ಕರ್ನಾಟಕ

ನಂಜನಗೂಡು, ಗುಂಡ್ಲುಪೇಟೆ ಉಪಚುನಾವಣೆಗೆ ಕಾಂಗ್ರೆಸ್ ನಿಂದ ರಣತಂತ್ರ

Pinterest LinkedIn Tumblr


ಬೆಂಗಳೂರು, ಜ. ೭ – ರಾಜ್ಯದ ಆಡಳಿತಾರೂಢ ಕಾಂಗ್ರೆಸ್ ಪಕ್ಷಕ್ಕೆ ಅಗ್ನಿಪರೀಕ್ಷೆಯೆಂದೇ ಹೇಳಲಾಗುತ್ತಿರುವ ನಂಜನಗೂಡು ಹಾಗೂ ಗುಂಡ್ಲುಪೇಟೆ ಉಪ ಚುನಾವಣೆಯ ಗೆಲುವಿಗೆ ಕಾಂಗ್ರೆಸ್ ಪಕ್ಷ ರಣತಂತ್ರವನ್ನು ರೂಪಿಸುತ್ತಿದ್ದು, ಖುದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಮುಂಚೂಣಿಯಲ್ಲಿ ನಿಂತು ಪಕ್ಷದ ಅಭ್ಯರ್ಥಿಯಯ ಗೆಲುವಿಗೆ ತಂತ್ರಗಳನ್ನು ಎಣೆಯುತ್ತಿದ್ದಾರೆ. ಈ ಎರಡೂ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಮಹಿಳಾ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಕಾಂಗ್ರೆಸ್ ಪಕ್ಷದಲ್ಲಿ ಚಿಂತನೆ ನಡೆದಿದೆ.
ಸಚಿವ ಮಹದೇವಪ್ರಸಾದ್ ಅವರ ಹಠಾತ್ ನಿಧನದಿಂದ ತೆರವಾಗಿರುವ ಗುಂಡ್ಲುಪೇಟೆ ಹಾಗೂ ಮಾಜಿ ಸಚಿವ ಶ್ರೀನಿವಾಸ್ ಪ್ರಸಾದ್ ಅವರ ರಾಜೀನಾಮೆಯಿಂದ ತೆರವಾಗಿರುವ ನಂಜನಗೂಡು ಈ ಎರಡೂ ಕ್ಷೇತ್ರಗಳ ಉಪ ಚುನಾವಣೆಗೆ ದಿನಾಂಕ ನಿಗದಿ ಘೋಷಣೆ ಬಾಕಿ ಇದೆ. ಈ ಚುನಾವಣೆ ಕಾಂಗ್ರೆಸ್ ಪಕ್ಷಕ್ಕೆ ಅದರಲ್ಲೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪ್ರತಿಷ್ಠೆ ಎನಿಸಿದೆ.
ಗುಂಡ್ಲುಪೇಟೆ ಕ್ಷೇತ್ರದಿಂದ ದಿವಂಗತ ಮಹದೇವಪ್ರಸಾದ್ ಅವರ ಪತ್ನಿ ಗೀತಾ ಅವರನ್ನು ಕಣಕ್ಕಿಳಿಸಲು ಕಾಂಗ್ರೆಸ್ ಮುಖಂಡರು ನಿರ್ಧರಿಸಿದ್ದು, ಗೀತಾ ಮಹದೇವಪ್ರಸಾದ್ ಸಹ ಚುನಾವಣಾ ರಾಜಕೀಯಕ್ಕೆ ಧುಮುಕಲು ಒಲವು ತೋರಿದ್ದಾರೆ ಎನ್ನಲಾಗಿದೆ. ದಿವಂಗತ ಮಹದೇವಪ್ರಸಾದ್ ಅವರು ರಾಜಕಾರಣದಲ್ಲಿದ್ದಾಗ ಅಷ್ಟೇನೂ ಆಸಕ್ತಿ ತೋರದೇ ಇದ್ದ ಗೀತಾ ಮಹದೇವಪ್ರಸಾದ್ ಅವರು ಪತಿಯ ಅಭಿಮಾನಿಗಳು, ಪಕ್ಷದ ಕಾರ್ಯಕರ್ತರ ಒತ್ತಡಕ್ಕೆ ಮಣಿದು ರಾಜಕಾರಣ ಪ್ರವೇಶಿಸಲು ಸಮ್ಮತಿಸಿದ್ದಾರೆ ಎನ್ನಲಾಗಿದೆ. ಹಾಗಾಗಿ ಗೀತಾ ಮಹದೇವಪ್ರಸಾದ್ ಅವರೇ ಗುಂಡ್ಲುಪೇಟೆ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗುವುದು ಬಹುತೇಕ ನಿಶ್ಚಿತ.
ಉಪ ಚುನಾವಣೆಯಲ್ಲಿ ಸ್ಪರ್ಧಿಸುವ ಕುರಿತು ಪ್ರತಿಕ್ರಿಯಿಸಿರುವ ಗೀತಾ ಮಹದೇವಪ್ರಸಾದ್‌ರವರು, ಸುತ್ತೂರು ಶ್ರೀಗಳು, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಪಕ್ಷದ ಹೈಕಮಾಂಡ್ ಒಪ್ಪಿದರೆ ಮಾತ್ರ ತಮ್ಮ ರಾಜಕಾರಣ ಪ್ರವೇಶ ಎಂದು ಸ್ಪಷ್ಟಪಡಿಸಿ, ಅನಿರೀಕ್ಷಿತವಾಗಿ ರಾಜಕಾರಣಕ್ಕೆ ಬರುವಂತಾಗಿದೆ. ಪತಿ ಮಹದೇವಪ್ರಸಾದ್‌ರವರ ಹಾದಿಯಲ್ಲೇ ನಡೆಯುವುದಾಗಿ ಹೇಳಿದ್ದಾರೆ.
ನಂಜನಗೂಡಿನಲ್ಲಿ ಶಾಸಕನ ನಾದಿನಿ ಅಭ್ಯರ್ಥಿ
ನಂಜನಗೂಡು ಉಪ ಚುನಾವಣೆಯಲ್ಲಿ ಅಭ್ಯರ್ಥಿಗಳ ಹುಡುಕಾಟದಲ್ಲಿದ್ದ ಕಾಂಗ್ರೆಸ್ ಪಕ್ಷ ಕೊನೆಗೂ ಅಭ್ಯರ್ಥಿಯ ಹುಡುಕಾಟದಲ್ಲಿ ಯಶಸ್ವಿಯಾಗಿದ್ದು, ಹುಣಸೂರಿನ ಕಾಂಗ್ರೆಸ್ ಶಾಸಕ ಪಿ. ಮಂಜುನಾಥ್‌ರವರ ಅಣ್ಣನ ಪತ್ನಿ ಹಾಗೂ ಮೈಸೂರು ಜಿಲ್ಲಾ ಪಂಚಾಯ್ತಿಯ ಮಾಜಿ ಅಧ್ಯಕ್ಷೆ ಡಾ. ಪುಷ್ಪಾ ಅಮರ್‌ನಾಥ್‌ರವರನ್ನು ಅಭ್ಯರ್ಥಿಯನ್ನಾಗಿಸುವ ಸಾಧ್ಯತೆ ಇದೆ.
ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಶಾಸಕ ಮಂಜುನಾಥ್ ಅವರ ಜತೆ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. ಎರಡೂ ಕ್ಷೇತ್ರಗಳಲ್ಲಿ ಮಹಿಳಾ ಅಭ್ಯರ್ಥಿಗಳನ್ನು ನಿಲ್ಲಿಸಿ ಮಹಿಳೆಯರ ಒಲವು ಗಳಿಸುವ ಜತೆಗೆ ಕಾಂಗ್ರೆಸ್ ಪಕ್ಷದ ಸಾಂಪ್ರದಾಯಿಕ ಮತಗಳಿಂದ ಚುನಾವಣೆ ಗೆಲ್ಲುವ ಲೆಕ್ಕಾಚಾರ ಮುಖ್ಯಮಂತ್ರಿ ಸಿದ್ದರಾಮಯ್ಯರವರದ್ದಾಗಿದೆ.
ನಂಜನಗೂಡು ಉಪ ಚುನಾವಣೆಯಲ್ಲಿ ಸಚಿವ ಡಾ. ಎಚ್.ಸಿ. ಮಹದೇವಪ್ಪ ಅವರ ಪುತ್ರ ಸುನೀಲ್ ಬೋಸ್ ಅಭ್ಯರ್ಥಿಯಾಗುತ್ತಾರೆ ಎಂಬ ಸುದ್ದಿಗಳಿತ್ತಾದರೂ ಸಚಿವ ಮಹದೇವಪ್ಪ ತಮ್ಮ ಪುತ್ರನ ಚುನಾವಣಾ ರಾಜಕೀಯಕ್ಕೆ ಒಪ್ಪಿಲ್ಲ ಎನ್ನಲಾಗಿದೆ. ಹಾಗಾಗಿ ಬಹುತೇಕ ಪುಷ್ಪಾ ಅಮರ್‌ನಾಥ್ ನಂಜನಗೂಡು ಮೀಸಲು ಕ್ಷೇತ್ರದ ಉಪ ಚುನಾವಣೆಯಲ್ಲಿ ಅಭ್ಯರ್ಥಿಯಾಗುವ ಸಾಧ್ಯತೆಗಳು ಹೆಚ್ಚು.

Comments are closed.