮುಖ್ಯಮಂತ್ರಿ ನಿತೀಶ್‌ಕುಮಾರ್ ನೇತೃತ್ವದ ಸರ್ಕಾರ ಅಧಿಕಾರದಲ್ಲಿದ್ದಾಗ ಅಂದರೆ 2009ರಲ್ಲಿಯೇ ಈ ಯೋಜನೆ ಅನುಷ್ಠಾನಗೊಂಡಿತ್ತು. ಜೆ.ಪಿ.ಚಳವಳಿಯಲ್ಲಿ ಭಾಗವಹಿಸಿದ ಪ್ರಮುಖರಿಗಾಗಿ ಈ ಸೌಲಭ್ಯ ನೀಡಬೇಕೆನ್ನುವುದು ಈ ಯೋಜನೆಯ ಆಶಯ. ಬಿಹಾರ ಸರ್ಕಾರದ ದಾಖಲೆಗಳ ಪ್ರಕಾರ ಸೌಲಭ್ಯ ಪಡೆಯಲು 3,200 ಮಂದಿ ಅರ್ಜಿ ಸಲ್ಲಿಸಿದ್ದರು. ಈ ಪೈಕಿ 2,500 ಮಂದಿಗೆ ಪಿಂಚಣಿ ಸಿಗುತ್ತಿದೆ.
ಎರಡು ವಿಧಗಳು: ಪಿಂಚಣಿ ಪಡೆಯಲು ಎರಡು ವಿಭಾಗಗಳಲ್ಲಿ ಬರುವವರು ಅರ್ಹರಾಗುತ್ತಾರೆ. ತುರ್ತು ಪರಿಸ್ಥಿತಿ ಅವಧಿಯಲ್ಲಿ 1 ತಿಂಗಳ ಕಾಲ ಜೈಲು ಶಿಕ್ಷೆ ಅನುಭವಿಸಿದರೆ ₹5 ಸಾವಿರ, 6 ತಿಂಗಳು, ಅದಕ್ಕಿಂತ ಹೆಚ್ಚು ಕಾಲ ಜೈಲು ಶಿಕ್ಷೆ ಅನುಭವಿಸಿದರೆ ₹10 ಸಾವಿರ ಪಿಂಚಣಿಗೆ ಅರ್ಹರಾಗುತ್ತಾರೆ. ಮಾಜಿ ಮುಖ್ಯಮಂತ್ರಿ ಲಾಲು ಯಾದವ್ 6 ತಿಂಗಳ ಕಾಲ ಜೈಲು ಶಿಕ್ಷೆ ಅನುಭವಿಸಿದ್ದರಿಂದ ಪ್ರತಿ ತಿಂಗಳು ₹10 ಸಾವಿರ ಪಿಂಚಣಿ ಪಡೆಯಲಿದ್ದಾರೆ. 2009ರಿಂದ ಯೋಜನೆ ಜಾರಿಯಾಗಿದ್ದುದರಿಂದ ಆ ವರ್ಷದಿಂದ ಪೂರ್ವಾನ್ವಯವಾಗಿ ಹಿಂಬಾಕಿ (ಅರಿಯರ್ಸ್) ಅನ್ನೂ ಪಡೆಯಲಿದ್ದಾರೆ.
ಪಟನಾ ವಿವಿ ವಿದ್ಯಾರ್ಥಿ ಸಂಘಟನೆ ನಾಯಕರಾಗಿದ್ದ ವೇಳೆ ಲಾಲು ಯಾದವ್ 1974ರ ಮಾ.18ರಂದು ಬಿಹಾರ ಪ್ರದೇಶ ಸಂಘರ್ಷ ಸಮಿತಿ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ನಂತರದ ದಿನಗಳಲ್ಲಿ ವಿದ್ಯಾರ್ಥಿ ಚಳವಳಿಯ ನೇತೃತ್ವವನ್ನು ಜಯಪ್ರಕಾಶ್ ನಾರಾಯಣ್ ವಹಿಸಿದ್ದರು. ಒಂದು ವರ್ಷ ಕಾಲ ಲಾಲು ಯಾದವ್ ಬಂಧನ ತಪ್ಪಿಸಿಕೊಳ್ಳುತ್ತಿದ್ದರು. ಹಲವೆಡೆ ತಲೆಮರೆಸಿಕೊಂಡು ಓಡಾಡುತ್ತಿದ್ದರು. ಅಂತಿಮವಾಗಿ ಅವರು ಸೆರೆ ಸಿಕ್ಕು, ಪಟನಾ ಮೆಡಿಕಲ್ ಕಾಲೇಜಿನಲ್ಲಿದ್ದ ತಾತ್ಕಾಲಿಕ ಜೈಲು ಮತ್ತು ಬಕ್ಸಾರ್‌’ನಲ್ಲಿರುವ ಕಾರಾಗೃಹದಲ್ಲಿದ್ದರು ಎಂದು ‘ದ ಇಂಡಿಯನ್ ಎಕ್ಸ್‌ಪ್ರೆಸ್’ ವರದಿ ಮಾಡಿದೆ.

Comments are closed.