ಕರ್ನಾಟಕ

ಉಚಿತ ಅಡುಗೆ ಸ್ಟೌವ್

Pinterest LinkedIn Tumblr


ಬೆಂಗಳೂರು, ಜ. ೯- ಕೇಂದ್ರ ಸರ್ಕಾರದ ಉಜ್ವಲ ಯೋಜನೆಯಡಿ ಅಡುಗೆ ಅನಿಲ ಸಂಪರ್ಕ ಪಡೆಯುವ ಫಲಾನುಭವಿಗಳಿಗೆ ರಾಜ್ಯ ಸರ್ಕಾರದಿಂದ ಉಚಿತವಾಗಿ ಅಡುಗೆ ಸ್ಟೌವ್ ನೀಡಲು ನಿರ್ಧರಿಸಲಾಗಿದೆ ಎಂದು ರಾಜ್ಯದ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಯು.ಟಿ. ಖಾದರ್ ಹೇಳಿದರು.

`ಉಜ್ವಲ’ ಯೋಜನೆಯ ಫಲಾನುಭವಿಗಳಿಗೆ ಸ್ಟೌವ್ ಜೊತೆಗೆ ರೆಗ್ಯುಲೇಟರ್ ಮತ್ತು ರಬ್ಬರ್ ಕೊಳವೆಯನ್ನು ಉಚಿತವಾಗಿ ನೀಡಲಾಗುವುದು. ಈ ಯೋಜನೆ ಜಾರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಒಪ್ಪಿಗೆ ನೀಡಿದ್ದಾರೆ ಎಂದವರು ಹೇಳಿದರು.

ಆನ್‌ಲೈನ್ ಮೂಲಕ ಎಪಿಎಲ್ ಪಡಿತರ ಕಾರ್ಡನ್ನು ಮನೆ ಬಾಗಿಲಿಗೆ ತಲುಪಿಸುವ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗೆ ಚಾಲನೆ ನೀಡಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಉಜ್ವಲ ಯೋಜನೆಗೆ ಸದ್ಯದಲ್ಲೇ ಚಾಲನೆ ನೀಡಲಾಗುವುದು. ಕೇಂದ್ರದ ಪೆಟ್ರೋಲಿಯಂ ಸಚಿವರು ದಿನಾಂಕ ನಿಗದಿಗಾಗಿ ಕಾಯಲಾಗುತ್ತಿದೆ. ಈ ಯೋಜನೆಯಡಿ ಕೇಂದ್ರ ಸರ್ಕಾರ ಅಡುಗೆ ಅನಿಲದ ಸಿಲಿಂಡರ್‌ನ್ನು ಫಲಾನುಭವಿಗಳಿಗೆ ನೀಡುತ್ತದೆ. ಸ್ಟೌವ್ ಇಲ್ಲದೆ ಅಡುಗೆ ಅನಿಲದ ಸಿಲಿಂಡರ್ ಬಳಸುವುದಾದರೂ ಹೇಗೆ? ಹಾಗಾಗಿ ರಾಜ್ಯ ಸರ್ಕಾರ ತನ್ನ ಸ್ವಂತ ಖರ್ಚಿನಿಂದ ಸ್ಟೌವ್, ರೆಗ್ಯುಲೇಟರ್ ನೀಡುತ್ತಿದೆ ಎಂದರು.

ಉಜ್ವಲ ಯೋಜನೆಯಡಿ ಎಲ್‌ಪಿಜಿ ಸಂಪರ್ಕ ಪಡೆಯಲು ಈಗಾಗಲೇ 3 ಲಕ್ಷ ಅರ್ಜಿಗಳು ಬಂದಿವೆ ಎಂದರು.

ಎಪಿಎಲ್ ಕಾರ್ಡ್ ಯೋಜನೆಗೆ ಚಾಲನೆ

ಆನ್‌ಲೈನ್ ಮೂಲಕ ಎಪಿಎಲ್ ಪಡಿತರ ಕಾರ್ಡ್ ಪಡೆಯುವ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗೆ ಇಂದಿನಿಂದ ಚಾಲನೆ ದೊರೆತಿದೆ.

ಎಪಿಎಲ್ ಪಡಿತರ ಕಾರ್ಡ್ ಪಡೆಯಬಯಸುವವರು ಆನ್‌ಲೈನ್ ಮೂಲಕ ಆಧಾರ್ ನಂಬರ್‌ನ್ನು ನಮೂದಿಸಿ ತಕ್ಷಣ ತಾತ್ಕಾಲಿಕ ಕಾರ್ಡ್‌ನ್ನು ಪಡೆಯಬಹುದಾಗಿದೆ. ಇದಾದ 15 ದಿನಗಳಲ್ಲಿ ಅರ್ಜಿದಾರರ ಮನೆ ಬಾಗಿಲಿಗೆ ಸ್ಪೀಡ್ ಪೋಸ್ಟ್ ಮೂಲಕ ಖಾಯಂ ಕಾರ್ಡ್ ಬರಲಿದೆ. ಕಾರ್ಡ್ ಬಂದಾಗ 100 ರೂ. ಪಾವತಿಸಿ ಪಡೆಯಬಹುದಾಗಿದೆ.

ಆನ್‌ಲೈನ್‌ನಲ್ಲಿ ಎಪಿಎಲ್ ಪಡಿತರ ಕಾರ್ಡ್ ಪಡೆಯುವ ಯೋಜನೆಗೆ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಯು.ಟಿ. ಖಾದರ್ ವಿಕಾಸಸೌಧದಲ್ಲಿಂದು ವಿದ್ಯುಕ್ತವಾಗಿ ಚಾಲನೆ ನೀಡಿ, ಕಾರ್ಡ್ ಪಡೆಯುವ ವ್ಯವಸ್ಥೆ ಬಗ್ಗೆ ವಿವರಿಸಿದರು.

ರಾಜ್ಯದ ಯಾವುದೇ ಭಾಗದಿಂದ ಆನ್‌ಲೈನ್ ಮೂಲಕ ಎಪಿಎಲ್ ಪಡಿತರ ಚೀಟಿಗಾಗಿ ಅರ್ಜಿ ಹಾಕಬಹುದಾಗಿದೆ. ತಕ್ಷಣಕ್ಕೆ ಅವರಿಗೆ ತಾತ್ಕಾಲಿಕ ಕಾರ್ಡ್ ಸಿಗಲಿದೆ. ಅದನ್ನು ಬಳಸಿಕೊಂಡು ಅವರು ಈ ಪಡಿತರ ಪಡೆಯಬಹುದು ಎಂದರು.

ಈ ಮೊದಲಿದ್ದಂತೆ ಎಪಿಎಲ್ ಕಾರ್ಡ್ ಪಡೆಯಲು ಇದ್ದಂತಹ ಎಲ್ಲ ಷರತ್ತುಗಳನ್ನು ರದ್ದುಪಡಿಸಿ ಕೇವಲ ಆಧಾರ್ ನಂಬರ್ ನೀಡುವ ಮೂಲಕ ಎಪಿಎಲ್ ಕಾರ್ಡ್ ಪಡೆಯಬಹುದು ಎಂದು ಅವರು ಹೇಳಿದರು

ಈ ಕಾರ್ಡ್‌ಗೆ ಹೆಚ್ಚುವರಿಯಾಗಿ ಹೆಸರುಗಳನ್ನು ಸೇರ್ಪಡೆ ಮಾಡಲು ಅಥವಾ ತೆಗೆಯಲು ಈ ಯೋಜನೆಯಡಿ ಅವಕಾಶ ಕಲ್ಪಿಸಲಾಗಿದೆ ಎಂದರು.

ಎಪಿಎಲ್ ಕಾರ್ಡ್ ಪಡೆಯಬಯಸುವರು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು www.ahara.kar.nic.in ಈ ವೈಬ್‌ಸೈಟ್‌ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ ಎಂದರು.

15 ದಿನಗಳಲ್ಲಿ ಬಿಪಿಎಲ್‌ಗೂ ಅರ್ಜಿ

ಬಿಪಿಎಲ್ ಪಡಿತರ ಕಾರ್ಡ್‌ಗಳನ್ನೂ ಆನ್‌ಲೈನ್ ಮುಖಾಂತರ ಪಡೆಯಲು ಅವಕಾಶ ಕಲ್ಪಿಸಿದ್ದು, ಇನ್ನು 15 ದಿನಗಳಲ್ಲಿ ಈ ಯೋಜನೆಗೆ ಚಾಲನೆ ದೊರೆಯಲಿದೆ. ಗ್ರಾಮೀಣ ಪ್ರದೇಶದ ಜನರು ಆಯಾ ಗ್ರಾಮ ಪಂಚಾಯ್ತಿಯಲ್ಲಿ, ನಗರ ಪ್ರದೇಶದ ವಾಸಿಗಳು ಬೆಂಗಳೂರು-1ನಲ್ಲಿ ಅರ್ಜಿ ಹಾಕಬಹುದು. ಜತೆಗೆ ನ್ಯಾಯಬೆಲೆ ಅಂಗಡಿಗಳಲ್ಲೂ ಆನ್‌ಲೈನ್ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲು ತೀರ್ಮಾನಿಸಲಾಗಿದೆ ಎಂದರು.

ಬಿಪಿಎಲ್ ಪಡಿತರ ಕಾರ್ಡ್ ಪಡೆಯಲು ಆಧಾರ್ ನಂಬರ್ ಜತೆಗೆ ಬಯೋಮೆಟ್ರಿಕ್ ನೀಡಬೇಕಾಗುತ್ತದೆ ಎಂದು ಹೇಳಿದರು.

ರಾಜ್ಯದಲ್ಲಿ ಸಧ್ಯದಲ್ಲೇ ಜಾರಿಗೆ ಬರಲಿರುವ ಕೇಂದ್ರ ಸರ್ಕಾರದ ಉಜ್ವಲ ಯೋಜನೆಯಡಿ ಅಡುಗೆ ಅನಿಲ ಸಂಪರ್ಕ ಪಡೆಯುವ ಫಲಾನುಭವಿಗಳಿಗೆ ಉಚಿತವಾಗಿ ಸ್ಟೌವ್ ನೀಡಲು ಸರ್ಕಾರ ತೀರ್ಮಾನಿಸಿದೆ ಎಂದು ಆಹಾರ ಮತ್ತು ನಾಗರೀಕ ಸರಬರಾಜು ಸಚಿವ ಯು.ಟಿ. ಖಾದರ್ ಇಂದಿಲ್ಲಿ ತಿಳಿಸಿದರು.

ಉಜ್ವಲ ಯೋಜನೆಯಡಿ ಫಲಾನುಭವಿಗಳಿಗೆ ಕನೆಕ್ಟರ್ ಮತ್ತು ರೆಗ್ಯುಲೇಟರ್‌ಗಳ ಜತೆಗೆ ಸ್ಟೌವ್‌ನ್ನು ಸಹ ನೀಡಲಾಗುವುದು. ಇದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಒಪ್ಪಿಗೆ ಸೂಚಿಸಿದ್ದಾರೆ ಎಂದರು.

ಉಜ್ವಲ ಯೋಜನೆಗೆ ಚಾಲನೆ ನೀಡಲು ಕೇಂದ್ರ ಪೆಟ್ರೋಲಿಯಂ ಸಚಿವರು ಸಧ್ಯದಲ್ಲೇ ಸಮಯ ನಿಗದಿ ಮಾಡಲಿದ್ದಾರೆ. ಅದಾದ ಬಳಿಕ ಫಲಾನುಭವಿಗಳಿಗೆ ಸ್ಟೌವ್ ಮತ್ತಿತರರ ಸೌಲಭ್ಯಗಳು ಸಿಗಲಿವೆ ಎಂದರು.

ಉಜ್ವಲ ಯೋಜನೆಯಡಿ ಎಲ್‌ಪಿಜಿ ಸಿಲಿಂಡರ್ ಪಡೆಯಲು ಈಗಾಗಲೇ 3 ಲಕ್ಷ ಅರ್ಜಿಗಳು ಬಂದಿವೆ ಎಂದರು.

Comments are closed.