ಕರ್ನಾಟಕ

ಈಶ್ವರಪ್ಪರಿಗೆ ಶಾಕ್ ನೀಡಲು ಮುಂದಾಗಿರುವ ಯಡಿಯೂರಪ್ಪ ! ವಿಪಕ್ಷ ಸ್ಥಾನದಿಂದ ಈಶ್ವರಪ್ಪಗೆ ಕೊಕ್?

Pinterest LinkedIn Tumblr

ಬೆಂಗಳೂರು: ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಮೂಲಕ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಬಣಕ್ಕೆ ಸಡ್ಡು ಹೊಡೆದಿರುವ ಮಾಜಿ ಉಪಮುಖ್ಯಮಂತ್ರಿ ಕೆಎಸ್ ಈಶ್ವರಪ್ಪ ನಡುವಿನ ಜಗಳ ಈಗ ತಾರಕಕ್ಕೇರಿದೆ. ಈಶ್ವರಪ್ಪಗೆ ಶಿಷ್ಯ, ಮಾಜಿ ಮೇಯರ್ ವೆಂಕಟೇಶ್ ಮೂರ್ತಿಗೆ ಬಿಜೆಪಿಯಿಂದ ಗೇಟ್ ಪಾಸ್ ಕೊಟ್ಟ ಬೆನ್ನಲ್ಲೇ, ಬ್ರಿಗೇಡ್ ಮುಂದಾಳು ಈಶ್ವರಪ್ಪಗೆ ಬಿಸಿ ಮುಟ್ಟಿಸಲು ಬಿಎಸ್ ವೈ ಮುಂದಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಈಶ್ವರಪ್ಪನವರನ್ನು ವಿಪಕ್ಷ ಸ್ಥಾನದಿಂದಲೇ ಇಳಿಸಲು ಬಿಎಸ್’ವೈ ಯೋಜನೆ ಹಾಕಿದ್ದಾರೆನ್ನಲಾಗಿದೆ. ಈ ಸುದ್ದಿಗೆ ಪೂರಕವೆಂಬಂತೆ, ಇಂದು ಸಂಜೆ ನಡೆಯಲಿರುವ ಬಿಜೆಪಿ ಎಂಎಲ್’ಸಿಗಳ ಸಭೆಗೆ ಕೆಎಸ್ ಈಶ್ವರಪ್ಪನವರಿಗೆ ಆಹ್ವಾನವನ್ನೇ ನೀಡಲಾಗಿಲ್ಲ. ಈಶ್ವರಪ್ಪ ಅನುಪಸ್ಥಿತಿಯಲ್ಲಿ ಬಿಎಸ್’ವೈ ಈ ಸಭೆ ಕರೆದಿದ್ದಾರೆ.

ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆ ಹೆಸರಿನಲ್ಲಿ ವಿಧಾನಪರಿಷತ್ ಸದಸ್ಯರ ಸಭೆಯನ್ನು ಅಧಿಕೃತವಾಗಿ ಕರೆಯಲಾಗಿದೆ. 25 ಬಿಜೆಪಿ ಎಂಎಲ್’ಸಿಗಳ ಪೈಕಿ ಈಶ್ವರಪ್ಪ ಹೊರತುಪಡಿಸಿ ಉಳಿದವರೆಲ್ಲರಿಗೂ ಸಭೆಗೆ ಆಹ್ವಾನ ನೀಡಲಾಗಿದೆ. ಇಂದು ಸಂಜೆ ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ನಡೆಯಲಿರುವ ಈ ಸಭೆಯಲ್ಲಿ ಈಶ್ವರಪ್ಪನವರನ್ನು ವಿಪಕ್ಷ ಸ್ಥಾನದಿಂದ ಕೆಳಗಿಳಿಸುವ ಕುರಿತು ನಿರ್ಣಯ ಕೈಗೊಳ್ಳುವ ಸಾಧ್ಯತೆ ಇದೆ ಎಂದು ಬಿಜೆಪಿ ಮೂಲಗಳು ಹೇಳುತ್ತಿವೆ.

ಇದೇ ವೇಳೆ, ಬಿಎಸ್ ಯಡಿಯೂರಪ್ಪನವರು ರಾಯಣ್ಣ ಬ್ರಿಗೇಡ್ ವಿರುದ್ಧ ಮತ್ತೊಮ್ಮೆ ಕಠಿಣ ಶಬ್ದಗಳನ್ನು ಪ್ರಯೋಗಿಸಿದ್ದಾರೆ. ಬ್ರಿಗೇಡ್’ನ ಚಟುವಟಿಕೆಯಲ್ಲಿ ಪಾಲ್ಗೊಂಡವರಿಗೆ ಶಿಸ್ತಿನ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. ಭಾರತೀಯ ಜನತಾ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾರೂ ಬ್ರಿಗೇಡ್’ನೊಂದಿಗೆ ಜೋಡಿಸಿಕೊಳ್ಳಬಾರದು ಎಂದು ಬಿಎಸ್’ವೈ ಆಗ್ರಹಿಸಿದ್ದಾರೆ. ಮೊನ್ನೆಯಷ್ಟೇ, ರಾಯಣ್ಣ ಬ್ರಿಗೇಡ್’ನ ಪ್ರಮುಖ ಭಾಗವಾಗಿರುವ ವೆಂಕಟೇಶ್’ಮೂರ್ತಿಯವರನ್ನು ಪಕ್ಷದಿಂದ ಅಮಾನತುಗೊಳಿಸಿ, ಈಶ್ವರಪ್ಪಗೆ ಪರೋಕ್ಷ ಎಚ್ಚರಿಕೆ ನೀಡಲಾಗಿತ್ತು.

Comments are closed.