ಶಕ್ತಿನಗರ (ರಾಯಚೂರು ಜಿಲ್ಲೆ): ಕಾಡ್ಲೂರಿನ ಖಾಸಗಿ ಶಾಲೆಯೊಂದರ ಶಿಕ್ಷಕಿಯೊಬ್ಬರು ಕಿರುಕುಳ ನೀಡಿದ ದುಷ್ಕರ್ಮಿಯೊಬ್ಬನಿಗೆ ಬೂಟಿನಿಂದ ಹೊಡೆದು ಬುದ್ಧಿ ಕಲಿಸಿದ ಘಟನೆ ಶನಿವಾರ ಮಧ್ಯಾಹ್ನ ನಡೆದಿದೆ.
ಶಿಕ್ಷಕಿಯು ಶಾಲೆ ಮುಗಿದ ನಂತರ ತಮ್ಮ ದ್ವಿಚಕ್ರ ವಾಹನದಲ್ಲಿ ಶಕ್ತಿನಗರಕ್ಕೆ ಬರುತ್ತಿದ್ದಾಗ ಈ ಘಟನೆ ನಡೆದಿದೆ.
ಶಿಕ್ಷಕಿಯ ವಾಹನವನ್ನು ಇಬ್ಬರು ದುಷ್ಕರ್ಮಿಗಳು ಲಾರಿಯಲ್ಲಿ ಹಿಂಬಾಲಿಸಿಕೊಂಡು ಬಂದರು. ಶಕ್ತಿನಗರ ಸಮೀಪಿಸುತ್ತಿದ್ದಂತೆ ಲಾರಿಯಿಂದ ಇಳಿದ ದುಷ್ಕರ್ಮಿಯೊಬ್ಬ ಶಿಕ್ಷಕಿಯನ್ನು ಅಡ್ಡಗಟ್ಟಿ, ಕೈಹಿಡಿದು ಎಳೆಯುಲು ಯತ್ನಿಸಿದ; ಆಗ ಅವರು ತಾವು ಧರಿಸಿದ ಬೂಟನ್ನು ಕಳಚಿ ದುಷ್ಕರ್ಮಿಗೆ ಹೊಡೆದಿದ್ದಾರೆ.
ಅಷ್ಟುಹೊತ್ತಿಗೆ ರಸ್ತೆಯಲ್ಲಿ ಹೋಗುತ್ತಿದ್ದ ಜನರು ಶಿಕ್ಷಕಿಯ ಬಳಿಗೆ ಬರತೊಡಗಿದರು. ಇದರಿಂದ ಹೆದರಿದ ದುಷ್ಕರ್ಮಿಯೂ ಶಿಕ್ಷಕಿಯ ಕಾಲಿಗೆ ಬಿದ್ದು, ಅಲ್ಲಿಂದ ಓಡಿಹೋದ.
ಅನತಿ ದೂರದಲ್ಲಿ ಲಾರಿ ನಿಲ್ಲಿಸಿಕೊಂಡಿದ್ದ ಚಾಲಕ ಕೂಡ ಜನರು ಸೇರುವುದನ್ನು ಕಂಡು ಲಾರಿ ಸಹಿತ ಸ್ಥಳದಿಂದ ಪರಾರಿಯಾದ.
‘ಮರಳು ಸಾಗಣೆ ಮಾಡುತ್ತಿದ್ದ ಲಾರಿಯಲ್ಲಿ ನನ್ನ ಬೈಕ್ ಹಿಂಬಾಲಿಸಿಕೊಂಡು ಬಂದ ದುಷ್ಕರ್ಮಿಗಳು ದಾರಿಯುದ್ದಕ್ಕೂ ಅವಾಚ್ಯವಾಗಿ ನಿಂದಿಸುತ್ತಿದ್ದರು. ಮದ್ಯಪಾನ ಮಾಡಿದ್ದ ವ್ಯಕ್ತಿಯೊಬ್ಬ ಕೈಹಿಡಿದು ಎಳೆಯಲು ಯತ್ನಿಸಿದಾಗ ಆತನ ಮುಖಕ್ಕೆ ಬೂಟಿನಿಂದ ಹೊಡೆದೆ’ ಎಂದು ಶಿಕ್ಷಕಿ ನಾಗವೇಣಿ ಪತ್ರಿಕೆಗೆ ತಿಳಿಸಿದರು.
ಈ ದುಷ್ಕರ್ಮಿಗಳ ಹೆಸರು, ವಿಳಾಸ ತಿಳಿದುಬಂದಿಲ್ಲ. ಪೊಲೀಸ್ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿಲ್ಲ.
Comments are closed.